ಪುರಸಭೆಯಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸಾರ್ವಜನಿಕರು ನನ್ನ ಬಳಿ ಬಂದು ದೂರುತ್ತಿದ್ದಾರೆ, ತಾಲ್ಲೂಕಿನಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸುವುದು ನನ್ನ ಗುರಿಯಾಗಿದ್ದು ಇದಕ್ಕೆ ಸಹಕರಿಸದ ಅಧಿಕಾರಿಗಳು ಬೇರೆಡೆಗೆ ವರ್ಗಾವಣೆ ಮಾಡಿಸಿಕೊಳ್ಳುವುದು ಸೂಕ್ತ ಎಂದು ಶಾಸಕ ಕೆ.ಮಹದೇವ್ ಸೂಚಿಸಿದರು.

ಪಟ್ಟಣದ ಪುರಸಭೆ ಕಚೇರಿಯಲ್ಲಿ ಶುಕ್ರವಾರ ಪುರಸಭೆ ಸದಸ್ಯರು ಮತ್ತು ಸಿಬ್ಬಂದಿಗಳನ್ನೊಳಗೊಂಡ ಸಭೆಯಲ್ಲಿ ಮಾತನಾಡಿದರು. ಪಟ್ಟಣದಲ್ಲಿ ಕುಡಿಯುವ ನೀರು ಪೂರೈಕೆ, ನೈರ್ಮಲ್ಯ ಸಮಸ್ಯೆ ಕುರಿತು ವ್ಯಾಪಕ ದೂರುಗಳು ಕೇಳಿ ಬರುತ್ತಿದ್ದರೂ ಪುರಸಭೆ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ, ಸಣ್ಣಪುಟ್ಟ ಸಮಸ್ಯೆಗಳಿಗೂ ಹಲವಾರು ದಿನಗಳ ಕಾಲ ಪುರಸಭೆಯಲ್ಲಿ ಕೆಲಸ ಮಾಡದೆ ಅಲೆಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಎಂದು ಶಾಸಕ ಕೆ.ಮಹದೇವ್ ಪುರಸಭೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಕೆಲವು ಪುರಸಭೆ ಸದಸ್ಯರು ಮಾತನಾಡಿ ಬೀದಿ ದೀಪಗಳ ನಿರ್ವಹಿಸದಿರುವುದು, ಸಕಾಲದಲ್ಲಿ ವಾರ್ಡ್‍ಗಳಿಗೆ ಕುಡಿಯುವ ನೀರು ಸರಬರಾಜು ಮಾಡದೆ ಇರುವುದು, ಚರಂಡಿ, ಬೀದಿಗಳ ಸ್ಚಚ್ಛತೆ ಕಾಪಾಡದೆ ಇರುವುದು, ಹೌಸಿಂಗ್ ಬೋರ್ಡ್‍ ಕಾಲೋನಿಯಲ್ಲಿರುವ ಪಾರ್ಕಗಳ ನಿರ್ವಹಣೆ ಮಾಡದಿರುವುದು ಸೇರಿದಂತೆ ವಾರ್ಡ್‍ಗಳ ಹಲವು ಸಮಸ್ಯೆಗಳನ್ನು ಸಭೆಯ ಮುಂದಿಟ್ಟರು.
ವಧಾಗಾರ ನಿರ್ಮಿಸಿ 5 ವರ್ಷ ಕಳೆದರೂ ಇನ್ನೂ ಬೀದಿಗಳಲ್ಲಿ ಕುರಿ, ಆಡುಗಳನ್ನು ವಧೆ ಮಾಡುವುದು ನಿಂತಿಲ್ಲ ಎಂದು ಸದಸ್ಯ ರವಿ ಆರೋಪಿಸಿದರು. ಮಸಣೀಕಮ್ಮ ದೇವಾಲಯದ ಬಳಿ ಇರುವ ಖಾಸಗಿ ಫಂಕ್ಷನ್ ಹಾಲ್‍ಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ರಸ್ತೆಗೆ ತಂದು ಸುರಿಯುತ್ತಿದ್ದು ಇದರಿಂದ ಸಾರ್ವಜನಿಕರು ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸದಸ್ಯ ರವಿ ದೂರಿದರು. ಚೆನ್ನ ಕೇಶವ ದೇವಾಲಯವು ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಸೇರ್ಪಡೆಗೊಂಡಿರುವುದರಿಂದ ಸುತ್ತಮುತ್ತಲಿನ 300 ಮೀಟರ್ ವ್ಯಾಪ್ತಿಯಲ್ಲಿ ಮನೆ ನಿರ್ಮಿಸಲು ಲೈಸನ್ಸ್ ನೀಡದೆ ತೊಂದರೆಯಾಗುತ್ತಿದೆ ಎಂದು ಸದಸ್ಯ ಮಂಜುನಾಥ್‍ ಸಿಂಗ್ ದೂರಿದರು.
ಉಪವಿಭಾಗಾಧಿಕಾರಿ ವೀಣಾ ಈ ಸಮಸ್ಯೆ ರಾಷ್ಟ್ರವ್ಯಾಪ್ತಿಯ ಸದಸ್ಯೆಯಾಗಿದ್ದು ನಾವು ಪರಿಹರಿಸಲು ಸಾಧ್ಯವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಡಿ.ಎನ್‍.ವಿಜಯ್‍ಕುಮಾರ್, ನಗರ ಯೋಜನಾಧಿಕಾರಿ ಆರ್‍.ಶೇಷಗಿರಿ, ಪರಿಸರ ಇಂಜಿನಿಯರ್ ಪ್ರಸನ್ನ, ಪುರಸಭಾ ಸದಸ್ಯರಾದ ಎಚ್‍.ಕೆ.ಮಂಜುನಾಥ್‍, ಚಾಮರಾಜ್‍, ಮಹೇಶ್‍, ಅರ್ಷದ್ ,ಪಿ.ಎಂ.ವಿನೋದ್, ನಿರಂಜನ್‍,ಮಂಜುಳಾ, ರತ್ನಮ್ಮ, ಶ್ವೇತಾ, ಪ್ರಕಾಶ್ ಸಿಂಗ್, ರೂಹಿಲ್ಲಾ ಖಾನಂ, ಪುಷ್ಪಲತಾ, ಸುವರ್ಣ, ಶ್ಯಾಂ ಸೇರಿದಂತೆ ಮತ್ತಿತರರು ಹಾಜರಿದ್ದರು.
02ಪಿವೈಪಿ01:ಪಿರಿಯಾಪಟ್ಟಣ ಪುರಸಭೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಶಾಸಕ ಕೆ.ಮಹದೇವ್ ಮಾತಾಡಿದರು. ಎಸಿ ವೀಣಾ, ಪುರಸಭಾ ಮುಖ್ಯಾಧಿಕಾರಿ ಡಿ.ಎನ್.ವಿಜಯ್‍ಕುಮಾರ್ ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top