ತಾಲೂಕಿನ ಸಾರ್ವಜನಿಕರ ಬಹುದಿನದ ಕನಸಾದ ಅಲ್ಟ್ರಾ ಸ್ಕ್ಯಾನಿಂಗ್ ಮತ್ತು ಕಂಪ್ಯೂಟರ್ ರೇಡಿಯೋಗ್ರಫಿ ಎಕ್ಸರೇ ಯಂತ್ರದ ಚಿಕಿತ್ಸೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದೊರೆಯುವಂತಾಗಿರುವುದು ಬಹುದಿನಗಳ ಕನಸು ನನಸಾದಂತಾಗಿದೆ, ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಕೆ.ಮಹದೇವ್ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರ ಮತ್ತು ರೇಡಿಯೋಗ್ರಫಿ ಎಕ್ಸರೇ ಯಂತ್ರದ ಚಿಕಿತ್ಸಾ ಸೌಲಭ್ಯಕ್ಕೆ  ಗುರುವಾರ  ಚಾಲನೆ ನೀಡಿ ಅವರು ಮಾತನಾಡಿದರು, ಪಟ್ಟಣದಲ್ಲಿ ನೂತನ ಸಾರ್ವಜನಿಕ ಆಸ್ಪತ್ರೆ ನಿರ್ಮಿಸಿದಾಗಿನಿಂದ ಇವುಗಳ ಸೌಲಭ್ಯ ದೊರೆಯದೇ  ಸಾರ್ವಜನಿಕರಿಗೆ ಅನಾನುಕೂಲ ಉಂಟಾಗಿತ್ತು, ತಾಲೂಕು ವೈದ್ಯಾಧಿಕಾರಿ ಮತ್ತು ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿಗಳ ವೈಯಕ್ತಿಕ ಆಸಕ್ತಿಯಿಂದ ಈ ಚಿಕಿತ್ಸಾ ಸೌಲಭ್ಯಗಳಿಗೆ ಚಾಲನೆ ದೊರೆತಿದ್ದು ಇದರಿಂದ ಸಾರ್ವಜನಿಕರಿಗೆ ಬಹಳ ಉಪಯೋಗವಾಗಲಿದೆ ಎಂದರು. 

    ಆಸ್ಪತ್ರೆ ಆಡಳಿತಾಧಿಕಾರಿ ಜೆ.ಶ್ರೀನಿವಾಸ್ ಮಾತನಾಡಿ ಪ್ರತಿ ಗುರುವಾರ ಈ ಸೌಲಭ್ಯ ದೊರೆಯಲಿದ್ದು ಗರ್ಭಿಣಿ ಸ್ತ್ರೀಯರು ಉಚಿತವಾಗಿ ಇದರ ಸದುಪಯೋಗ ಪಡೆದುಕೊಳ್ಳಬೇಕು, ಆಸ್ಪತ್ರೆಯಲ್ಲಿ ಸಣ್ಣಪುಟ್ಟ ದುರಸ್ತಿ ಕಾರ್ಯಗಳು ಬಾಕಿ ಇದ್ದು ಪುನರ್ ನವೀಕರಣಕ್ಕಾಗಿ ಶಾಸಕರ ನಿಧಿಯಿಂದ ಅನುದಾನ ಬಿಡುಗಡೆ ಮಾಡುವಂತೆ ಶಾಸಕರಿಗೆ ಮನವಿ ಮಾಡಿದರು, ಆಸ್ಪತ್ರೆಯಲ್ಲಿ ನೇತ್ರ ತಜ್ಞ ಡಾ.ಪ್ರಮೋದ್ ಇವರಿಂದ ನೇತ್ರ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದ್ದು ಇದನ್ನು ಪ್ರಥಮ ಬಾರಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾಡುತ್ತಿರುವ ಹೆಗ್ಗಳಿಕೆ ನಮ್ಮದಾಗಿದೆ ಎಂದರು.

    ತಾಲೂಕು ವೈದ್ಯಾಧಿಕಾರಿ ಡಾ ನಾಗೇಶ್ ಮಾತನಾಡಿ ತಾಲೂಕಿನ ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇದೆ, ಈಗಾಗಲೇ ಸರ್ಕಾರದಿಂದ ನಿಯೋಜನೆ ಮಾಡಿದ್ದು ಶೀಘ್ರದಲ್ಲೇ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.     ಈ ಸಂದರ್ಭ ಡಾ.ದೇವಿಕಾ, ಡಾ.ದೀಪಕ್, ಐಸಿಟಿಸಿ ಆಪ್ತ ಸಮಾಲೋಚಕ ಪ್ರಕಾಶ್, ಹಿರಿಯ ಆರೋಗ್ಯ ನಿರೀಕ್ಷಕ ಕೆ.ಆರ್ ಪ್ರಕಾಶ್ ಸೇರಿದಂತೆ ವೈದ್ಯರು ಸಿಬ್ಬಂದಿ ಹಾಜರಿದ್ದರು

Leave a Comment

Your email address will not be published. Required fields are marked *

error: Content is protected !!
Scroll to Top