
ಈ ವೇಳೆ ಶಾಸಕ ಕೆ.ಮಹದೇವ್ ಮಾತನಾಡಿ ಇನ್ನು ಎರಡು ದಿನಗಳೊಳಗೆ ತರಕಾರಿ ಮಾರಾಟಗಾರರು ಎಪಿಎಂಸಿ ಆವರಣಕ್ಕೆ ಸ್ಥಳಾಂತರಗೊಳ್ಳಬೇಕು, ಪಟ್ಟಣದ ಸಂತೇಪೇಟೆ, ಬಿ.ಎಂ ರಸ್ತೆ, ದೇವಸ್ಥಾನದ ರಸ್ತೆ ಮತ್ತಿತರ ಜನನಿಬಿಡ ಪ್ರದೇಶಗಳಲ್ಲಿ ಸರ್ಕಾರದ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಸಾರ್ವಜನಿಕರು ಪಾಲಿಸಬೇಕು, ದೇಶದಾದ್ಯಂತ ಕರೋನಾ ವೈರಸ್ ನಿಂದಾಗಿ ಆತಂಕದ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಸಾಂಕ್ರಾಮಿಕ ವೈರಸ್ ಸಾರ್ವಜನಿಕರಿಗೆ ಹರಡದಂತೆ ಎಚ್ಚರಿಕೆ ವಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಪಟ್ಟಣದಲ್ಲಿ ತರಕಾರಿ ಮಾರಾಟ ಮಾಡುತ್ತಿರುವ ವ್ಯಾಪಾರಸ್ಥರು ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು, ಗುಣಮಟ್ಟದ ತರಕಾರಿಗಳನ್ನು ಮಾತ್ರ ಮಾರಾಟ ಮಾಡಬೇಕು, ನಿಗದಿತ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡಬಾರದು, ಎಲ್ಲರೂ ಪಟ್ಟಣದ ಎಪಿಎಂಸಿ ಆವರಣಕ್ಕೆ ಸ್ಥಳಾಂತರಗೊಂಡಲ್ಲಿ ಸಂತೆಪೇಟೆಯಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳಬಹುದಾಗಿದೆ ಎಂದರು. ಅಗತ್ಯವಿದ್ದಲ್ಲಿ ಪುರಸಭೆ ಸದಸ್ಯರ ನೆರವು ಪಡೆದು ಆಯಾ ವಾರ್ಡ್ ಗಳಿಗೆ ವಾಹನಗಳಲ್ಲಿ ತೆರಳಿ ತರಕಾರಿ ಮಾರಾಟ ಮಾಡಲು ಅನುಮತಿ ಪಡೆಯುವಂತೆ ಸೂಚಿಸಿದರು. ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಖರೀದಿಸಲು ನಿಗದಿಪಡಿಸಿರುವ ಸಮಯದಲ್ಲಿ ಬಂದು ತಮಗೆ ಬೇಕಾದ ಅಗತ್ಯ ಪದಾರ್ಥಗಳನ್ನು ಖರೀದಿಸಬೇಕು, ಮಾರುಕಟ್ಟೆಗಳಲ್ಲಿ ಜನದಟ್ಟಣೆ ಯಾಗದಂತೆ ಎಚ್ಚರ ವಹಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು. ಈ ಸಂದರ್ಭ ಪುರಸಭಾ ಮುಖ್ಯಾಧಿಕಾರಿ ಚಂದ್ರಕುಮಾರ್, ಮೈಮುಲ್ ನಿರ್ದೇಶಕ ಪಿ.ಎಂ. ಪ್ರಸನ್ನ, ಸಿಪಿಐ ಬಿ.ಆರ್.ಪ್ರದೀಪ್, ಪುರಸಭೆ ಸದಸ್ಯರಾದ ಪಿ.ಸಿ.ಕೃಷ್ಣ, ಮಂಜುನಾಥ್ ಸಿಂಗ್, ರವಿ, ಪಿ.ಎನ್.ವಿನೋದ್, ಮಸಣಿಕಮ್ಮ ಆಟೋ ಚಾಲಕರ ಸಂಘದ ಅಧ್ಯಕ್ಷ ನಾಗರಾಜ್, ಮುಖಂಡರಾದ ಪೆಪ್ಸಿ ಕುಮಾರ್, ಮುಷೀರ್ ಖಾನ್, ಉಮೇಶ್ ಮತ್ತಿತರರು ಹಾಜರಿದ್ದರು.