ತಾಲೂಕಿನ ಸೀಗೂರು ಬಳಿಯ ಶ್ರೀ ಗಣೇಶ ಸ್ಪಿನ್ನರ್ ಕಾರ್ಖಾನೆಯ ಮಾಲೀಕರು ಮತ್ತು ಆಡಳಿತ ಮಂಡಳಿ ಕಾರ್ಮಿಕರಿಗೆ ಸರಿಯಾಗಿ ಸಂಬಳ ಹಾಗೂ ಬೋನಸ್ ನೀಡುತ್ತಿಲ್ಲ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿಲ್ಲ ಎಂದು ಆರೋಪಿಸಿ ಕಾರ್ಮಿಕರು ಶಾಸಕರಿಗೆ ಮನವಿ ಮಾಡಿದ್ದ ಹಿನ್ನೆಲೆ ಗುರುವಾರ ಸಂಜೆ ಕಾರ್ಖಾನೆಗೆ ಭೇಟಿ ನೀಡಿ ನೌಕರರ ಸಮಸ್ಯೆ ಆಲಿಸಿ ಮಾತನಾಡಿದರು, ನೌಕರರಿಂದ ದೂರು ಬಂದ ತಕ್ಷಣ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಕಾರ್ಖಾನೆ ಬಳಿ ತೆರಳಿ ಸಮಸ್ಯೆಯ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದೇ, ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಹೊರತು ಗದ್ದಲ ಕೂಗಾಟ ಮಾಡುವುದರಿಂದ ಸಮಸ್ಯೆಗೆ ಪರಿಹಾರ ಸಿಗದು, ಸುಮಾರು 40ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ ಕಾರ್ಖಾನೆಯಲ್ಲಿ ನೌಕರರ ಸಮಸ್ಯೆ ಉಂಟಾಗಲು ಕಾರಣವೇನು ಎಂದು ಆಡಳಿತ ಮಂಡಳಿ ವ್ಯವಸ್ಥಾಪಕ ಬಾಲು ಅವರನ್ನು ಪ್ರಶ್ನಿಸಿ ಸಿಬ್ಬಂದಿಗಳಿಗೆ ಅನ್ಯಾಯವಾಗಿರುವುದು ಸಾಬೀತಾದರೆ ಸೂಕ್ತ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗುವುದು, ಕೂಡಲೇ ಮಾಲೀಕರನ್ನು ಕರೆಸಿ ಸಮಸ್ಯೆ ಬಗೆಹರಿಸಿ ಎಂದು ಸೂಚಿಸಿದರು.
ಈ ವೇಳೆ ಹಾಜರಿದ್ದ ನೂರಾರು ಮಂದಿ ನೌಕರರು ವೇತನ ಸರಿಯಾಗಿ ಪಾವತಿಯಾಗುತ್ತಿಲ್ಲ, ಮೂಲಭೂತ ಸೌಕರ್ಯಗಳನ್ನು ನೀಡುತ್ತಿಲ್ಲ ಹಾಗೂ ಸ್ವಯಂ ನಿವೃತ್ತಿ ಪಡೆದವರಿಗೆ ವೇತನ ಪಾವತಿಸಲು ನಿರ್ಲಕ್ಷ್ಯ ವಹಿಸುತ್ತಿದ್ದಾರೆ, ಲಾಕ್ ಡೌನ್ ಸಂದರ್ಭ ಸಂಬಳ ಸಹ ನೀಡಿಲ್ಲ ಎಂದು ಆರೋಪಿಸಿದರು.
ಕಾರ್ಮಿಕ ಇಲಾಖೆ ನಿರೀಕ್ಷಕ ಜಯಣ್ಣ ಮಾತನಾಡಿ ನೌಕರರಿಂದ ದೂರು ಬಂದ ಹಿನ್ನೆಲೆ ಪರಿಶೀಲಿಸಲು ಆಗಮಿಸಿದರೆ ಕಾರ್ಖಾನೆ ಆಡಳಿತ ಮಂಡಳಿಯಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ, ಕಾರ್ಖಾನೆ ಮಾಲೀಕರು ಮಹಾರಾಷ್ಟ್ರದಲ್ಲಿದ್ದು ಅವರನ್ನು ಕರೆಸಿ ಸಮಸ್ಯೆ ಬಗೆಹರಿಸುವಂತೆ ಶಾಸಕರಿಗೆ ಕೋರಿದರು.
ಕಾರ್ಖಾನೆ ವ್ಯವಸ್ಥಾಪಕ ಬಾಲು ಮಾತನಾಡಿ ಹತ್ತು ವರ್ಷದಿಂದೀಚೆಗೆ ಆಡಳಿತ ಮಂಡಳಿ ಬದಲಾವಣೆಯಾಗಿದ್ದು ಈ ಹಿಂದೆ ಕಾರ್ಖಾನೆ ಸಾಕಷ್ಟು ಆರ್ಥಿಕ ಸಂಕಷ್ಟ ಅನುಭವಿಸಿದ್ದು ಟೆಕ್ಸ್ ಟೈಲ್ ಇಂಡಸ್ಟ್ರಿ ಗಳನ್ನು ನಡೆಸುವುದು ಕಷ್ಟಕರವಾಗಿದೆ, ಸಮೀಪದ ಕಾರ್ಖಾನೆಗಳು ಮುಚ್ಚಿದ್ದರೂ ಸಹ ಮುಂದಿನ ದಿನಗಳಲ್ಲಿ ಎಲ್ಲ ಸಮಸ್ಯೆಗಳು ಸರಿ ಹೊಂದಬಹುದು ಎಂಬ ಆಶಾಭಾವದಿಂದ ಆಡಳಿತ ಮಂಡಳಿ ಕರ್ತವ್ಯ ನಿರ್ವಹಿಸುತ್ತಿದೆ ಎಂದರು.
ಈ ವೇಳೆ ಆಡಳಿತ ಮಂಡಳಿ ಪರ ಮಾತನಾಡಿದ ನೌಕರರ ವಿರುದ್ಧ ಹಲವರು ಅಸಮಾಧಾನ ವ್ಯಕ್ತಪಡಿಸಿ ನಿಮ್ಮಿಂದಲೇ ಸಮಸ್ಯೆ ಉಂಟಾಗಿರುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ ರಂಗಸ್ವಾಮಿ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಮುಖಂಡರಾದ ರಘುನಾಥ, ತಮ್ಮಯ್ಯಶೆಟ್ಟಿ ಕಾರ್ಮಿಕ ಮುಖಂಡ ರವಿಕುಮಾರ್ ಸೇರಿದಂತೆ ನೂರಾರು ಮಂದಿ ಕಾರ್ಮಿಕರು ಹಾಜರಿದ್ದರು.