ಒಕ್ಕಲಿಗ ಸಮಾಜದ ಜನರು ವಿದ್ಯಾವಂತರಾಗುವುದರ ಜತೆಗೆ ಸುಸಂಸ್ಕೃತರಾಗಬೇಕು ಎಂಬುದು ಬಾಲಗಂಗಾಧರನಾಥ ಸ್ವಾಮೀಜಿ ಅವರ ಅಭಿಲಾಷೆಯಾಗಿತ್ತು ಎಂದು ಖ್ಯಾತ ಜಾನಪದ ಸಂಶೋಧಕ ಮತ್ತು ವಿದ್ವಾಂಸರಾದ ಡಾ. ಪಿ.ಕೆ. ರಾಜಶೇಖರ್ ಅಭಿಪ್ರಾಯಪಟ್ಟರು.
ತಾಲ್ಲೂಕು ಒಕ್ಕಲಿಗ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಶಿಕ್ಷಣ ಇಲಾಖೆಯ ಒಕ್ಕಲಿಗ ನೌಕರರ ಸಂಘದ ವತಿಯಿಂದ ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ನೂತನ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿದರು. ಸಮಾಜದ ಸ್ವಾಸ್ಥ್ಯಕ್ಕೆ ಭಂಗ ಬರದ ರೀತಿಯಲ್ಲಿ ನಡೆದು ಬಂದಂತಹ ಸಮಾಜ ಒಕ್ಕಲಿಗ ಸಮಾಜವಾಗಿದ್ದು ಎಲ್ಲ ಧರ್ಮೀಯರಿಗೆ ಆಶ್ರಯ ನೀಡಿದಂತಹ ಸಮಾಜ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು ಎಂದರು. ರಾಷ್ಟ್ರಕೂಟರು, ಹೊಯ್ಸಳರು ಸೇರಿದಂತೆ ರಾಜ್ಯವನ್ನಾಳಿದ ಅನೇಕ ರಾಜ ಮನೆತನಗಳು ಒಕ್ಕಲಿಗ ಸಮಾಜದ ಹಿನ್ನೆಲೆಯಿಂದ ಬಂದವರಾಗಿದ್ದು ಹೊಂಬೇಗೌಡರ ಪರಿಶ್ರಮದಿಂದಾಗಿ ಆದಿ ಚುಂಚನಗಿರಿ ಮಠ ನಿರ್ಮಾಣಗೊಂಡಿದೆ ಎಂದು ತಿಳಿಸಿದರು. ಸಮಾಜದ ಜನರು ವಿದ್ಯಾವಂತರಾಗಬೇಕು ಎನ್ನುವ ಸದುದ್ದೇಶದಿಂದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು ಜೋಳಿಗೆ ಹಿಡಿದು ಊರೂರು ಅಲೆದು ಚಂದಾ ಸಂಗ್ರಹಿಸಿ ವಿದ್ಯಾ ಸಂಸ್ಥೆಗಳನ್ನು ತೆರೆಯುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಕುವೆಂಪು ಸಾಹಿತ್ಯಿಕವಾಗಿ, ಬಾಲಗಂಗಾಧರನಾಥ ಸ್ವಾಮೀಜಿಗಳು ಧಾರ್ಮಿಕವಾಗಿ ಮಾಡಿದ ಸಾಧನೆಗಳು ಪ್ರಶಂಸನೀಯವಾದುದು ಎಂದರು.
ಶಾಸಕ ಕೆ.ಮಹದೇವ್ ಮಾತನಾಡಿ ಕೃಷಿ , ಶಿಕ್ಷಣ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಒಕ್ಕಲಿಗ ಸಮಾಜದ ಕೊಡುಗೆ ಮಹತ್ತರವಾದುದಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಪಿ.ಪ್ರಶಾಂತ್ ಗೌಡ , ಒಕ್ಕಲಿಗ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಎಚ್. ಶಿವಕುಮಾರ್ ಮಾತನಾಡಿದರು .
ಸಮಾರಂಭದಲ್ಲಿ ಗಣ್ಯರಿಂದ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಯಿತು, ನಿವೃತ್ತರಾದ ನೌಕರರಿಗೆ ಸನ್ಮಾನ ಮಾಡಲಾಯಿತು, ಸಂಘದ ನೂತನ ನಾಮಫಲಕ ಅನಾವರಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಕೆ.ಎಸ್, ಮಂಜುನಾಥ್, ಪಿ.ರಾಜೇಂದ್ರ, ತಾಪಂ ಸದಸ್ಯರಾದ ಎಚ್.ಎಸ್. ಶ್ರೀನಿವಾಸ್, ಕೆ.ಆರ್. ಶಿವಮ್ಮ, ಪುಷ್ಪಲತಾ, ಸುಮಿತ್ರಾ, ಟಿ.ಎನ್. ಪಂಕಜ, ಪುರಸಭೆ ಸದಸ್ಯರಾದ ಪಿ.ಸಿ. ಕೃಷ್ಣ, ರವಿ ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್. ರವಿ, ತಾಪಂ ಇಒ ಡಿ.ಸಿ. ಶ್ರುತಿ , ಬಿಇಒ ಚಿಕ್ಕಸ್ವಾಮಿ, ಲೋಕೋಪಯೋಗಿ ಎಇಇ ನಾಗರಾಜು, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಎಂ.ಕೆ. ಪ್ರಕಾಶ್, ನಿವೃತ್ತ ಬಿಇಒ ಆರ್.ಕರಿಗೌಡ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಂಘದ ಪದಾಧಿಕಾರಿಗಳು ಹಾಜರಿದ್ದರು.