ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದರೂ ತಾಲ್ಲೂಕಿನ ಜನತೆ ಪ್ರಚಾರಕ್ಕೆ ಓಗೊಡದೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದರಿ0ದ ಪ್ರಚಾರದ ಕಾವು ಅಷ್ಟಾಗಿ ಬಿಸಿ ಮುಟ್ಟಿಲ್ಲ, ಬಿಜೆಪಿ ಅಭ್ಯರ್ಥಿ ಸಂಸದ ಪ್ರತಾಪ್ ಸಿಂಹ ಪರ ಘಟಾನುಘಟಿ ನಾಯಕರುಗಳು ಕ್ಷೇತ್ರ ಸುತ್ತಿ ಪ್ರಚಾರ ನಡೆಸಿದ್ದು, ಮೈತ್ರಿ ಪಕ್ಷದ ಕಾಂಗ್ರೆಸ್ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಪರ ಸ್ಥಳೀಯ ನಾಯಕರುಗಳನ್ನು ಹೊರತು ಪಡಿಸಿದರೆ ದೊಡ್ಡ ಮಟ್ಟದ ನಾಯಕರುಗಳ ಆಗಮನವಾಗದೆ ಚುನಾವಣ ಕಾವು ಅಬ್ಬರವನ್ನು ಕಳೆದುಕೊಂಡಿರುವುದು ಮೇಲ್ನೋಟಕ್ಕೆ ಕ್ಷೇತ್ರದಾದ್ಯಂತ ಕಂಡುಬರುತ್ತಿದೆ.

ಜಿದ್ದಾಜಿದ್ದಿಯ ರಾಜಕೀಯ ಇತಿಹಾಸಕ್ಕೆ ಸಾಕ್ಷಿಯಾಗಿರುವ ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಪರಸ್ಪರ ಎದುರಾಳಿಗಳಾಗುತ್ತಿದ್ದವು, ಬಿಜೆಪಿ ಪಕ್ಷದ ಸಾಧನೆ ಲೋಕಸಭಾ ಚುನಾವಣೆ ಹೊರತುಪಡಿಸಿ ಮಿಕ್ಕೆಲ್ಲಾ ಸಂದರ್ಭ ಕಳಪೆಯಾಗಿದೆ. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಸರ್ಕಾರ ರಚಿಸಿರುವುದರಿಂದ ಪ್ರತಿ ಚುನಾವಣೆಗಳಲ್ಲೂ ಹಾವು ಮುಂಗುಸಿಯAತೆ ಪರಸ್ಪರ ಎದುರಾಳಿಯಾಗುತ್ತಿದ್ದ ಒಂದು ಕಾಲದ ಗುರು ಶಿಷ್ಯ ರಂತಿದ್ದ ಜೆಡಿಎಸ್ ಪಕ್ಷದ ಹಾಲಿ ಶಾಸಕ ಕೆ.ಮಹದೇವ್ ಹಾಗು ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಕೆ.ವೆಂಕಟೇಶ್ ಮೈತ್ರಿ ಧರ್ಮಪಾಲನೆಗೋಸ್ಕರ ಹಿಂದಿನ ರಾಜಕೀಯ ವೈಮನಸ್ಸು ಮರೆತು ಪ್ರತಿಷ್ಟೆ ಬದಿಗೊತ್ತಿ ಒಟ್ಟಾಗಿ ಪ್ರಚಾರಕ್ಕಿಳಿದಿರುವುದಕ್ಕೆ ತಾಲ್ಲೂಕಿನ ಮತದಾರರು ಹೇಗೆ ಸ್ಪಂದಿಸಿದ್ದಾರೆ, ಇವರಿಬ್ಬರ ನಡುವಿನ ಒಗ್ಗಟ್ಟಿನ ಮಂತ್ರದ ಫಲಿತಾಂಶ ಎಷ್ಟರ ಮಟ್ಟಿಗೆ ಕೆಲಸ ಮಾಡಿದೆ ಎಂಬುದನ್ನು ಕಾತುರದಿಂದ ಕಾಯುತ್ತಿರುವ ಮತದಾರರು ಮುಂಬರುವ ಲೋಕಸಭಾ ಚುನಾವಣೆ ಫಲಿತಾಂಶದವರೆಗೂ ಕಾಯಬೇಕಿದೆ.
ರಾಜಕೀಯ ವೈಮನಸ್ಸು ಮರೆತ ಗುರುಶಿಷ್ಯರು : ಹಿಂದಿನ 3 ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವೆಂಕಟೇಶ್ 2 ಬಾರಿ ಜಯಗಳಿಸಿದ್ದರೆ, ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೆ.ಮಹದೇವ್ ಜಯ ಸಾಧಿಸಿ ವೆಂಕಟೇಶರ ಹ್ಯಾಟ್ರಿಕ್ ಕನಸಿಗೆ ಅಡ್ಡಿಯಾದರು, ಕಳೆದ ವಿಧಾನಸಭಾ ಚುನಾವಣ ಫಲಿತಾಂಶದ ನಂತರ ಕ್ಷೇತ್ರದಲ್ಲಿ ಹಲವು ನಾಟಕೀಯ ರಾಜಕೀಯ ವಿದ್ಯಾಮಾನಗಳು ನಡೆದು ರಾಜ್ಯ ಮಟ್ಟದಲಿ ಸುದ್ದಿಯಾಗಿ ಎರಡೂ ಪಕ್ಷದ ನಿಷ್ಟಾವಂತ ಕಾರ್ಯಕರ್ತರುಗಳು ಪರಸ್ಪರ ಒಬ್ಬರನ್ನೊಬ್ಬರು ದೂರಿಕೊಂಡು ವೈಮನಸಿಗೆ ಕಾರಣವಾಗಿತ್ತು. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚುನಾವಣೆ ಸ್ಪರ್ಧಿಸಿದ್ದರಿಂದ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಹಾಗೂ ಸ್ಥಳೀಯರೇ ಆದ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ಹಾಗೂ ಮುಖಂಡರುಗಳು ಶಾಸಕ ಕೆ.ಮಹದೇವ್ ನಿವಾಸಕ್ಕೆ ಭೇಟಿ ನೀಡಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದ್ದರಿಂದ ಮೈತ್ರಿ ಧರ್ಮಪಾಲನೆಗಾಗಿ ಶಾಸಕ ಕೆ.ಮಹದೇವ್ ಅಭ್ಯರ್ಥಿಯೊಂದಿಗೆ 2 ದಿನಗಳ ಕಾಲ ತಾಲ್ಲೂಕಿನ ವಿವಿದೆಡೆ ಸಂಚರಿಸಿ ಪ್ರಚಾರ ಮಾಡಿದ್ದಾರೆ. ಈ ಸಂದರ್ಭ ಮಾಜಿ ಶಾಸಕ ಕೆ.ವೆಂಕಟೇಶ್ ಸಹ ಪ್ರಚಾರಕ್ಕೆ ಕೈಜೋಡಿಸಿದ್ದು ವಿಶೇಷವಾಗಿತ್ತು. ಹಾಲಿ ಮಾಜಿಗಳ ಸಮಾಗಮ ಕಂಡ ತಾಲ್ಲೂಕಿನ ಎರಡೂ ಪಕ್ಷದ ಮತದಾರರು ಇಬ್ಬರಿಗೂ ಜೈಕಾರ ಕೂಗಿದ್ದಾರೆ.

Leave a Comment

Your email address will not be published. Required fields are marked *

error: Content is protected !!
Scroll to Top