ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ ನೆರೆ ಸಂತ್ರಸ್ತರಿಗೆ ಪರಿಹಾರದ ಚೆಕ್ ಹಾಗೂ ಮನೆ ನಿರ್ಮಾಣದ ಕಾಮಗಾರಿ ಆದೇಶ ಪತ್ರಗಳನ್ನು ವಿತರಿಸಿ ಅವರುಮಾತನಾಡಿದರು, ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಸರ್ಕಾರ ಎ , ಬಿ ಮತ್ತು ಸಿ ಎಂದು ಮೂರು ವಿಭಾಗಗಳನ್ನು ಮಾಡಿ ಪರಿಹಾರ ಕಾರ್ಯ ಕೈಗೊಂಡಿದೆ, ಹಾನಿಯ ಬಗ್ಗೆ ಸಮೀಕ್ಷೆ ನಡೆಸುವಾಗ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆಯನ್ನು ತೊರೆದು ನಷ್ಟದ ಅಂದಾಜನ್ನು ಪ್ರಾಮಾಣಿಕವಾಗಿ ಉಲ್ಲೇಖಿಸುವಂತೆ ತಿಳಿಸಿ ಸಂತ್ರಸ್ತರಿಗೆ ಅನ್ಯಾಯವಾಗದಂತೆ ಕಾರ್ಯನಿರ್ವಹಿಸುವಂತೆ ತಿಳಿಸಿದರು.
ತಾ.ಪಂ ಇಒ ಡಿ.ಸಿ ಶ್ರುತಿ ಮಾತನಾಡಿ ವರದಿಯ ಪ್ರಕಾರ ತಾಲೂಕಿನಲ್ಲಿ 9 ಮನೆ ಸಂಪೂರ್ಣ ಕುಸಿತ, 294 ಮನೆ ಭಾಗಶಃ ಹಾನಿ, 148 ಮನೆ ಕನಿಷ್ಠ ಪ್ರಮಾಣದ ಹಾನಿ ಒಟ್ಟಾರೆ 451 ಮನೆ ಹಾನಿಗೊಳಗಾಗಿವೆ, ಹಂತ ಹಂತವಾಗಿ ಸಂತ್ರಸ್ತರಿಗೆ ಸರ್ಕಾರದ ಪರಿಹಾರ ದೊರಕಲಿದೆ ಎಂದರು.
ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ ಮಾತನಾಡಿ ಹಾನಿ ನಷ್ಟದ ಅಂದಾಜು ಪಟ್ಟಿ ಮಾಡುವಾಗ ಅಧಿಕಾರಿಗಳಿಂದ ಲೋಪದೋಷಗಳಾಗಿದ್ದರೆ ಗಮನಕ್ಕೆ ತನ್ನಿ ಅಂತಹವುಗಳನ್ನು ಮರುಪರಿಶೀಲಿಸಿ ಸೂಕ್ತ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಕಾರ್ಯಕ್ರಮಕ್ಕೆ ನಿಗದಿತ ಸಮಯಕ್ಕಿಂತ ತಡವಾಗಿ ಆಗಮಿಸಿದ ಶಾಸಕ ಕೆ.ಮಹದೇವ್ ಮನೆ ಹಾಗೂ ಕಚೇರಿ ಬಳಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತಿ ದ್ದರಿಂದ ತಡವಾಯಿತು ಎಂದು ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂತ್ರಸ್ತರ ಕ್ಷಮೆಯಾಚಿಸಿದರು, ತಾಲೂಕಿನ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ನೆರೆ ಸಂತ್ರಸ್ತರು ಆಗಮಿಸಿದ್ದರಿಂದ ಸಾಂಕೇತಿಕವಾಗಿ ಆದೇಶ ಪತ್ರ ವಿತರಿಸಿದ ಶಾಸಕರು ನಂತರ ಸಂಬಂಧಿಸಿದ ಪಂಚಾಯಿತಿ ಪಿಡಿಒಗಳ ಮುಖಾಂತರ ಆದೇಶ ಪತ್ರ ವಿತರಿಸುವಂತೆ ಸೂಚಿಸಿದರು.
ಈ ಸಂದರ್ಭ ತಾ.ಪಂ ಅಧ್ಯಕ್ಷೆ ಕೆ.ಆರ್ ನಿರೂಪ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಈರಯ್ಯ, ಸದಸ್ಯರಾದ ಎಸ್.ರಾಮು, ಮಲ್ಲಿಕಾರ್ಜುನ, ಮೋಹನ್ ರಾಜ್, ಜಯಂತಿ, ಆರ್.ಎಸ್ ಮಹದೇವ್, ಎ.ಟಿ ರಂಗಸ್ವಾಮಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಯೋಗ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.