ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಕೆಲಸವನ್ನು ನಮ್ಮೂರು ಕೋಗಿಲೆ ಸಿಂಗಿಂಗ್ ರಿಯಾಲಿಟಿ ಷೋ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿದೆ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‍ ತಿಳಿಸಿದರು.

ಪಟ್ಟಣದ ಪ್ರಥಮ್ ಸ್ಫೋರ್ಟ್ ಹೌಸ್‍ನಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಸಿಂಗಿಂಗ್ ರಿಯಾಲಿಟಿ ಷೋನ ಶುಕ್ರವಾರ ನಡೆದ ಗ್ರಾಂಡ್ ಫಿನಾಲೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಈ ಕಾರ್ಯಕ್ರಮ ಆಯೋಜನೆ ನಿಜಕ್ಕೂ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎಂದು ತಿಳಿಸಿದರು. ನಾನು ಗಾಯಕನಾಗ ಬೇಕು ಎಂದು ಬಯಸಿ ರಿಯಾಲಿಟಿ ಷೋಗಳಲ್ಲಿ ಭಾಗವಹಿಸುತ್ತಿದ್ದೆ ಆದರೆ ನಟನಾಗಿ,ನಿರ್ದೇಶಕನಾಗಿ ಹೋದೆ ಎಂದರು. ಉತ್ತಮ ಗಾಯಕನಾಗಲು ಸತತ ಸಂಗೀತಾಭ್ಯಾಸ ಹಾಗೂ ಕಠಿಣ ಪರಿಶ್ರಮವಿದ್ದರೆ ಮಾತ್ರ ಸಾಧ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಮಹದೇವ್ ಮಾತನಾಡಿ ಗ್ರಾಮೀಣ ಪ್ರದೇಶದಲ್ಲೂ ಉತ್ತಮ ಪ್ರತಿಭೆಗಳಿದ್ದು ಆತ್ಮವಿಶ್ವಾಸ ವಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಅಭಿಪ್ರಾಯಪಟ್ಟರು.
ಹಿನ್ನಲೆ ಗಾಯಕಿ ಸುನೀತಾ ಮಾತನಾಡಿ ಇಲ್ಲಿನ ಗಾಯಕಿಯರಿಗೆ ಮುಂದಿನ ಸ್ಮರ್ಧಾತ್ಮಕ ರಿಯಾಲಿಟಿ ಷೋಗಳಲ್ಲಿ ಭಾಗವಹಿಸಲು ಕಾರ್ಯಕ್ರಮ ಆಯೋಜಕಿ ಬಿಂದುಮಂಜುನಾಥ್ ಉತ್ತಮ ವೇದಿಕೆ ಒದಗಿಸಿಕೊಟ್ಟಿದ್ದಾರೆ ಎಂದರು.
ಶಾಸಕ ಕೆ.ಮಹದೇವ್ ಕಾರ್ಯಕ್ರಮದಿಂದ ತೆರಳಿದ ನಂತರ ತಡವಾಗಿ ಬಂದ ಮಾಜಿ ಶಾಸಕ ಕೆ.ವೆಂಕಟೇಶ್ ಮಾತನಾಡಿ ತಾಲ್ಲೂಕು ಮಟ್ಟದಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸುವ ಧೈರ್ಯ ತೋರಿಸಿರುವ ಬಿಂದು ಮಂಜುನಾಥ್ ಶ್ರಮ ಶ್ಲಾಘನೀಯ ಎಂದರು. ಪ್ರತಿಭೆ ಯಾರ ಸ್ವತ್ತೂ ಅಲ್ಲ ಇತ್ತೀಚಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಪ್ರತಿಭಾವಂತರನ್ನು ಗುರುತಿಸುವ ಕೆಲಸ ನಡೆಯುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದರು. ಸಾರ್ವಜನಿಕರ ಸಹಕಾರವಿದ್ದರೆ ಅದರಲ್ಲೂ ಉಳ್ಳವರ ಪ್ರೋತ್ಸಾಹದಿಂದ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಬಿಇಒ ಚಿಕ್ಕಸ್ವಾಮಿ, ಪುರಸಭೆ ಸದಸ್ಯರಾದ ಪಿ.ಎನ್‍.ವಿನೋದ್‍, ಮಹೇಶ್‍, ಮುಖಂಡರಾದ ಎನ್‍.ಎಲ್.ಗಿರೀಶ್, ಬಿ.ಜೆ.ಬಸವರಾಜು, ಭುಜಂಗ, ಪಿ.ಎಸ್.ಹರೀಶ್, ಧನಲಕ್ಷ್ಮಿ ರಘು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top