: ಪಶು ಇಲಾಖೆ ವತಿಯಿಂದ ರೈತರು ತಮ್ಮ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕೆಯನ್ನು ಕೊಡಿಸುವುದರ ಮುಖಾಂತರ ರೋಗದ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಶಾಸಕ ಕೆ.ಮಹದೇವ್ ಹೇಳಿದರು.

ಪಟ್ಟಣದ ಪಶು ಇಲಾಖೆ ಆವರಣದಲ್ಲಿ ಪಶು ವೈದ್ಯಕೀಯ ಸೇವಾ ಇಲಾಖೆ ಮತ್ತು ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ವತಿಯಿಂದ ನಡೆದ ಕಾಲು ಬಾಯಿ ಜ್ವರ  ನಿಯಂತ್ರಣ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು, ಹಿಂದಿನ ದಿನಗಳಲ್ಲಿ ಜಾನುವಾರುಗಳಿಗೆ ಬರುತ್ತಿದ್ದ ಕಾಲುಬಾಯಿ ಜ್ವರ ಬಾಧೆಯಿಂದಾಗಿ ಸಾವಿಗೀಡಾಗಿ ರೈತರು ಅಪಾರ ಪ್ರಮಾಣದ ನಷ್ಟ ಅನುಭವಿಸುತ್ತಿದ್ದರು, ಇತ್ತೀಚಿನ ವೈಜ್ಞಾನಿಕ ಯುಗದಲ್ಲಿ ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ಲಸಿಕೆ ಕಂಡುಹಿಡಿದಿದ್ದು ಸರ್ಕಾರದ ವತಿಯಿಂದ ಪಶು ಇಲಾಖೆ ಮುಖಾಂತರ ಜಾನುವಾರುಗಳಿಗೆ ಉಚಿತವಾಗಿ ಲಸಿಕೆಯನ್ನು ನೀಡುತ್ತಿದ್ದು ಎಲ್ಲ ರೈತರು ತಮ್ಮ ಜಾನುವಾರುಗಳಿಗೆ ಲಸಿಕೆ ಕೊಡಿಸಿ ರೋಗದ ನಿಯಂತ್ರಣಕ್ಕೆ ಮುಂದಾಗಬೇಕು, ಆರಂಭಿಕ ಹಂತದಲ್ಲಿ ರೋಗವನ್ನು ಪತ್ತೆ ಹಚ್ಚಿದಲ್ಲಿ ಸೂಕ್ತ ಪ್ರಮಾಣದ ಚಿಕಿತ್ಸೆಯನ್ನು ಕೊಡಿಸುವ ಮೂಲಕ  ಜಾನುವಾರುಗಳನ್ನು ಗುಣಪಡಿಸಬಹುದಾಗಿದೆ, ಮೂಕ ಪ್ರಾಣಿಗಳ ವೇದನೆಗೆ ಸ್ಪಂದಿಸುವ ಕೆಲಸ ತ್ವರಿತಗತಿಯಲ್ಲಿ ಆಗಬೇಕಿದ್ದು ರೈತರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ  ಗ್ರಾಮಗಳಿಗೆ ತೆರಳಿ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. 

 ತಾ.ಪಂ ಅಧ್ಯಕ್ಷೆ ಕೆ.ಆರ್ ನಿರೂಪ ಮಾತನಾಡಿ ಸರ್ಕಾರದಿಂದ ಇಲಾಖಾವಾರು ನೀಡುತ್ತಿರುವ ಸವಲತ್ತುಗಳ ಮಾಹಿತಿಯನ್ನು ಅಧಿಕಾರಿಗಳು ರೈತರಿಗೆ  ಸಮರ್ಪಕವಾಗಿ ತಿಳಿಸಬೇಕು, ಪಶು ವೈದ್ಯಕೀಯ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಕಾಲುಬಾಯಿ ಜ್ವರ ನಿಯಂತ್ರಣ ಲಸಿಕಾ ಕಾರ್ಯಕ್ರಮ ಪ್ರತಿಯೊಂದು ಗ್ರಾಮಗಳಿಗೆ ಸಮರ್ಪಕವಾಗಿ ತಲುಪಿ ಜಾನುವಾರುಗಳನ್ನು ಕಾಯಿಲೆಗಳಿಂದ ರಕ್ಷಿಸುವಂತೆ ತಿಳಿಸಿದರು.

    ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ, ತಾ.ಪಂ ಇಒ ಡಿ.ಸಿ ಶ್ರುತಿ, ಸದಸ್ಯ ಮಲ್ಲಿಕಾರ್ಜುನ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಂದೇಶ್, ಪುರಸಭೆ ಸದಸ್ಯರಾದ ಪಿ.ಸಿ ಕೃಷ್ಣ, ಪ್ರಕಾಶ್ ಸಿಂಗ್,  ಹರದೂರು ಗ್ರಾಪಂ ಅಧ್ಯಕ್ಷೆ ರಾಗಿಣಿ, ಮುಖಂಡರಾದ ನಾಗರಾಜು, ರಘುನಾಥ್, ಸೈಯದ್ ಇಲಿಯಾಸ್, ವಿವಿಧೆಡೆಯ ಪಶು ಇಲಾಖೆ ವೈದ್ಯರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top