ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ 66ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ

ಗ್ರಾಮೀಣ ಪ್ರದೇಶದ ಜನರು ನೆಮ್ಮದಿಯಿಂದ ಬದುಕು ಸಾಗಿಸಲು ಹೈನುಗಾರಿಕೆ ಉಪಯುಕ್ತವಾಗಿದೆ ಎಂದು ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ ರಾಜೀವ್ ಹೇಳಿದರು.

    ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ 66ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು, ಉತ್ತಮ ಗುಣಮಟ್ಟದ ಹಾಲು ಪೂರೈಕೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಕಾರ ಸಂಘಗಳ ಮುಖಾಂತರ ಹಲವು ಯೋಜನೆಗಳನ್ನು ಜಾರಿಗೆ ತಂದು ರೈತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿವೆ, ರೈತರಿಗೆ ಮಾರಕವಾಗುವ ಯಾವುದೇ ವಿದೇಶಿ ಒಪ್ಪಂದಗಳಿಗೆ ಮಾರು ಹೋಗದೇ ರೈತರ ಹಿತ ಕಾಪಾಡುತ್ತಿವೆ, ಸಹಕಾರ ಸಂಘಗಳ ನಿರ್ವಹಣೆಯಲ್ಲಿ ಪಿರಿಯಾಪಟ್ಟಣ ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿರುವುದು ಹೆಗ್ಗಳಿಕೆಯ ವಿಷಯ ಎಂದರು.

   ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ ಹರೀಶ್ ಗೌಡ ಮಾತನಾಡಿ ದೇಶ, ರಾಜ್ಯ, ಜಿಲ್ಲೆಯಲ್ಲಿ ಸಹಕಾರ ವ್ಯವಸ್ಥೆ ಬಲಿಷ್ಠವಾಗಿದ್ದು ಸರ್ಕಾರದ ಸವಲತ್ತುಗಳನ್ನು ಸಂಘದ ಸದಸ್ಯರುಗಳಿಗೆ ನೇರವಾಗಿ ತಲುಪಿಸಿ ಆರ್ಥಿಕ ಅಭಿವೃದ್ಧಿಗೆ ಸಹಕಾರ ನೀಡಲಾಗುತ್ತಿದೆ, ಸಹಕಾರ ಸಂಘಗಳು ಸಹ ಸದಸ್ಯರ ನಂಬಿಕೆ ವಿಶ್ವಾಸಕ್ಕೆ ಚ್ಯುತಿ ಬರದ ಹಾಗೆ ಕರ್ತವ್ಯ ನಿರ್ವಹಿಸುವಂತೆ ಕರೆ ನೀಡಿದರು.

   ಶಾಸಕ ಕೆ.ಮಹದೇವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಹಕಾರ ಸಂಘಗಳಲ್ಲಿ ರಾಜಕೀಯ ಬೆರೆಸದೆ ರೈತಪರ ಕೆಲಸ ನಿರ್ವಹಿಸಿ ಸರ್ಕಾರದ ಸವಲತ್ತುಗಳನ್ನು ಸದಸ್ಯರುಗಳಿಗೆ ಪ್ರಾಮಾಣಿಕವಾಗಿ ತಲುಪಿಸಬೇಕು ಎಂದರು.

    ಮೈಮುಲ್ ನಿರ್ದೇಶಕ ಪಿ.ಎಂ ಪ್ರಸನ್ನ ಮಾತನಾಡಿ ಹೈನುಗಾರಿಕೆ ಪ್ರೋತ್ಸಾಹಿಸುವ ಸಲುವಾಗಿ ಸಂಘದ ವತಿಯಿಂದ ಹಲವು ಸವಲತ್ತುಗಳನ್ನು ವಿತರಣೆ ಮಾಡಲಾಗುತ್ತಿದ್ದು ಕೃಷಿಯ ಜತೆಗೆ ಹೈನುಗಾರಿಕೆಯನ್ನು ಉಪ ಕಸುಬಾಗಿ ಅವಲಂಬಿಸುವಂತೆ ತಿಳಿಸಿದರು.

   ಈ ವೇಳೆ ಸಹಕಾರ ಸಂಘಗಳ ಅಭಿವೃದ್ಧಿಗೆ ಶ್ರಮಿಸಿದ ಪ್ರಮುಖರಾದ  ಅತ್ತರ್ ಮತೀನ್, ತಿಮ್ಮೇಗೌಡ, ಗೋವಿಂದೇಗೌಡ, ಚಂದ್ರಶೇಖರಯ್ಯ ಸಹಕಾರ ಸಂಘದಲ್ಲಿ ಸಾಧನೆ ತೋರಿದ ಬೆಟ್ಟದಪುರ ಹಾಗೂ ಮುತ್ತಿನ ಮುಳಸೋಗೆ ಸಂಘಗಳಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು, ವಿವಿಧ ತಳಿಗಳ ರಾಸುಗಳ ಪ್ರದರ್ಶನ ಸಹ ನಡೆದು ಉತ್ತಮ ರಾಸುಗಳಿಗೆ ಬಹುಮಾನ ನೀಡಲಾಯಿತು, ಶಾಸಕ ಕೆ.ಮಹದೇವ್ ಹಾಗೂ ಜಿ.ಡಿ ಹರೀಶ್ ಗೌಡ ಅವರಿಗೆ ಬೆಳ್ಳಿ ಕಿರೀಟ ತೊಡಿಸಿ ಸನ್ಮಾನ ಹಾಗೂ ಗಣ್ಯರನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.    ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯರಾದ ಕೌಸಲ್ಯ ಲೋಕೇಶ್, ಕೆ.ಸಿ ಜಯಕುಮಾರ್, ಮೈಸೂರು ಜಿಲ್ಲಾ ಸಹಕಾರ ಒಕ್ಕೂಟ ನಿರ್ದೇಶಕ ಪರಶಿವಮೂರ್ತಿ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಬಿ ಲಿಂಗಣ್ಣಯ್ಯ, ಮೈಮುಲ್ ನಿರ್ದೇಶಕಿ ದಾಕ್ಷಾಯಣಿ, ಬಲರಾಮ್  ಸಹಕಾರ ಸಂಘಗಳ ನಿಬಂಧಕ ಎನ್.ಕೆ ಗೋಪಾಲಯ್ಯ, ಟಿಎಪಿಸಿಎಂಎಸ್ ಅಧ್ಯಕ್ಷ ಪಿ.ಎನ್ ಚಂದ್ರಶೇಖರ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಡಿ.ಮಾದೇಗೌಡ, ಮೈಮುಲ್ ಉಪ ವ್ಯವಸ್ಥಾಪಕ ಡಾ.ಎನ್.ಕುಮಾರ್, ಎಂಡಿಸಿಸಿ ಬ್ಯಾಂಕ್ ಉಪ ವ್ಯವಸ್ಥಾಪಕ ಡಾ.ಸಿ ದಿವಾಕರ್, ವಿಸ್ತರಣಾಧಿಕಾರಿಗಳಾದ ನಿಶ್ಚಿತ್, ಶ್ರೀಕಾಂತ್, ತುಳಸಿಕುಮಾರ್, ಸಚಿನ್, ನಟರಾಜ್, ಸಹಕಾರ ಅಭಿವೃದ್ಧಿ ಅಧಿಕಾರಿ ಡಿ.ಎಲ್ ಸುರೇಶ್ ಸೇರಿದಂತೆ ತಾಲೂಕಿನ ವಿವಿಧೆಡೆ ಸಹಕಾರ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳು ಹಾಜರಿದ್ದರು.  

Leave a Comment

Your email address will not be published. Required fields are marked *

error: Content is protected !!
Scroll to Top