ಜಿಲ್ಲೆಯಲ್ಲಿಯೇ ಪ್ರಥಮವಾಗಿ ಚಾಲನೆ ಪಡೆದ ಪಿರಿಯಾಪಟ್ಟಣ ತಾಲೂಕು ಗ್ರಾಮೀಣ ದಸರಾ ಅದ್ಧೂರಿಯಾಗಿ ಸಂಭ್ರಮ ಸಡಗರದಿಂದ ಜರುಗಿತು.

ಪಟ್ಟಣದ ಕನ್ನಂಬಾಡಿ ಅಮ್ಮ ದೇವಾಲಯದ ಬಳಿ ಶುಕ್ರವಾರ ಬೆಳಿಗ್ಗೆಯಿಂದಲೇ ನಂದಿ ಧ್ವಜ ಕುಣಿತ ತಂಡದವರು, ಬೆಳ್ಳಿ ರಥದಲ್ಲಿ ಅಲಂಕೃತ ಚಾಮುಂಡೇಶ್ವರಿ ಪ್ರತಿಮೆ, ವಿವಿಧ ಕಲಾತಂಡಗಳು, ಸ್ತಬ್ಧಚಿತ್ರ ವಾಹನಗಳು, ವಿವಿಧ ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರುಗಳು, ಅಂಗನವಾಡಿ ಕಾರ್ಯಕರ್ತರುಗಳು, ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು.


ಸಂಸದ ಪ್ರತಾಪ್ ಸಿಂಹ ಹಾಗು ಶಾಸಕ ಕೆ.ಮಹದೇವ್ ಮಧ್ಯಾಹ್ನ 12 ಗಂಟೆಗೆ ನಂದಿಧ್ವಜಕ್ಕೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬೆಳ್ಳಿ ರಥದಲ್ಲಿ ಅಲಂಕೃತ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು, ಕನ್ನಂಬಾಡಿಯಮ್ಮ ದೇವಾಲಯ ಬಳಿಯಿಂದ ಬಿ.ಎಂ ರಸ್ತೆಯ ಮುಖಾಂತರ ಗೋಣಿಕೊಪ್ಪ ರಸ್ತೆಯ ಜೂನಿಯರ್ ಕಾಲೇಜು ಮೈದಾನದವರೆಗೆ ಒಂದೂವರೆ ಗಂಟೆಗಳ ಕಾಲ ಮೆರವಣಿಗೆ ಸಾಗಿತು, ಪಟ್ಟಣ ಪೊಲೀಸರು ಸರ್ಕಲ್ ಇನ್ಸ್ ಪೆಕ್ಟರ್ ಬಿ.ಆರ್ ಪ್ರದೀಪ್ ನೇತೃತ್ವದಲ್ಲಿ ವಾಹನಗಳಿಗೆ ಏಕಮುಖ ಸಂಚಾರ ವ್ಯವಸ್ಥೆ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು.
ಮೆರವಣಿಗೆಯಲ್ಲಿ ನಂದಿ ಧ್ವಜಕುಣಿತ, ಮಂಗಳವಾದ್ಯ, ಕೇರಳದ ಚಂಡೆ ಮದ್ದಳೆ, ನಗಾರಿ, ಕಂಸಾಳೆ ನೃತ್ಯ, ವೀರಗಾಸೆ, ಟಿಬೆಟನ್ ಸಾಂಪ್ರಾದಾಯಿಕ ನೃತ್ಯ, ಕೀಲುಕುದುರೆ, ಗೊರವನ ಕುಣಿತ, ಪೂಜಾಕುಣಿತ, ಹುಲಿವೇಷ, ಕೀಲುಗೊಂಬೆ ಕುಣಿತ ಪ್ರದರ್ಶನದೊಂದಿಗೆ ತಾಲ್ಲೂಕಿನ ಇತಿಹಾಸ ಬಿಂಬಿಸುವ ಸ್ತಬ್ದ ಚಿತ್ರಗಳು, ಮಹಿಳೆಯರಿಂದ ಪೂರ್ಣಕುಂಭ ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಿದವು. ಸಂಸದ ಪ್ರತಾಪ್ ಸಿಂಹ ಮತ್ತು ಜಿಲ್ಲಾ ಗ್ರಾಮೀಣ ದಸರಾ ಸಮಿತಿ ಅಧ್ಯಕ್ಷ ರಮೇಶ್ ಕುಮಾರ್ ಸ್ವಲ್ಪ ದೂರ ಶಾಸಕ ಕೆ.ಮಹದೇವ್ ರೊಂದಿಗೆ ಸಾಗಿ ನಂತರ ನಿರ್ಗಮಿಸಿದರು.
ಕೆಲವು ಕಲಾ ತಂಡಗಳು ವೇದಿಕೆಯಲ್ಲಿ ಸಹ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟವು.
ತಾಲ್ಲೂಕಿನ ವಿವಿಧ ಗಿರಿಜನ ಶಾಲೆಯ ಮಕ್ಕಳು ಪ್ರದರ್ಶಿಸಿದ ಅರಣ್ಯ ಜನರ ನೃತ್ಯ ಕಾರ್ಯಕ್ರಮವು ಆಕರ್ಷಣಿಯವಾಗಿತ್ತು. ಕಾರ್ಯಕ್ರಮದಲ್ಲಿ ಮೈಮುಲ್ ನಿರ್ದೇಶಕ ಪಿ.ಎಂ.ಪ್ರಸನ್ನ, ತಾ.ಪಂ.ಅಧ್ಯಕ್ಷೆ ಕೆ.ಆರ್.ನಿರೂಪ, ತಹಶೀಲ್ದಾರ್ ಶ್ವೇತ ಎನ್.ರವೀಂದ್ರ, ಜಿ.ಪಂ.ಸದಸ್ಯರಾದ ಕೆ.ಎಸ್.ಮಂಜುನಾಥ್, ರುದ್ರಮ್ಮನಾಗಯ್ಯ, ಎಪಿಎಂಸಿ ಅಧ್ಯಕ್ಷ ರಾಜಯ್ಯ, ತಾ.ಪಂ.ಇಒ ಡಿ.ಸಿ.ಶೃತಿ, ಬಿಇಒ ಚಿಕ್ಕಸ್ವಾಮಿ, ಗ್ರಾಮೀಣ ದಸರಾ ಉಪಸಮಿತಿ ಸದಸ್ಯ ಲೋಕಪಾಲಯ್ಯ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಾದೇಗೌಡ, ಉಪಾಧ್ಯಕ್ಷ ಮಣಿಯಯ್ಯ, ಟಿಎಪಿಎಂಎಸ್ ಅಧ್ಯಕ್ಷ ಪಿ.ಎನ್.ಚಂದ್ರಶೇಖರ್, ಎಂಡಿಸಿಸಿ ನಿರ್ದೇಶಕ ಸಿ.ಎನ್.ರವಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಯೋಗಿ, ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್ ಸೇರಿದಂತೆ ಜನಪ್ರತಿನಿಧಿಗಳು ಹಲವರು ಹಾಜರಿದ್ದರು.
27ಪಿವೈಪಿ01: ಪಿರಿಯಾಪಟ್ಟಣದಲ್ಲಿ ನಡೆದ ಗ್ರಾಮೀಣ ದಸರಾ ಕಾರ್ಯಕ್ರಮಕ್ಕೆ ಸಂಸದ ಪ್ರತಾಪ್ ಸಿಂಹ ಶಾಸಕ ಕೆ.ಮಹದೇವ್ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

Leave a Comment

Your email address will not be published. Required fields are marked *

error: Content is protected !!
Scroll to Top