ಶಾಸಕರಾದ ನಂತರ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಂಭಾAಗಣದಲ್ಲಿ ನಡೆದ ಮೊದಲ ಕೆಡಿಪಿ ಸಭೆಯಲ್ಲಿ ತಮ್ಮ ಇಲಾಖೆಗಳ ಕಾರ್ಯವೈಖರಿ ಬಗ್ಗೆ ಸರಿಯಾಗಿ ಮಾಹಿತಿ ನೀಡದ ಹಲವು ಅಧಿಕಾರಿಗಳಿಗೆ ಸೂಚನೆ ನೀಡಿ ಮಾತನಾಡಿದರು. ಸಾಮರಸ್ಯದಿಂದ ಕೆಲಸ ಮಾಡಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಉತ್ತಮ ಬಾಂದವ್ಯವಿರಬೇಕು. ಇಲ್ಲವಾದಲ್ಲಿ ಪ್ರಗತಿ ಸಾಧ್ಯವಾಗುವುದಿಲ್ಲ. ಸಭೆಯಲ್ಲಿ ತಪು ಮಾಹಿತಿ ನೀಡಲು ಆಸ್ಪದವಿಲ್ಲ ಆ ವರ್ತನೆ ಕಂಡು ಬಂದರೆ ಸೂಕ್ತ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದರು.
ಕೆಲವು ಅಧಿಕಾರಿಗಳ ವರ್ತನೆ ನೋಡಿದರೆ ಮಾಜಿ ಶಾಸಕ ಕೆ.ವೆಂಕಟೇಶ್ ಮಾತು ಕೇಳಿ ನನಗೆ ಸಹಕಾರ ನೀಡದೆ ಕೆಟ್ಟ ಹೆಸರು ತರುವಂತೆ ಕೆಲಸ ನಿರ್ವಹಿಸುತ್ತಿರುವ ಅನುಮಾನ ಮೂಡುತ್ತಿದೆ ನಿಮಗೆ ನನ್ನೊಂದಿಗೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ತಾಲ್ಲೂಕಿನಿಂದ ಬೇರೆಡೆ ಹೊರಡಿ ಎಂದು ತಾಕೀತು ಮಾಡಿದರು.
ಕಾವೇರಿ ನೀರಾವರಿ ನಿಗಮದ ಎಸ್‌ಇ ಸಭೆಗೆ ಗೈರಾಗಿರುವುದನ್ನು ಕಂಡು ಎಇಇ ರಾಜೇಗೌಡ ಅವರನ್ನು ಪ್ರಶ್ನಿಸಿದಾಗ ಅವರು ಇನ್ನು ಅರ್ಧ ಗಂಟೆಯಲ್ಲಿ ಸಭೆಗೆ ಬರಲಿದ್ದಾರೆ ಎಂದು ಮಾಹಿತಿ ನೀಡಿದರೂ ತೃಪ್ತರಾಗದ ಶಾಸಕ ಸಭೆಗೆ ಬರದಿದ್ದಲ್ಲಿ ಅಮಾನತು ಪಡಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕರಡಿಲಕ್ಕನ ಕೆರೆ ಏತ ನೀರಾವರಿ ಯೋಜನೆಯಲ್ಲಿ ಸರಿಯಾಗಿ ನೀರು ಬಿಡುತ್ತಿಲ್ಲವೇಕೆ ಎಂದು ಎಂಜಿನಿಯರ್ ರಾಜೇಗೌಡರನ್ನು ಪ್ರಶ್ನಿಸಿದರು. ನೀನು ಹೇಳುವ ಕಥೆ ಕೇಳಲು ನಾನು ಕಿವಿಗೆ ಹೂ ಮುಡಿದು ಕುಳಿತಿಲ್ಲ ನನಗೆ ಅಗೌರವ ತೋರಿಸಿದ್ದೀಯ ಈ ವರ್ಷ ಸಾಕಷ್ಟು ಮಳೆಯಾಗಿದ್ದರೂ ನೀರು ಬಿಡಲು ನಿನಗೆ ಏನು ತೊಂದರೆ ಹೇಳು ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿ ವಿದ್ಯುತ್ ಸಮಸ್ಯೆಯಿಂದ ನೀರು ಹರಿಸಲು ಸಾಧ್ಯವಾಗಿಲ್ಲ ಇನ್ನು ಮುಂದೆ ಆರೀತಿ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಎಂಜಿನಿಯರ್ ರಾಜೇಗೌಡ ಹೇಳಿದರು. ನೆರೆ ಹಾವಳಿಯಿಂದ ಆಗಿರುವ ಹಾನಿಯ ಅಂದಾಜು ಮಾಡಿ ಕಾಮಗಾರಿ ಕೈಗೊಳ್ಳಲು ಹಾರಂಗಿ ನಿಗಮದ ಎಂಡಿ ಬಳಿ ಖುದ್ದು ಮಾತನಾಡಿ ಅನುಮತಿ ಪಡೆದಿದ್ದರೂ ಇದುವರೆಗೂ ಕ್ರಿಯಾಯೋಜನೆ ತಯಾರಿಸಲು ನನ್ನ ಬಳಿ ಬಂದಿಲ್ಲವೇಕೆ ಎಂದು ನಿಗದ ಎಂಜಿನಿಯರ್‌ಗೆ ಸಹ ಶಾಸಕರು ತರಾಟೆಗೆ ತೆಗೆದು ಕೊಂಡರು. ಶಾಸಕನಾಗಿ 5 ತಿಂಗಳು ಕಳೆದಿದ್ದರೂ ಒಮ್ಮೆಯೂ ಇಲಾಖೆಯ ಅಭಿವೃದ್ಧಿಯ ಬಗ್ಗೆ ಒಮ್ಮೆ ಸಹ ಭೇಟಿ ಮಾಡಿಲ್ಲವೇಕೆ ಎಂದು ಕೋಪಗೊಂಡರು.
ಇತ್ತೀಚೆಗೆ ಗ್ರಾಮ ಸಂದರ್ಶನ ನಡೆಸಿದ ವೇಳೆ ಗ್ರಾಮಗಳ ಕುಂದುಕೊರತೆ ಬಗ್ಗೆ ಗ್ರಾಮಸ್ಥರು ನೀಡಿದ ದೂರುಗಳ ಬಗ್ಗೆ ಯಾವ ಕ್ರಮಕೈಗೊಳ್ಳಲಾಗಿದೆ ಎಂದು ಶಿರಸ್ತೇದಾರ್ ಪ್ರಕಾಶ್ ರಿಂದ ವಿವರಣೆ ಕೇಳಿದಾಗ ನನ್ನ ಬಳಿ ಈ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದ ಪ್ರಕಾಶ್ ದಾಖಲೆ ನೋಡಿ ವಿವರಣೆ ನೀಡುವುದಾಗಿ ತಿಳಿಸಿದರು. ನೆರೆ ಹಾವಳಿಯಿಂದ ಮನೆ ಕಳೆದುಕೊಂಡವರಿಗೆ ಅಸಮರ್ಪಕವಾಗಿ ಪರಿಹಾರ ನೀಡಲಾಗಿದೆ ಏಕೆ ಎಂದು ಪ್ರಶ್ನಿಸಿದರು. ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ ಪರಿಹಾರ ವಿತರಿಸಲಾಗಿದೆ ಎಂದು ಶಿರಸ್ತೇದಾರ್ ಸಮಜಾಯಿಷಿ ನೀಡಿದರು. ಈಗಾಗಲೆ 115 ಮನೆಗಳಿಗೆ ಪರಿಹಾರ ವಿತರಿಸಲಾಗಿದೆ ಇನ್ನುಳಿದ ಅರ್ಜಿಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ವಿವರಣೆ ನೀಡಿದರು.
ಪುರಸಭೆಯಿಂದ ಕೈಗೆತ್ತಿಕೊಂಡಿರುವ ಒಳಚರಂಡಿ ಕಾಮಗಾರಿ ಯಾವ ಹಂತದಲ್ಲಿದೆ ಎಂದು ಶಾಸಕರು ಪ್ರಶ್ನಿಸಿದಾಗ ಪುರಸಭೆ ಎಂಜಿನಿಯರ್ ದೀಪಕ್ ಶೆಟ್ಟಿ ಈಗಾಗಲೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು 57.90 ಕೋಟಿ ಹಣ ಕಾಯ್ದಿರಿಸಲಾಗಿದೆ ಎಂದು ಮಾಹಿತಿ ನೀಡಿದರು. ತಕ್ಷಣ ಕಾಮಗಾರಿಗೆ ಚಾಲನೆ ನೀಡುವಂತೆ ಸೂಚಿಸಿದರು.
ಸಭೆಯಲ್ಲಿ ಕೃಷಿ ಇಲಾಖೆ, ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಾರಿಗೆ ಇಲಾಖೆ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಮಹಿಳ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಸಭೆಯಲ್ಲಿ ತಾ.ಪಂ.ಅಧ್ಯಕ್ಷೆ ಕೆ.ಆರ್.ನಿರೂಪಾ, ಉಪಾಧ್ಯಕ್ಷೆ ಜಯಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಈರಯ್ಯ, ಜಿ.ಪಂ.ಸದಸ್ಯರಾದ ವಿ.ರಾಜೇಂದ್ರ, ಕೆ.ಎಸ್.ಮಂಜುನಾಥ್, ಮಣಿ, ರುದ್ರಮ್ಮ, ತಾ.ಪಂ.ಇಒ ಡಿ.ಸಿ.ಶ್ರುತಿ, ತಹಶೀಲ್ದಾರ್ ಸೂರಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.