ಪಟ್ಟಣದ ಪುಷ್ಪ ವಿದ್ಯಾಸಂಸ್ಥೆ ಆವರಣದಲ್ಲಿ ಶನಿವಾರ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ ಮೈಸೂರು, ಬೆಂಗಳೂರು, ಮಂಗಳೂರು, ಸೇರಿದಂತೆ ವಿವಿದೆಡೆಯ 110 ಕ್ಕೂ ಹೆಚ್ಚು ಉದ್ಯೋಗ ಕಂಪನಿಗಳು ಭಾಗವಹಿಸಿದ್ದವು, 3445 ಮಂದಿ ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡು 1110 ಮಂದಿ ಸಂದರ್ಶನದಲ್ಲಿ ಆಯ್ಕೆಯಾಗಿ 910 ಮಂದಿ ತರಬೇತಿಗೆ ಆಯ್ಕೆಯಾಗಿ ಕೆಲ ಕಂಪನಿಗಳು ಸ್ಥಳದಲ್ಲಿಯೇ ನೇಮಕಾತಿ ಪತ್ರ ವಿತರಿಸುತ್ತಿದ್ದುದು ವಿಶೇಷವಾಗಿತ್ತು.
ಶಾಸಕ ಕೆ.ಮಹದೇವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಉದ್ಯೋಗಕ್ಕಾಗಿ ಹಲವಾರು ಮಂದಿ ಪ್ರತಿನಿತ್ಯ ನನ್ನ ಬಳಿ ಬಂದು ಮನವಿ ಮಾಡುತ್ತಿದ್ದುದನ್ನು ಮನಗಂಡು ಸ್ವಲ್ಪಮಟ್ಟಿನ ನಿರುದ್ಯೋಗ ಸಮಸ್ಯೆಯನ್ನಾದರೂ ನಿವಾರಿಸುವ ನಿಟ್ಟಿನಲ್ಲಿ ಉದ್ಯೋಗದಾತ ಸಂಸ್ಥೆಯ ಮುಖ್ಯಸ್ಥರಾದ ರುಕ್ಮಾಂಗದ ಅವರೊಂದಿಗೆ ಚರ್ಚಿಸಿ ತಾಲ್ಲೂಕಿನ ಪ್ರಪ್ರಥಮ ಬಾರಿಗೆ ಮೇಳ ಆಯೋಜಿಸಲಾಯಿತು. ನಿರೀಕ್ಷೆಗೂ ಮೀರಿ ಅಭ್ಯರ್ಥಿಗಳು ಹಾಜರಿರುವುದನ್ನು ನೋಡಿ ಸಂತಸವಾಗಿದೆ, ಉದ್ಯೋಗ ಪಡೆದುಕೊಂಡವರು ಪ್ರಾಮಾಣಿಕರಾಗಿ ತಮ್ಮ ಹುದ್ದೆಯನ್ನು ನಿಭಾಯಿಸಿ ಯಶಸ್ಸುಗಳಿಸುವಂತೆ ಶುಭ ಕೋರಿದರು.
ಮೈಮೂಲ್ ನಿರ್ಧೇಶಕ ಪಿ.ಎಂ.ಪ್ರಸನ್ನ ಮಾತನಾಡಿ ಈ ಮೇಳದ ಮುಖಾಂತರ ಉದ್ಯೋಗ ಸೃಷ್ಟಿಸಿದ್ದು ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿಯೇ ಕಾರ್ಖಾನೆಗಳನ್ನು ತೆರೆದು ಸ್ಥಳೀಯವಾಗಿ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿದ್ದು ಎಲ್ಲರೂ ಸಹಕರಿಸುವಂತೆ ಕೋರಿದರು.
ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಿದರು. ನಂತರ ಮಾತನಾಡಿದ ಅವರು ಈಗಾಗಲೇ ದೇಶದಾದ್ಯಂತ ನಿರುದ್ಯೋಗ ಸಮಸ್ಯೆ ಹೆಚ್ಚು ಎಂಬ ಕಲ್ಪನೆ ಮೂಡುತ್ತಿದೆ. ತಮ್ಮ ಮಕ್ಕಳು ಸರ್ಕಾರಿ ಸಂಸ್ಥೆಯಲ್ಲಿಯೇ ಕೆಲಸ ನಿರ್ವಹಿಸಬೇಕು ಎಂಬ ಆಸೆಯನ್ನು ಪೋಷಕರು ದೂರಮಾಡಿ ಸಿಕ್ಕಂತಹ ಅವಕಾಶಗಳನ್ನು ಬಳಸಿಕೊಂಡು ಸಾಧನೆಯ ಗುರಿ ತಲುಪಬೇಕು. ಖಾಸಗಿ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿ ರಾಷ್ಟçಮಟ್ಟದಲ್ಲಿ ಹೆಸರು ಮಾಡಿರುವ ಹಲವರು ಲಕ್ಷಾಂತರ ಮಂದಿಗೆ ಉದ್ಯೋಗ ನೀಡುತ್ತಿದ್ದು ನಾವೆಲ್ಲರೂ ಕೆಲಸದ ಕೀಳರಿಮೆಯನ್ನು ಬಿಟ್ಟು ಒಂದೇ ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಉದ್ಯೋಗದಲ್ಲಿ ವಿಫುಲ ಅವಕಾಶವಿದ್ದು ಜೀವನದಲ್ಲಿನ ಅಡೆತಡೆಗಳನ್ನು ಮೀರಿ ನಿರ್ದಿಷ್ಟ ಹೆಜ್ಜೆ ಇಟ್ಟಾಗ ಮಾತ್ರ ಗುರಿ ಸಾಧಿಸಬಹುದು ಎಂದರು.
ಉದ್ಯೋಗಮೇಳದಲ್ಲಿ ಭಾಗವಹಿಸಿದ್ದ ಕಂಪನಿಗಳ ಮುಖ್ಯಸ್ಥರನ್ನು ಶಾಸಕ ಕೆ.ಮಹದೇವ್ ಸನ್ಮಾನಿಸಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಮೇಳದ ನಿರ್ವಹಣೆ ಹೊತ್ತು ಅಭ್ಯರ್ಥಿಗಳಿಗೆ ಮಾಹಿತಿ ನೀಡಿ ಸೌಕರ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಭಾಗವಹಿಸಿದ್ದ ಸುಮಾರು 5 ಸಾವಿರ ಮಂದಿಗೆ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.
ಶಾಸಕ ಕೆ.ಮಹದೇವ್ ಹಾಗು ಅವರ ಪುತ್ರ ಮೈಮೂಲ್ ನಿರ್ದೇಶಕ ಪಿ.ಎಂ.ಪ್ರಸನ್ನ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರುಗಳೊAದಿಗೆ ಮೇಳದ ಸ್ಥಳದಲ್ಲಿ ಕೊನೆಯವರೆಗೂ ಹಾಜರಿದ್ದು ಮೇಳದ ಯಶಸ್ಸಿಗೆ ಶ್ರಮಿಸಿದರು.