ಜಿಲ್ಲೆಯ ಗಡಿಭಾಗ ಪಿರಿಯಾಪಟ್ಟಣ ತಾಲೂಕು ಕೇಂದ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಂಸದ ಪ್ರತಾಪ್ ಸಿಂಹ ಅವರ ಜೊತೆ ಸೇರಿ ಶಾಸಕ ಕೆ.ಮಹದೇವ್ ಅವರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.

ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ನಡೆದ ಗ್ರಾಮೀಣ ದಸರಾ ಸಿದ್ಧತೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು, ದಸರಾ ಸಾಂಸ್ಕೃತಿಕ ಹಿನ್ನೆಲೆಯ ಪಾರಂಪರಿಕ ಹಬ್ಬವಾಗಿದೆ, ಈ ಬಾರಿಯ ದಸರಾ ಆಚರಣೆಗೆ ಅಧಿಕಾರಿಗಳೆಲ್ಲರೂ ಶ್ರಮಿಸಿ ಯಶಸ್ವಿಗೆ ಸಹಕಾರ ನೀಡಿ ನಾಡದೇವತೆ ಚಾಮುಂಡೇಶ್ವರಿಯ ಕೃಪೆಗೆ ಪಾತ್ರರಾಗುವಂತೆ ಸೂಚಿಸಿದರು, ಸರ್ಕಾರ ವತಿಯಿಂದ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಒಂದು ಲಕ್ಷ ಹಾಗೂ ಪುರಸಭೆಗಳಿಗೆ ಒಂದು ಲಕ್ಷ ಹಣ ಬಿಡುಗಡೆಗೊಳಿಸಿ ಅದ್ದೂರಿಯಾಗಿ ಆಚರಿಸಲು ತಿಳಿಸಲಾಗಿದೆ, ಕಳೆದ ಬಾರಿ ಹೋಬಳಿ ಮಟ್ಟದಲ್ಲಿ ದಸರಾ ಆಚರಿಸಿ ಯಶಸ್ವಿಯಾಗಿದ್ದಾರೆ ಆದರೆ ಈ ಬಾರಿ ತಾಲೂಕು ಕೇಂದ್ರದಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಆಚರಣೆ ಮಾಡಿ  ಮುಂದಿನ ಬಾರಿ ಜಿಲ್ಲೆಯ ಉಸ್ತುವಾರಿಯಾಗಿ ನಾನೇ ಅಧಿಕಾರದಲ್ಲಿದ್ದರೆ ಎಲ್ಲೆಡೆ ವಿಜೃಂಭಣೆಯಿಂದ ಆಚರಿಸುವಂತೆ ಮಾಡೋಣ ಎಂದರು, ಜಿಲ್ಲೆಯ ಹಾಡಿ ಜನರು ಹಾಗೂ ರೈತರಿಗೆ ದಸರಾ ಸಂದರ್ಭ ಮೈಸೂರಿನ ವೀಕ್ಷಣೆಗಾಗಿ ಆಗಮಿಸಲು ವಿಶೇಷ ಬಸ್ ಸೌಕರ್ಯ ವ್ಯವಸ್ಥೆ ಮಾಡಲಾಗಿದ್ದು ನಮ್ಮ ಪ್ರತಿಷ್ಠಾನ ವತಿಯಿಂದ ಊಟ ತಿಂಡಿ ಖರ್ಚಿಗಾಗಿ ಐದು ಲಕ್ಷದ ನಲ್ವತ್ತು ಸಾವಿರ ಹಣ ನೀಡಲಾಗಿದೆ ಮುಂದಿನ ದಿನಗಳಲ್ಲಿ ಸರ್ಕಾರ ವತಿಯಿಂದಲೇ ಎಲ್ಲ ಖರ್ಚನ್ನು ಭರಿಸುವ ಭರವಸೆ ನೀಡಿದರು.

      ಯಾವುದೋ ಜನ್ಮದ ಪುಣ್ಯದಿಂದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಕೃಪೆಯಿಂದ ಮಂತ್ರಿಯಾಗಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೇನೆ, ದಸರಾ ಮುಗಿಯುವವರೆಗೆ ನನ್ನ ಮೊದಲ ಆದ್ಯತೆ ವಿಜೃಂಭಣೆಯ ದಸರಾ ಆಚರಣೆಗೆ ನಂತರ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಹಂತ ಹಂತವಾಗಿ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಭರವಸೆ ನೀಡಿದರು, ವೈಭವಯುತ ದಸರಾ ಆಚರಣೆಯಲ್ಲಿ ಮಾಧ್ಯಮದವರ ಪಾತ್ರವೂ ಸಹ ಹೆಚ್ಚಿನದಾಗಿದ್ದು ಸಹಕಾರ ನೀಡುವಂತೆ ಕೋರಿದರು. 

     ಸಂಸದ ಪ್ರತಾಪ್ ಸಿಂಹ ಮಾತನಾಡಿ ನೆರೆ ಹಾವಳಿ ಸಂದರ್ಭ ಪರಿಹಾರ ಕಾರ್ಯಕ್ಕಾಗಿ ರಾಜ್ಯದ ಮುಖ್ಯಮಂತ್ರಿಗಳು ಈ ಹಿಂದೆ ಘೋಷಿಸದ ಹೆಚ್ಚಿನ ಅನುದಾನವನ್ನು ಈ ಬಾರಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಘೋಷಿಸಿ ಸಂತ್ರಸ್ತರ ಪರ ನಿಂತಿದ್ದಾರೆ, ತಾಲೂಕಿನ ಹಾಡಿ ಜನರ ಮೂಲಭೂತ ಸೌಕರ್ಯಗಳ ಕೊರತೆ ನೀಗಿಸುವ ಸಂಬಂಧ ವಸತಿ ಸಚಿವರಾದ ವಿ.ಸೋಮಣ್ಣ ನವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಈಗಾಗಲೇ ಚರ್ಚಿಸಿದ್ದು ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು, ದಸರಾ ಆಚರಣೆಗೆ ಸರ್ಕಾರ ಈ ಬಾರಿ ಮುಂಗಡವಾಗಿಯೇ ಹಣ ಬಿಡುಗಡೆಗೊಳಿಸಿದ್ದು ಪ್ರತಿಯೊಬ್ಬರು ಯಶಸ್ಸಿಗೆ ಸಹಕರಿಸುವಂತೆ ತಿಳಿಸಿದರು.

     ಶಾಸಕ ಕೆ.ಮಹದೇವ್ ಮಾತನಾಡಿ ಐತಿಹಾಸಿಕ ದಸರಾ ಆಚರಣೆಯ ಯಶಸ್ಸಿಗಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ನವರು ಪ್ರತಿ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ಪೂರ್ವ ಸಿದ್ಧತೆ ತಯಾರಿ ನಡೆಸುತ್ತಿರುವುದು ಶ್ಲಾಘನೀಯ, ಈ ಹಿಂದೆ ಯಾವ ಜನಪ್ರತಿನಿಧಿಗಳು ಈ ರೀತಿಯ ಕೆಲಸಕ್ಕೆ ಮುಂದಾಗಿರಲಿಲ್ಲ, ಜಿ.ಪಂ, ತಾ.ಪಂ, ಗ್ರಾ.ಪಂ ಪುರಸಭೆ ಎಲ್ಲ ಜನಪ್ರತಿನಿಧಿಗಳನ್ನು ಒಟ್ಟುಗೂಡಿಸಿ ಆಚರಿಸುತ್ತಿರುವುದಕ್ಕೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆ ತಿಳಿಸುವುದಾಗಿ ಹೇಳಿದರು, ಕಳೆದ ಬಾರಿಯ ಗ್ರಾಮೀಣ ದಸರಾ ಆಚರಣೆಗೆ ಎರಡು ಲಕ್ಷ ಹಣ ಬಿಡುಗಡೆಗೊಳಿಸುವುದಾಗಿ ಘೋಷಿಸಿ ಕೇವಲ ಒಂದು ಲಕ್ಷ ಮಾತ್ರ ನೀಡಿದ್ದರು ಆದರೆ ಈ ಬಾರಿ ಮುಂಚಿತವಾಗಿಯೇ ಹಣ ಬಿಡುಗಡೆ ಮಾಡಿರುವುದು ಉತ್ತಮ ಬೆಳವಣಿಗೆ ಎಂದರು, ನೆರೆ ಹಾವಳಿ ಸಂದರ್ಭ ತಾಲೂಕಿನ ವಿವಿಧೆಡೆ ಹೆಚ್ಚಿನ ಹಾನಿಯಾಗಿದ್ದು ಅವುಗಳ ಅಭಿವೃದ್ಧಿಗಾಗಿ ಸರ್ಕಾರ ವತಿಯಿಂದ ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವಂತೆ ಕೋರಿದರು.

    ತಹಸೀಲ್ದಾರ್ ಶ್ವೇತಾ ಎನ್. ರವೀಂದ್ರ ಮಾತನಾಡಿ ನೆರೆ ಹಾವಳಿ ಸಂದರ್ಭ ತಾಲೂಕಿನಲ್ಲಿ ಆಗಿರುವ ಹಾನಿ ವಿವರ ಹಾಗೂ ಕೈಗೊಂಡ ಪರಿಹಾರ ಕಾರ್ಯಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು.

     ಇದೇ ವೇಳೆ ಸಚಿವ ಸೋಮಣ್ಣ ಅವರು ಸಭೆಯಲ್ಲಿ ಹಾಜರಿದ್ದ ತಾಲೂಕಿನ ಎಲ್ಲ ಸರ್ಕಾರಿ ಇಲಾಖೆಗಳ ಅಧಿಕಾರಿಗಳ ಪರಿಚಯ ಮಾಡಿಕೊಂಡು ಹಾಸ್ಯಭರಿತ ಶೈಲಿಯ ಮಾತಿನಲ್ಲಿ ಎಲ್ಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಉತ್ತಮ ಸೇವೆ ಒದಗಿಸುವಂತೆ ಸೂಚಿಸಿದರು.     ಈ ಸಂದರ್ಭ ಮಾಜಿ ಶಾಸಕ ಎಚ್.ಸಿ ಬಸವರಾಜು, ಮಾಜಿ ಸಚಿವ ಕೋಟೆ ಶಿವಣ್ಣ, ಜಿ.ಪಂ ಸದಸ್ಯರಾದ ಮಂಜುನಾಥ್, ರಾಜೇಂದ್ರ, ರುದ್ರಮ್ಮ ನಾಗಯ್ಯ, ತಾಪಂ ಅಧ್ಯಕ್ಷೆ ಕೆ.ಆರ್ ನಿರೂಪ ರಾಜೇಶ್ ಹಾಗೂ ಸದಸ್ಯರುಗಳು, ಉಪ ವಿಭಾಗಾಧಿಕಾರಿ ವೀಣಾ, ಇಒ ಡಿ.ಸಿ ಶ್ರುತಿ, ಡಿವೈಎಸ್ಪಿ ಸುಂದರ್ ರಾಜ್, ಪುರಸಭಾ ಸದಸ್ಯರುಗಳು, ವಿವಿಧ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳು ಹಾಜರಿದ್ದರು.   

Leave a Comment

Your email address will not be published. Required fields are marked *

error: Content is protected !!
Scroll to Top