ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀ ಗಳು ಶೀಘ್ರ ಗುಣಮುಖರಾಗಲೆಂದು ಕೋಟ್ಯಾಂತರ ಭಕ್ತಾದಿಗಳು ಹಾಗೂ ಶಿಷ್ಯವೃಂದದ ಪ್ರಾರ್ಥನೆ ಕೊನೆಗೂ ಫಲಿಸಲಿಲ್ಲ.
ಭಾನುವಾರ ಸಂಜೆ ತಾಲ್ಲೂಕು ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಪಟ್ಟಣದ ಅಧಿದೇವತೆಗಳಾದ ಮಸಣೀಕಮ್ಮ ಹಾಗೂ ಕನ್ನಂಬಾಡಿಯಮ್ಮ ದೇವಾಲಯ ಸೇರಿದಂತೆ ಬಸವನಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಈ ಸಂದರ್ಭ ಶಾಸಕ ಕೆ.ಮಹದೇವ್ ಸಹ ಹಾಜರಿದ್ದು ಪ್ರಾರ್ಥಿಸಿದ್ದರು.
ಶ್ರೀ ಗಳ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಕೆ.ಮಹದೇವ್ ಪ್ರತಿಕ್ರಿಯಿಸಿ ಶಿಕ್ಷಣಕ್ಕೆ ತಮ್ಮನ್ನು ತಾವು ಮುಡುಪಾಗಿಟ್ಟುಕೊಂಡು ಕೋಟ್ಯಾಂತರ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ಹಾಗೂ ದಾಸೋಹ ನೆರವೇರಿಸುತ್ತಿದ್ದ ಶ್ರೀಗಳ ಸಾಧನೆ ವಿಶ್ವಕ್ಕೇ ಮಾದರಿಯಾಗಿದ್ದು ಅವರ ನಿಧನ ಅತೀವ ದು:ಖ ತಂದಿದೆ ಎಂದರು.
ಮಾಜಿ ಶಾಸಕ ಕೆ.ವೆಂಕಟೇಶ್ ಪ್ರತಿಕ್ರಿಯಿಸಿ ಜಾತಿ, ಮತ, ಬೇಧ ಭಾವವೆನ್ನದೆ ಸರ್ವರನ್ನೂ ಸಮನಾಗಿ ಕಂಡು ತ್ರಿವಿಧ ದಾಸೋಹಿ ಎಂದು ಪ್ರಖ್ಯಾತರಾಗಿದ್ದ ಶ್ರೀ ಗಳ ನಿಧನ ನಾಡಿಗೆ ತುಂಬಲಾರದ ನಷ್ಟವಾಗಿದೆ, ತಾಲ್ಲೂಕು ಕಾಂಗ್ರೆಸ್ ಪಕ್ಷದ ವತಿಯಿಂದ ಜ.22 ರ ಬೆಳಿಗ್ಗೆ 11 ಗಂಟೆಗೆ ಪಕ್ಷದ ಕಛೇರಿಯಲ್ಲಿ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದರು.
ಮಾಜಿ ಶಾಸಕ ಹಾಗೂ ವೀರಶೈವ ಲಿಂಗಾಯತ ಹಿತರಕ್ಷಣಾ ಸಮಿತಿ ಮೈಸೂರು ವಿಭಾಗೀಯ ಗೌರವಾಧ್ಯಕ್ಷ ಹೆಚ್.ಸಿ.ಬಸವರಾಜ್ ಪ್ರತಿಕ್ರಿಯಿಸಿ ದಣಿವರಿಯದ ಹಾಗೆ ಕೊನೆಗಾಲದ ವರೆಗೂ ಶಿಕ್ಷಣಕ್ಕೆ ಒತ್ತು ನೀಡಿ ಮಠದ ಮುಖಾಂತರ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ನೆರವೇರಿಸುತ್ತಿದ್ದ ಶ್ರೀ ಗಳ ಕಾಯಕ ಅಪ್ರತಿಮವಾದದ್ದು, ಅವರ ನಿಧನ ವೀರಶೈವ ಲಿಂಗಾಯತ ಸಮಾಜವಷ್ಟೇ ಅಲ್ಲದೆ ಜಾತಿ ಬೇಧ ಭಾವ ಎನ್ನದೆ ಹೊಂದಿರುವ ಅವರ ಅಸಂಖ್ಯಾತ ಶಿಷ್ಯ ವರ್ಗಕ್ಕೆ ದು:ಖ ತರಿಸುವ ವಿಚಾರವಾಗಿದೆ, ಮುಂದಿನ ದಿನಗಳಲ್ಲಾದರೂ ಕೇಂದ್ರ ಸರ್ಕಾರ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಲಿ ಎಂದು ಆಶಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಮಾಜದವರು ಹಾಗೂ ವಿವಿಧ ಸಮಾಜಗಳ ಮುಖಂಡರು ಮತ್ತು ಜನಪ್ರತಿನಿಧಿಗಳು, ಸಾರ್ವಜನಿಕರು ಮೌನಾಚರಣೆ ನಡೆಸಿ ಸಂತಾಪ ಸೂಚಿಸಿದರು.
ತಾಲ್ಲೂಕಿನ ವಿವಿದೆಡೆ ಶ್ರೀ ಗಳ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.