ಪಿರಿಯಾಪಟ್ಟಣ : ಪಟ್ಟಣದಲ್ಲಿ ಎರಡು ದಿನಗಳ ಕಾಲ ನಡೆದ 16 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗುವುದರ ಜೊತೆಗೆ ಸ್ಥಳೀಯ ಹಾಗೂ ಹೊರಗಿನಿಂದ ಆಗಮಿಸಿದ್ದ ಸಾಹಿತ್ಯಾಭಿಮಾನಿಗಳ ಪ್ರಶಂಸೆಗೆ ಪಾತ್ರವಾಯಿತು.

ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಟೀಕೆ ಟಿಪ್ಪಣಿಗಳು, ವಿರೋಧ ವ್ಯಕ್ತವಾಗುವುದು ಸಹಜ, ಇವೆಲ್ಲವನ್ನೂ ಮೀರಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುವಂತೆ ನಿಗಾ ವಹಿಸಿ ಪ್ರತಿ ಹಂತ ಹಂತದಲ್ಲೂ ಮಾಹಿತಿಗಳನ್ನು ಪಡೆದು ಯಶಸ್ವಿಯಾಗಲು ಬಹುಮುಖ್ಯ ಕಾರಣರಾದವರು ತಾಲ್ಲೂಕಿನ ಶಾಸಕ ಕೆ.ಮಹದೇವ್ ಹಾಗೂ ತಾಲ್ಲೂಕು ಮತ್ತು ಜಿಲ್ಲಾ ಕಸಾಪ ಸಮಿತಿಯವರು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಕಾರ್ಯಕ್ರಮದ ದಿನಾಂಕ ನಿಗದಿಯಾದಾಗಿನಿಂದ ಪೂರ್ವ ಸಿದ್ದತೆಗಳು ಹಾಗೂ ಸಮ್ಮೇಳನದ ರೂಪುರೇಶೆ ತಯಾರಿಸಿ ವಿವಿಧ ಸಮಿತಿಗಳನ್ನು ರಚಿಸಿ ಪ್ರತಿಯೊಬ್ಬರೂ ತಮಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಭಿನಂದಿತರ ವಿಷಯ ಹಾಗೂ ವೇದಿಕೆ ನಿರ್ವಹಣೆಯಲ್ಲಿನ ಕೊಂಚ ಮಟ್ಟದ ಯಡರು ತೊಡರು ಹೊರತುಪಡಿಸಿ ಮಿಕ್ಕೆಲ್ಲಾ ಕಾರ್ಯಕ್ರಮಗಳು ಸುಸೂತ್ರವಾಗಿ ಜರುಗಿದವು.
ಸಮ್ಮೇಳನದ ಧ್ವಜಾರೋಹಣ ಕಾರ್ಯಕ್ರಮದ ನಂತರ ಆರಂಭವಾದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ಥಬ್ಧ ಚಿತ್ರಗಳು, ವಿಶೇಷ ಮಂಗಳ ವಾದ್ಯಗಳು, ಪೂಜಾ ಕುಣಿತ, ಪೂರ್ಣ ಕುಂಭ ಹೊತ್ತ ಮಹಿಳೆಯರು, ಬ್ಯಾಂಡ್‌ಸೆಟ್ ನೊಂದಿಗೆ ಆಗಮಿಸಿದ ಶಾಲಾ ವಿದ್ಯಾರ್ಥಿಗಳು, ಗೊರವ ಕುಣಿತ, ಕಂಸಾಳೆ, ಕೋಲಾಟ, ಮತ್ತು ಮಹಿಳೆಯರ ಪಥ ಸಂಚಲನ ಗಮನ ಸೆಳೆಯಿತು. ಎರಡೂ ದಿನಗಳಲ್ಲಿ ನಡೆದ ವಿಚಾರ ಗೋಷ್ಠಿಗಳು, ಕವಿಗೋಷ್ಠಿ, ವಿಶೇಷ ಉಪನ್ಯಾಸ, ಸಮ್ಮೇಳನಾಧ್ಯಕ್ಷರೊಂದಿಗಿನ ಸಂವಾದ, ಕಾರ್ಯಕ್ರಮಗಳಲ್ಲಿನ ವಿಷಯಗಳು ಸಾಹಿತ್ಯಾಭಿಮಾನಿಗಳನ್ನು ಆಕರ್ಷಿಸಿ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದವು.
ಸಮ್ಮೇಳನದಲ್ಲಿ ಭಾಗವಹಿಸಿದ ಸಾಹಿತ್ಯಾಭಿಮಾನಿಗಳು ಹಾಗೂ ಗಣ್ಯರಿಗೆ ಅಚ್ಚುಕಟ್ಟಾದ ಉಪಾಹಾರ, ಊಟ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವಸತಿಗೆ ಎಲ್ಲೂ ಕುಂದು ಬಾರದಂತೆ ಎರಡೂ ದಿನಗಳ ಕಾಲ ಸುಲಲಿತವಾಗಿ ನಿರ್ವಹಿಸಿದ್ದು ಹಾಗೂ ಸ್ವಚ್ಚತೆಗೆ ಪ್ರಥಮ ಆದ್ಯತೆ ನೀಡಿ ನಿರ್ವಹಣೆ ಮಾಡಿದ್ದು ಪ್ರಶಂಸೆಗೆ ಪಾತ್ರವಾಯಿತು.
ಸಮ್ಮೇಳನ ಸ್ಥಳದಲ್ಲಿ ತೆರೆದಿದ್ದ ಪುಸ್ತಕ, ವಿವಿಧ ಸರ್ಕಾರಿ ಇಲಾಖೆಗೆಳ ಮಾಹಿತಿ, ಆಯುರ್ವೇದ ಔಷಧಿ, ಖಾದಿ ಉತ್ಪನ್ನಗಳ ಮಾರಾಟ ಸೇರಿದಂತೆ ವಿವಿಧ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಗಳು ಎರಡು ದಿನಗಳ ಕಾಲ ಭರ್ಜರಿ ವ್ಯಾಪಾರ ನಡೆಸಿದವು. ಹಾಗೂ ಪಾನಿಪುರಿ, ಐಸ್‌ಕ್ರೀಂ, ವಿವಿಧ ಬಗೆಯ ಹಣ್ಣುಗಳ ಮಾರಾಟಕ್ಕೂ ತೊಂದರೆಯಾಗದೆ ಹೆಚ್ಚಿನ ಮಟ್ಟದ ಆದಾಯವಾಗಿದೆ.
ಅಭಿನಂದಿತರ ವಿಚಾರವಾಗಿ ಕೆಲವರು ತಮಗೆ ಸರಿಯಾದ ಮಾಹಿತಿ ಹಾಗೂ ಆಹ್ವಾನ ನೀಡಿಲ್ಲವೆಂದು ಸಾಮಾಜಿಕ ಜಾಲತಾಣ ಹಾಗೂ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದು ಮತ್ತು ಕೊನೆಗಳಿಗೆಯಲ್ಲಿ ಹೊಸಬರುಗಳ ಹೆಸರುಗಳು ಪಟ್ಟಿಗೆ ಸೇರ್ಪಡೆಯಾಗಿದ್ದು ಅಚ್ಚರಿಯಾಗಿತ್ತು. ಕಾರ್ಯಕ್ರಮದಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷ ಗೊರಳ್ಳಿ ಜಗದೀಶ್ ದಂಪತಿಗಳನ್ನು ಸನ್ಮಾನಿಸುವಾಗ ದಂಪತಿಗಳು ಇತ್ತೀಚೆಗೆ ಅಪಘಾತದಲ್ಲಿ ಮೃತರಾದ ತಮ್ಮ ಮಕ್ಕಳನ್ನು ನೆನದು ಕಣ್ಣೀರಿಟ್ಟಾಗ ವೇದಿಕೆಯಲ್ಲಿದ್ದ ಗಣ್ಯರು ಹಾಗೂ ನೆರೆದಿದ್ದ ಪ್ರೇಕ್ಷಕರ ಕಣ್ಣಲ್ಲೂ ಸಹ ನೀರು ತುಂಬಿ ಬಂದಿತ್ತು.
ಎರಡೂ ದಿನಗಳ ಕಾಲ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಟ್ಟಣದ ಸಂಕಲ್ಪ ನೃತ್ಯಶಾಲೆ, ಗ್ರೀನ್‌ಕಿಡ್ಸ್ ನೃತ್ಯಶಾಲೆ, ಪುಷ್ಪ ವಿದ್ಯಾಸಂಸ್ಥೆ, ಆದಿಚುಂಚನಗಿರಿ ವಿದ್ಯಾಸಂಸ್ಥೆ, ಸರ್ಕಾರಿ ಪ್ರೌಢಶಾಲೆ ಅತ್ತಿಗೋಡು, ಬೆಟ್ಟದಪುರದ ಎಸ್.ಎಂ.ಎಸ್.ಪ್ರೌಢಶಾಲೆ, ಡಿಟಿಎಂಎನ್ ವಿದ್ಯಾಸಂಸ್ಥೆ, ಗಿರಿಜನ ಹಾಡಿ ಮಕ್ಕಳು, ರಾಜೇಶ್ವರಿ ಪ್ರೌಢಶಾಲೆ ಆವರ್ತಿ, ತಂಡದವರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದವು. ಸಮಾರೋಪ ಸಮಾರಂಭದ ನಂತರ ನಡೆಯಬೇಕಿದ್ದ ಪಟ್ಟಣದ ನಟನಂ ನೃತ್ಯ ಕಲಾಶಾಲೆ ಮಕ್ಕಳ ಭರತನಾಟ್ಯ ಎರಡು ಗಂಟೆಗಳ ಕಾಲ ವಿಳಂಬವಾಗಿ ಆರಂಭವಾದರೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಮೈಸೂರಿನ ಕೃ.ಪಾ.ಮಂಜುನಾಥ್ ಮತ್ತು ತಂಡದವರ ಗಮಕರೂಪಕ ಹಾಗೂ ಕಂದೇಗಾಲ ನಾಗೇಶ್ ತಂಡದವರ ಪುಟ್ಟಣ್ಣ ಕಣಗಾಲ್ ಚಿತ್ರಗಳ ಗೀತಗಾಯನ ಕಾರ್ಯಕ್ರಮಕ್ಕೆ ಪ್ರೇಕ್ಷಕರ ಕೊರತೆ ಕಂಡುಬAದರೂ ಕಾರ್ಯಕ್ರಮ ಸೊಗಸಾಗಿ ಮೂಡಿಬಂದು ಶಿಳ್ಳೆ ಗಿಟ್ಟಿಸಿತು. ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ ರವರ ಗೀತ ಗಾಯನ ಹಾಗೂ ತಾಲ್ಲೂಕು ಅಧ್ಯಕ್ಷ ಗೊರಳ್ಳಿ ಜಗದೀಶ್ ಕಾರ್ಯಕ್ರಮದ ಕೊನೆಯಲ್ಲಿ ಉಳಿದಿದ್ದ ಕೆಲ ಸಂಘಟಕರೊAದಿಗೆ ವೇದಿಕೆಯೇರಿ ಚಲನಚಿತ್ರ ಗೀತೆಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

Leave a Comment

Your email address will not be published. Required fields are marked *

error: Content is protected !!
Scroll to Top