ಪಟ್ಟಣದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ವಿಶ್ವಮಾನವ ಕುವೆಂಪು ಜಯಂತಿ ಕಾರ್ಯಕ್ರಮ

ಸಾಮಾಜಿಕ ಹಾಗೂ ವೈಜ್ಞಾನಿಕ ನೆಲೆ ಯಡಿ ಕನ್ನಡ ಸಾಹಿತ್ಯದ ಮೂಲಕ ಜಗತ್ತಿಗೆ ವಿಶ್ವ ಮಾನವ ಸಂದೇಶ ಸಾರಿದ ಕೀರ್ತಿ ರಾಷ್ಟ್ರಕವಿ ಕುವೆಂಪು ಅವರದು ಎಂದು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದ ಕನ್ನಡ ಸಹಾಯಕ ಪ್ರಾಧ್ಯಾಪಕ ಎನ್.ಆರ್ ಚಂದ್ರೇಗೌಡ ಹೇಳಿದರು.

     ಪಟ್ಟಣದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ವಿಶ್ವಮಾನವ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು, ಕನ್ನಡ ಸಾಹಿತ್ಯದ ವಿವಿಧ ಪ್ರಾಕಾರಗಳಲ್ಲಿ ಸಾಹಿತ್ಯ ಕೃಷಿಯ ಮೂಲಕ  ಜ್ಞಾನಪೀಠ, ಪಂಪ ಮತ್ತು ಕರ್ನಾಟಕ ರತ್ನ ಪ್ರಶಸ್ತಿಗಳನ್ನು ಪಡೆದ ಕನ್ನಡದ ಕವಿ ಎಂಬ ಹೆಗ್ಗಳಿಕೆ ಕುವೆಂಪು ಅವರದು, ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ನೆಲೆಸಿ ಸ್ವಾಮಿ ವಿವೇಕಾನಂದರ ಆದರ್ಶ ತತ್ವಗಳನ್ನು ಮೈಗೂಡಿಸಿಕೊಂಡಿದ್ದ ಕುವೆಂಪುರವರು ಮಹಾ ಕವಿಯೂ ಹೌದು ಹಾಗೂ ಮಹಾ ಸಂತರು ಹೌದು ಎಂದರು, ಆದಿಕವಿ ವಾಲ್ಮೀಕಿ ವಿರಚಿತ ರಾಮಾಯಣ ಮಹಾಕಾವ್ಯವನ್ನು ಆಧುನಿಕ ಜಗತ್ತಿಗೆ ಶ್ರೀ ರಾಮಾಯಣ ದರ್ಶನದ ಮೂಲಕ ಉಣಬಡಿಸಿದ ಕುವೆಂಪುರವರನ್ನು ಯುಗದ ಕವಿ, ಜಗದ ಕವಿ ಎಂದರೆ ತಪ್ಪಾಗಲಾರದು ಎಂದು ದ.ರಾ ಬೇಂದ್ರೆಯವರೇ ಪ್ರಶಂಸಿಸಿದ್ದಾರೆ, ಇಪ್ಪತ್ತನೇ ಶತಮಾನದ ಕನ್ನಡ ಸಾಹಿತ್ಯದ ಅಗ್ರಸ್ಥ ರಾಗಿದ್ದ ಕುವೆಂಪುರವರು ಕನ್ನಡ ನಾಡಿನ ಪ್ರತಿಭೆ ಮಾತ್ರವಲ್ಲ ವಿಶ್ವಶ್ರೇಷ್ಠ ಮಹಾನ್ ಕವಿ, ಕನ್ನಡ ಸಾಹಿತ್ಯ ಲೋಕದ ಭಾವಕೋಶ ಮತ್ತು ವಿಶ್ವಕೋಶ ಕವಿಯಾಗಿದ್ದರು, ಕರ್ನಾಟಕ ಏಕೀಕರಣ ಸಂದರ್ಭ ಮೈಸೂರು ಮಹಾರಾಜ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದರು ಎಂದರು. 

     ಶ್ರೀ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ ಮಾತನಾಡಿ ಕುವೆಂಪುರವರ ದಿಟ್ಟ ನಿಲುವು, ಆಧ್ಯಾತ್ಮಕ ಮನೋಭಾವ, ಸಾಮಾಜಿಕ ಕಳಕಳಿ ಇತರರಿಗೆ ಮಾದರಿಯಾಗಿದೆ ಎಂದರು. ಪ್ರಕೃತಿಯ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದ ಕುವೆಂಪುರವರು ತಮ್ಮ ಕಾವ್ಯದಲ್ಲಿ ಪ್ರಕೃತಿಯ ಸೊಬಗನ್ನು ತಂದು ನಾಡು ನುಡಿಯ ಬಗ್ಗೆ ವಿಶೇಷವಾದ ಸಾಹಿತ್ಯ ರಚಿಸಿದ್ದಾರೆ ಎಂದರು.    

      ಶಾಸಕ ಕೆ.ಮಹದೇವ್ ಮಾತನಾಡಿ ಮಹಾನ್ ವ್ಯಕ್ತಿಗಳ ಜಯಂತಿ ಆಚರಣೆಗಳು ಅರ್ಥಪೂರ್ಣವಾಗಿರಬೇಕಿದ್ದಲ್ಲಿ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಿದೆ, ಸರ್ಕಾರದ ವತಿಯಿಂದ ಆಚರಿಸಲಾಗುತ್ತಿರುವ ಮೂವತ್ತಕ್ಕೂ ಹೆಚ್ಚು  ಮಹನೀಯರ ಜಯಂತಿಗಳನ್ನು ಒಂದೇ ದಿನ ಆಚರಿಸುವಂತಾಗಬೇಕು, ಸರ್ವ ಜನಾಂಗದವರು ಒಂದು, ಜಾತಿ ಕುಲ ಮತ ಭೇದ ಭಾವವಿಲ್ಲ ಎಂಬ ಜಗತ್ತಿಗೆ ಸಂದೇಶ ಸಾರಿದ ಮಹಾನ್ ಸಂತ ಕುವೆಂಪು ಎಂದರು.  

    ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ ವಿಜಯ್ ಕುಮಾರ್ ಮಾತನಾಡಿ ಕುವೆಂಪು ಬರೆದ ಸಾಹಿತ್ಯಗಳು ದೇಶದ ಒಳಿತಿಗೆ ಸಾಕ್ಷಿಯಾಗಿದ್ದವು, ಜಗತ್ತೇ ಒಂದು ಕುಲ ನಾವೆಲ್ಲ ಒಂದೇ ಜಾತಿ ಧರ್ಮ ಎಂದು ಶಾಂತಿ ಸಂದೇಶ ಸಾರಿದ ಮಹಾನ್ ಕವಿ ಎಂದರು.

   ಮಾಜಿ ಜಿ.ಪಂ ಸದಸ್ಯೆ ಮಂಜುಳಾ ರಾಜ್ ಮಾತನಾಡಿದರು, ಕಾರ್ಯಕ್ರಮದಲ್ಲಿ ತಾಲೂಕಿನ 19 ಪ್ರಗತಿ ಪರ ರೈತರನ್ನು ಸನ್ಮಾನಿಸಿ ಗೌರವಿಸಲಾಯಿತು.

     ಈ ಸಂದರ್ಭ ತಾ.ಪಂ ಅಧ್ಯಕ್ಷೆ ಕೆ.ಆರ್ ನಿರೂಪ, ಮೈಮುಲ್ ನಿರ್ದೇಶಕ ಪಿ.ಎಂ ಪ್ರಸನ್ನ, ಜಿ.ಪಂ ಸದಸ್ಯರಾದ ಕೆ.ಎಸ್.ಮಂಜುನಾಥ, ಪಿ.ರಾಜೇಂದ್ರ, ಕೆ.ಸಿ ಜಯಕುಮಾರ್, ರುದ್ರಮ್ಮ, ತಾ.ಪಂ ಸದಸ್ಯರಾದ ಶ್ರೀನಿವಾಸ್, ಎ.ಟಿ ರಂಗಸ್ವಾಮಿ, ಜಯಂತಿ ಸೋಮಶೇಖರ್, ಸುಮಿತ್ರಾ, ಪುಷ್ಪಲತಾ, ಆರ್. ಎಸ್ ಮಹದೇವ್, ಪುರಸಭಾ ಸದಸ್ಯರಾದ ಪಿ.ಸಿ.ಕೃಷ್ಣ, ಪ್ರಕಾಶ್, ನಿರಂಜನ್, ಪ್ರಕಾಶ್ ಸಿಂಗ್, ಎಪಿಎಂಸಿ ಉಪಾಧ್ಯಕ್ಷ ಮೋಹನ್ ಕುಮಾರ್,  ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ, ತಾ.ಪಂ ಇಒ ಡಿ.ಸಿ ಶ್ರುತಿ, ತಾಲೂಕು ಒಕ್ಕಲಿಗ ವಿವಿಧ ಸಂಘಗಳ ಅಧ್ಯಕ್ಷರಾದ  ಬಿ.ಜೆ ದೇವರಾಜು, ಎಸ್.ಆರ್ ದಿನೇಶ್, ಪಿ.ವಿ ದೇವರಾಜು, ಶ್ರೀನಿವಾಸ್, ವಸಂತ್ ಮತ್ತಿತರರು ಹಾಜರಿದ್ದರು. 

Leave a Comment

Your email address will not be published. Required fields are marked *

error: Content is protected !!
Scroll to Top