ಪಟ್ಟಣದ ವಿವಿಧೆಡೆ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಗುಣಮಟ್ಟದ ಬಗ್ಗೆ ಪುರಸಭೆ ಅಧಿಕಾರಿಗಳು ನಿತ್ಯ ಗಮನ ಹರಿಸಿ ಉತ್ತಮ ಗುಣಮಟ್ಟಕ್ಕೆ ಆದ್ಯತೆ ನೀಡಲಿ ಎಂದು ಶಾಸಕ ಕೆ.ಮಹದೇವ್ ಕಿವಿಮಾತು ಹೇಳಿದರು.

ಪಟ್ಟಣದ ವಿವಿಧೆಡೆ ಮಂಗಳವಾರ ರೂ.62.13ಲಕ್ಷ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು, ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ವಿದ್ಯುತ್, ಕುಡಿಯುವ ನೀರು, ರಸ್ತೆ, ಒಳಚರಂಡಿ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ದೂರುಗಳು ಪ್ರತಿನಿತ್ಯ ಕೇಳಿಬರುತ್ತಿದೆ, ಪುರಸಭಾ ಸದಸ್ಯರು ಚುನಾಯಿತರಾಗಿ ಒಂದೂವರೆ ವರ್ಷ ಕಳೆಯುತ್ತಿದ್ದರು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಕುರಿತ ವಿಷಯ ಕೋರ್ಟ್ ಅಲ್ಲಿ ಇರುವುದರಿಂದ ಪುರಸಭೆಯಲ್ಲಿ ಅಧಿಕಾರ ಸ್ವೀಕರಿಸಲಾಗದೇ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು, ಪಟ್ಟಣ ಸೇರಿದಂತೆ ರಾಜ್ಯದ ವಿವಿಧೆಡೆ ತಡೆಯಾಜ್ಞೆ ನೀಡಿರುವ ಸ್ಥಳೀಯ ಸಂಸ್ಥೆಗಳ ಮೀಸಲಾತಿ ವಿಷಯ ಕೋರ್ಟ್ ಅಲ್ಲಿ ಶೀಘ್ರ ಬಗೆಹರಿಯಲಿ ಎಂದು ಮನವಿ ಮಾಡಿದರು.

      ಈಗಾಗಲೇ ಪಟ್ಟಣದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿ ಅನುದಾನ ಬಿಡುಗಡೆ ಮಾಡಿಸಿ ಅಭಿವೃದ್ಧಿ ಕಾರ್ಯಗಳು ಚಾಲನೆಯಲ್ಲಿದ್ದು ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ ಹತ್ತಾರು ವರ್ಷ ಕಾಲ ಬಾಳಿಕೆ ಬರುವಂತಹ ಕಾಮಗಾರಿಗಳನ್ನು ನಿರ್ವಹಿಸುವಂತೆ ಪುರಸಭಾ ಅಧಿಕಾರಿಗಳು ನಿಗಾ ವಹಿಸಲಿ ಎಂದರು.

     ಈ ಸಂದರ್ಭ ಪಟ್ಟಣದ ಆದಿಚುಂಚನಗಿರಿ ಕಾಲೇಜು ರಸ್ತೆ ಅಭಿವೃದ್ಧಿ, ರುದ್ರಪ್ಪ ಬಡಾವಣೆಯಲ್ಲಿ ಕುಡಿಯುವ ನೀರು ಕಾಮಗಾರಿ, ನೂತನ ಪುರಸಭೆ ಕಟ್ಟಡದ ಬಳಿ ಕಾಂಕ್ರೀಟ್ ಚರಂಡಿ ನಿರ್ಮಾಣ, ಮಸಣಿಕಮ್ಮ ದೇವಾಲಯ ಬಳಿ ರಸ್ತೆ ಮತ್ತು ಚರಂಡಿ ನಿರ್ಮಾಣ, ಪುರಸಭಾ ಕಟ್ಟಡ ಬಳಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.    ಕಾರ್ಯಕ್ರಮದಲ್ಲಿ ಪುರಸಭಾ ಮುಖ್ಯಾಧಿಕಾರಿ ಚಂದ್ರಕುಮಾರ್, ಪುರಸಭಾ ಸದಸ್ಯರಾದ ಪಿ.ಸಿ ಕೃಷ್ಣ, ಮಹೇಶ್, ವಿನೋದ್, ಪ್ರಕಾಶ್ ಸಿಂಗ್, ಅರ್ಷದ್, ಮಂಜುಳಾ, ಭಾರತಿ, ಪ್ರಕಾಶ್, ಮಂಜುನಾಥ್ ಸಿಂಗ್, ರವಿ, ರುಹಿಲ್ಲಾ ಖಾನ್, ಮುಖಂಡರಾದ ಕುಮಾರ್, ಸೈಯದ್ ಇಲಿಯಾಸ್ ಮತ್ತು ಪುರಸಭೆ ಸಿಬ್ಬಂದಿಗಳು ಹಾಜರಿದ್ದರು.       

Leave a Comment

Your email address will not be published. Required fields are marked *

error: Content is protected !!
Scroll to Top