ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂಜೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಕನ್ನಡ ನಾಡು ನುಡಿಯ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಹೊಂದಿರಬೇಕಿದ್ದು ಸಮ್ಮೇಳನವು ಅತ್ಯಂತ ಯಶಸ್ವಿಯಾಗಿ ತಾಲೂಕಿನ ಗೌರವ ಘನತೆಗಳನ್ನು ಎತ್ತಿಹಿಡಿಯುವ ದಿಕ್ಸೂಜಿಯಾಗಬೇಕು, ಸಮ್ಮೇಳನದ ಯಶಸ್ಸಿನ ಕೀರ್ತಿ ನನ್ನೊಬ್ಬನಿಂದ ಮಾತ್ರ ಸಾಧ್ಯವಿಲ್ಲ ಪ್ರತಿಯೊಬ್ಬರೂ ಸಹ ತಮ್ಮ ಕೈಲಾದ ಸಹಾಯ ಮಾಡಿ ಸಮ್ಮೇಳನಕ್ಕೆ ಬೆನ್ನುಲುಬಾಗಿ ನಿಂತಾಗ ಯಶಸ್ಸಿನ ಕೀರ್ತಿ ತಾಲ್ಲೂಕಿನ ಜನತೆಗೆ ಸಲ್ಲುತ್ತದೆ ಎಂದರು.
ತಾಲ್ಲೂಕಿನ ಪ್ರತಿ ಗ್ರಾ.ಪಂ.ಗಳ ಪಿಡಿಒಗಳು ತಮ್ಮ ವ್ಯಾಪ್ತಿಯ ಹಳ್ಳಿಗಳಲ್ಲಿ ಸಮ್ಮೇಳನ ಕುರಿತಂತೆ ಪ್ರಚಾರ ಮಾಡಿ ಪ್ರತಿ ಹಳ್ಳಿಗಳಿಂದಲೂ ಸಾರ್ವಜನಿಕರು ಸಮ್ಮೇಳನಕ್ಕೆ ಆಗಮಿಸುವಂತೆ ನಿಗಾ ವಹಿಸಬೇಕೆಂದು ಕರೆ ನೀಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ, ಸಮ್ಮೇಳನದಲ್ಲಿ ಗೋಷ್ಠಿಗಳು, ಮೆರವಣಿಗೆ, ಆಹಾರಮೇಳ, ಪುಸ್ತಕಮೇಳ, ವಸ್ತುಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಪ್ರತಿಯೊಬ್ಬರೂ ಈಗಿನಿಂದಲೇ ವಿವಿಧ ಸಮಿತಿಗಳ ಪ್ರಚಾರಕ್ಕೆ ತಯಾರಾಗಿ ಸಮ್ಮೇಳನವನ್ನು ಹಬ್ಬದಂತೆ ಸಂಭ್ರಮಿಸಬೇಕು, ಸಮ್ಮೇಳನವು ಕೇವಲ ಮನೆಯ ಹಬ್ಬವಾಗದೆ ರಾಜ್ಯದಲ್ಲಿಯೇ ಹೆಸರುವಾಸಿಯಾಗಿರುವ ಮೈಸೂರು ಜಿಲ್ಲೆಗೆ ಕೀರ್ತಿ ತರುವಂತಿರಬೇಕು ಎಂದರು.
ಸಭೆಯಲ್ಲಿ ತಾಲ್ಲೂಕು ಕಸಾಪ ಗೌರವಾಧ್ಯಕ್ಷ ರಾವಂದೂರಿನ ಮುರುಘಾ ಮಠದ ಮೋಕ್ಷಪತಿ ಸ್ವಾಮೀಜೀ ಮಾತನಾಡಿ 103 ವರ್ಷಗಳ ಇತಿಹಾಸವಿರುವ ಸಾಹಿತ್ಯ ಪರಿಷತ್ತಿಗೆ ಸಮ್ಮೇಳನಗಳು ಯಶಸ್ಸಿನ ಸೂತ್ರವಾಗಿದ್ದು, ನಾವೆಲ್ಲರೂ ಕನ್ನಡ ನಾಡುನುಡಿ ಅಭಿಮಾನ ಬೆಳೆಸಿಕೊಂಡು ನಮ್ಮದು ಎಂಬ ಭಾವನೆಯಿಂದ ಕೆಲಸ ಮಾಡಬೇಕಿದೆ ಎಂದರು.
ತಾಲ್ಲೂಕು ಕಸಾಪ ಅಧ್ಯಕ್ಷ ಗೊರಳ್ಳಿ ಜಗದೀಶ್ ಮಾತನಾಡಿ, ಸಮ್ಮೇಳನದ ಯಶಸ್ಸು ಒಬ್ಬರಿಂದ ಮಾತ್ರ ಸಾಧ್ಯವಿಲ್ಲ, ಪ್ರತಿಯೊಬ್ಬರೂ ತಮಗೆ ವಹಿಸಿದ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದಾಗ ಮಾತ್ರ ಹೊರಗಿನಿಂದ ಆಗಮಿಸಿದ ಸಾಹಿತ್ಯ ಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗಲು ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭ ತಾಲ್ಲೂಕು ಕಸಾಪ ಭವನಕ್ಕೆ ನಿವೇಶನ ಕೋರಿ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕೆ.ಮಹದೇವ್ ಶೀಘ್ರದಲ್ಲಿಯೇ ಪಟ್ಟಣದಲ್ಲಿ ಜಾಗ ಗುರುತಿಸಿ ಕಸಾಪ ಭವನ ನಿರ್ಮಿಸಲಾಗುವ ಭರವಸೆ ನೀಡಿದರು.
ಅಧಿಕಾರಿಗಳ ವಿರುದ್ಧ ಗರಂ : ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಗೈರುಹಾಜರಾದ ವಿವಿಧ ಸರ್ಕಾರಿ ಅಧಿಕಾರಿಗಳಿಗೆ ನೊಟೀಸ್ ನೀಡಿ ಮುಂದಿನ ಸಭೆಯಲ್ಲಿ ಹಾಜರಾಗುವಂತೆ ತಾ.ಪಂ. ಇಒ ರವರಿಗೆ ಶಿರಸ್ತೇದಾರ್ ರವರಿಗೆ ಸೂಚಿಸಿದ ಶಾಸಕರು ಅಧಿಕಾರಿಗಳ ನಿರ್ಲಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಮತ್ತೆ ಸಭೆ : ಸೋಮವಾರ ಗೈರು ಹಾಜರಾಗಿದ್ದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಮಂಗಳವಾರ ಮತ್ತೆ ಸಭೆ ಕರೆದು ಪ್ರತಿಯೊಬ್ಬ ಇಲಾಖಾಧಿಕಾರಿಗಳು ಸಮ್ಮೇಳನದ ಯಶಸ್ಸಿಗೆ ಸಹಕರಿಸುವಂತೆ ಶಾಸಕ ಕೆ.ಮಹದೇವ್ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ನಾಗರಾಜ್, ತಾ.ಪಂ.ಅಧ್ಯಕ್ಷೆ ಕೆ.ಆರ್.ನಿರೂಪ, ತಾ.ಪಂ.ಇಒ ಡಿ.ಸಿ.ಶೃತಿ, ಪದಾಧಿಕಾರಿಗಳಾದ ಅಂಬ್ಲಾರೆಬಸವೇಗೌಡ, ಟಿ.ಎಸ್.ಹರೀಶ್, ಕಗ್ಗುಂಡಿರಾಜು, ಕರವೇಗಿರೀಶ್, ಗುರುದತ್, ಶಿರಸ್ಥೆದಾರ್ ಪ್ರಕಾಶ್ ಹಾಗೂ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.