ಶಾಸಕ ಕೆ.ಮಹದೇವ್ ಮಾತನಾಡಿ ದೇವರಾಜ್ ಅರಸು ಅವರು 20 ಅಂಶಗಳ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿ ಸಾಕಷ್ಟು ತೊಡಕುಗಳು ಎದುರಾದರೂ ಸಹ ಎದೆಗುಂದದೆ ಜಾರಿಗೊಳಿಸಿ ಸಾಮಾಜಿಕ ನ್ಯಾಯದ ಪರ ಹೋರಾಟ ನಡೆಸಿದರು, ಸರಳ ಸಜ್ಜನಿಕೆಗೆ ಹೆಸರಾಗಿದ್ದ ಧೀಮಂತ ರಾಜಕಾರಣಿ ದೇವರಾಜ್ ಅರಸು ಅವರು ಮೈಸೂರು ಸಂಸ್ಥಾನವನ್ನು ಕರ್ನಾಟಕ ಎಂದು ನಾಮಕರಣ ಮಾಡಿದರು, ದೇವರಾಜ್ ಅರಸು ಅವರ ರಾಜಕೀಯ ನಡೆ ಇಂದಿನ ರಾಜಕಾರಣಿಗಳಿಗೆ ಮಾರ್ಗದರ್ಶನವಾಗಬೇಕಿದೆ ಎಂದರು.
ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಅವಿರತ ಹೋರಾಟ ಮಾಡಿದ ಮಹಾನ್ ಚೇತನ ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸ್ ಎಂದು ಬೆಟ್ಟದಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಚೈತ್ರ ಹೇಳಿದರು. ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ ನಡೆದ ದಿ.ದೇವರಾಜ್ ಅರಸು ಅವರ 104ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರುಮಾತನಾಡಿದರು, ದೇವರಾಜ್ ಅರಸು ಅವರ ಆಡಳಿತ ಅವಧಿಯಲ್ಲಿ ಭೂ ಸುಧಾರಣೆ, ಉಳುವವನೇ ಭೂಮಿಯ ಒಡೆಯ ಸೇರಿದಂತೆ ಅನೇಕ ಮಹತ್ತರ ಸುಧಾರಣೆಗಳನ್ನು ಜಾರಿಗೆ ತಂದು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಹೋರಾಟ ನಡೆಸಿದರು, ಹಾವನೂರು ಆಯೋಗ ವರದಿಯನ್ನು ಜಾರಿಗೊಳಿಸುವ ಮೂಲಕ ಹಿಂದುಳಿದ ವರ್ಗದವರಿಗೆ ಮೀಸಲಾತಿಯನ್ನು ಕಲ್ಪಿಸಿ ಶೈಕ್ಷಣಿಕ, ಸಾಮಾಜಿಕ, ಉದ್ಯೋಗ ಕ್ಷೇತ್ರಗಳಲ್ಲಿ ಹೆಚ್ಚು ಅವಕಾಶ, ರಾಜಕೀಯ ಪ್ರಾತಿನಿದ್ಯ ದೊರೆಯುವಂತೆ ಮಾಡಿದರು, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ವಿದ್ಯಾರ್ಥಿ ನಿಲಯಗಳನ್ನು ತೆರೆಯುವ ಮೂಲಕ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಟ್ಟರು, ಸಮಾಜದ ಸಣ್ಣ ಪುಟ್ಟ ವರ್ಗಗಳನ್ನು ಗುರುತಿಸಿ ಶೋಷಿತರ ಏಳಿಗೆಗೆ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿದ ಕೀರ್ತಿ ಅರಸು ಅವರಿಗೆ ಸಲ್ಲಬೇಕು ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಈರಯ್ಯ, ಸದಸ್ಯ ಎಸ್.ರಾಮು, ಹಿಂದುಳಿದ ವರ್ಗಗಳ ಇಲಾಖೆ ವಿಸ್ತರಣಾಧಿಕಾರಿ ಮೋಹನ್ ಕುಮಾರ್ ಮಾತನಾಡಿದರು.
ಈ ಸಂದರ್ಭ ಜಿ.ಪಂ ಸದಸ್ಯರಾದ ರಾಜೇಂದ್ರ, ಕೆ.ಎಸ್ ಮಂಜುನಾಥ್, ತಾ.ಪಂ ಅಧ್ಯಕ್ಷೆ ಕೆ.ಆರ್ ನಿರೂಪರಾಜೇಶ್, ಸದಸ್ಯ ಮೋಹನ್ ರಾಜ್, ಮಲ್ಲಿಕಾರ್ಜುನ್, ಪುರಸಭಾ ಸದಸ್ಯರಾದ ಪಿ.ಸಿ ಕೃಷ್ಣ, ನಿರಂಜನ್, ಪ್ರಕಾಶ್ ಸಿಂಗ್, ರವಿ, ತಹಸೀಲ್ದಾರ್ ಶ್ವೇತಾ ಎನ್. ರವೀಂದ್ರ, ಇಒ ಡಿ.ಸಿ ಶೃತಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರುಗಳು ಹಾಜರಿದ್ದರು.