ವಾಲ್ಮೀಕಿ ಅವರ ಜೀವನ ಸಂದೇಶಗಳು ನಿರಂತರ ಜ್ಯೋತಿ ಇದ್ದಂತೆ ಎಂದು ರಾಜ್ಯ ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕ ಕೆ.ಮಹದೇವ ನಾಯಕ ಹೇಳಿದರು.
ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ತಾಲೂಕು ಆಡಳಿತ, ತಾ.ಪಂ, ಪುರಸಭೆ, ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು, ವಾಲ್ಮೀಕಿಯವರ ತತ್ವ ಸಂದೇಶಗಳನ್ನು ನಾವೆಲ್ಲರೂ ಪಾಲಿಸಿ ಕತ್ತಲೆಯಿಂದ ಬೆಳಕಿನೆಡೆಗೆ ಸಾಗಬೇಕಿದೆ, ತಪಸ್ಸಿನ ಮೂಲಕ ವಾಲ್ಮೀಕಿಯಾಗಿ ಶ್ಲೋಕ ರಚನೆ ಮೂಲಕ ಮಹರ್ಷಿಯಾಗಿ ಸಮಾಜದ ಬದಲಾವಣೆಗೆ ಸಂಸ್ಕೃತ ಅಲ್ಲದೆ ಕನ್ನಡ, ತೆಲುಗು, ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಶ್ಲೋಕಗಳನ್ನು ರಚಿಸಿ ಅಹಿಂಸಾ ಮಾರ್ಗದ ಮೂಲಕ ಶ್ರಮಿಸಿದ ಮಹಾನ್ ನಾಯಕ ಮಹರ್ಷಿ ವಾಲ್ಮೀಕಿಯವರು ಎಂದರು.
ಏನ್.ಅಪ್ಪಣ್ಣ ಮಾತನಾಡಿ ಸಮಾಜದ ನಾಯಕರಾಗಿದ್ದ ಚಿಕ್ಕಮಾದು ಅವರ ನಿಧನ ನಂತರ ಸಮಾಜದ ಅಭಿವೃದ್ಧಿಗೆ ಹೋರಾಟ ನಡೆಸುತ್ತಿದ್ದು ರಾಜಕೀಯವಾಗಿ ಅಧಿಕಾರ ಸಿಗದೇ ಯಾವುದೇ ಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಿಲ್ಲ, ಶಿಕ್ಷಣದ ಕೊರತೆಯಿಂದ ಸಮಾಜದವರು ಹಿಂದುಳಿದಿದ್ದು ಮೈಸೂರು ಭಾಗದಲ್ಲಿ ಪಿರಿಯಾಪಟ್ಟಣದಲ್ಲಿ ಸಮಾಜ ಹೆಚ್ಚಿನದಾಗಿ ಅಭಿವೃದ್ಧಿ ಪಥದಲ್ಲಿ ಸಾಗಬೇಕಿದೆ, ಶಿಕ್ಷಣದಿಂದ ಮಾತ್ರ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ ಸಾಧ್ಯವಾಗಿದ್ದು ಸಮಾಜದ ಪ್ರತಿಯೊಬ್ಬರು ಶಿಕ್ಷಿತ ರಾಗುವಂತೆ ಕರೆ ನೀಡಿದರು, ಪ್ರಸ್ತುತ ರಾಜಕೀಯದ ಸ್ಥಿತಿಗತಿ ಹೇಳಲು ಮಾತುಗಳೇ ಸಾಲುತ್ತಿಲ್ಲ ಚುನಾವಣೆ ಗೆಲ್ಲುವುದು ಎಷ್ಟು ಕಷ್ಟ ಎಂಬುದು ಎಲ್ಲರಿಗೂ ಗೊತ್ತಿದೆ, ತಮ್ಮ ಮತವನ್ನು ಮಾರಿಕೊಳ್ಳದೇ ಒಳ್ಳೆಯ ವ್ಯಕ್ತಿಯನ್ನು ಆರಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸುವಂತೆ ಹೇಳಿದರು.
ಶಾಸಕ ಕೆ.ಮಹದೇವ್ ಮಾತನಾಡಿ ವಾಲ್ಮೀಕಿ ಅವರು ರಚಿಸಿದ ರಾಮಾಯಣ ರಾಜ್ಯ, ದೇಶವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ, ರಾಜಕೀಯದಲ್ಲಿ ಮೀಸಲಾತಿ ನೀಡುವುದರಿಂದ ಎಲ್ಲಾ ವರ್ಗದ ಜನಪ್ರತಿನಿಧಿಗಳು ಆಯ್ಕೆಯಾಗಿ ಸಮಾಜದ ಅಭಿವೃದ್ಧಿಗೆ ಒತ್ತು ನೀಡಬಹುದಾಗಿದೆ, ಕೇವಲ ಜಯಂತಿಗಳ ಆಚರಣೆಯಿಂದ ಸಮಾಜದ ಸಮಸ್ಯೆಗಳ ಪರಿಹಾರ ಸಾಧ್ಯವಿಲ್ಲ, ಸಮುದಾಯದವರೆಲ್ಲರೂ ಒಗ್ಗೂಡಿ ಸಂಘಟನೆಯಾದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು, ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿ ನಡೆಯುತ್ತಿರುವ ವಾಲ್ಮೀಕಿ ಭವನ ಕಾಮಗಾರಿಗೆ ಸರ್ಕಾರ ವತಿಯಿಂದ ಹೆಚ್ಚಿನ ಅನುದಾನ ದೊರಕಿಸಿಕೊಡುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ಕೆ.ಮಹದೇವ್, ಸಮಾಜದ ಜನಪ್ರತಿನಿಧಿಗಳಾದ ತಾ.ಪಂ ಅಧ್ಯಕ್ಷೆ ಕೆ.ಆರ್ ನಿರೂಪ, ಜಿ.ಪಂ ಸದಸ್ಯ ಜಯಕುಮಾರ್, ಸಮಾಜದ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಮತ್ತು ಸಮಾಜ ಸೇವಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಆರ್ಎಂಸಿ ಬಳಿಯಿಂದ ಶ್ರೀ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಅಲಂಕರಿಸಿ ಪೂರ್ಣಕುಂಭ ಸ್ವಾಗತ, ವೀರಗಾಸೆ, ಕಂಸಾಳೆ, ಡೊಳ್ಳು ನಗಾರಿ ವಿಶೇಷ ವಾದ್ಯಗಳೊಂದಿಗೆ ಕನ್ನಂಬಾಡಿಯಮ್ಮ ದೇವಾಲಯದವರೆಗೆ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭ ತಾ.ಪಂ ಅಧ್ಯಕ್ಷೆ ಕೆ.ಆರ್ ನಿರೂಪ, ಜಿ.ಪಂ ಸದಸ್ಯ ಜಯಕುಮಾರ್, ಮೈಮೂಲ್ ನಿರ್ದೇಶಕ ಪಿ.ಎಂ ಪ್ರಸನ್ನ, ತಾ.ಪಂ ಸದಸ್ಯರಾದ ಮೋಹನ್ ರಾಜ್, ಮಲ್ಲಿಕಾರ್ಜುನ , ಆರ್.ಎಸ್ ಮಹದೇವ್, ರಂಗಸ್ವಾಮಿ, ಪಂಕಜ ರವಿ, ಎಸ್. ರಾಮು, ಮುಖಂಡರಾದ ದೇವಪ್ಪ ನಾಯಕ, ದೇವರಾಜ್, ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ, ತಾ.ಪಂ ಇಒ ಡಿ.ಸಿ ಶ್ರುತಿ, ಸರ್ಕಲ್ ಇನ್ಸ್ ಪೆಕ್ಟರ್ ಬಿ.ಆರ್ ಪ್ರದೀಪ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಮೇಗೌಡ, ಪುರಸಭಾ ಮುಖ್ಯಾಧಿಕಾರಿ ಚಂದ್ರಕುಮಾರ್, ಬಿಇಒ ರಾಮಾರಾಧ್ಯ, ತಾಲೂಕು ನಾಯಕ ಸಮಾಜ ಅಧ್ಯಕ್ಷ ಪುಟ್ಟಯ್ಯ, ಉಪಾಧ್ಯಕ್ಷ ರಾಮಚಂದ್ರು, ಕಾರ್ಯದರ್ಶಿಗಳಾದ ಹರೀಶ್, ಸಿದ್ದೇಶ್, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರುಗಳು ಹಾಜರಿದ್ದರು.