ವಿಶ್ವಕರ್ಮ ಸಮಾಜವು ಕೇವಲ ಒಂದು ವರ್ಗಕ್ಕೆ ಸೀಮಿತವಾಗದೆ ಎಲ್ಲ ವರ್ಗದ ಜನರಿಗೂ ಅಗತ್ಯವಾಗಿರುವ ಸಮಾಜವಾಗಿದೆ ಎಂದು ವಿಶ್ವಕರ್ಮ ಸೇವಾ ಸಮಾಜದ ತಾಲ್ಲೂಕು ಪ್ರಧಾನಕಾರ್ಯದರ್ಶಿ ಬಿ.ಎಸ್. ಹಿರಣ್ಣಯ್ಯ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ವಿಶ್ವದ ಆಂತರ್ಯವನ್ನು ಅರಿತು ಕೆಲಸ ಮಾಡುವ ಸಮಾಜ ವಿಶ್ವಕರ್ಮ ಸಮಾಜ ಎಂದು ಸಾಮವೇದ ಹಾಗೂ ಋಗ್ವೇದದಲ್ಲಿ ಉಲ್ಲೇಖಿಸಲಾಗಿದೆ ಎಂದು ಆಧುನಿಕತೆಯಿಂದಾಗಿ ತಮ್ಮ ಕುಲಕಸುಬುಗಳನ್ನು ಕಳೆದುಕೊಂಡು ಬೀದಿಗೆ ಬೀಳಬೇಕಾದ ಪರಿಸ್ಥಿತಿ ಇಂದು ಎದುರಾಗಿದ್ದು ಯಂತ್ರೋಪಕರಣಗಳ ಉತ್ಪಾದನೆಯಿಂದಾಗಿ ಕುಲಕಸುಬಿಗೆ ಆತಂಕ ತಂದೊಡ್ಡಿದೆ ಎಂದರು. ಮರದ ಕೆಲಸ, ಶಿಲ್ಪಕಲೆ, ಕಬ್ಬಿಣದ ಕೆಲಸ, ಬಂಗಾರದ ಕೆಲಸ ಮತ್ತು ವೈದಿಕ ಕೆಲಸಗಳಿಗೆ ಹೆಸರುವಾಸಿಯಾಗಿರುವ ವಿಶ್ವಕರ್ಮ ಸಮಾಜವು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಭಾರತದ ಉದ್ದಗಲಕ್ಕೂ ತನ್ನ ವಿಶಾಲ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ ಎಂದರು.
ಶಾಸಕ ಕೆ.ಮಹದೇವ್ ಮಾತನಾಡಿ ವಿಶ್ವಕರ್ಮ ನಿಗಮ ಮಂಡಳಿಗೆ ಹೆಚ್ಚಿನ ಅನುದಾನ ಮೀಸಲಿಡುವಂತೆ ಸರ್ಕಾರಕ್ಕೆ ಒತ್ತಡ ಹೇರಲಾಗುವುದು ಎಂದರು. ವಿಶ್ವಕರ್ಮ ಜನಾಂಗದ ಕುಲಕಸುಬಿಗೆ ಮೊದಲಿನಷ್ಟು ವಿಫುಲ ಅವಕಾಶಗಳು ಸಿಗುತ್ತಿಲ್ಲವಾದ್ದರಿಂದ ಆ ಸಮಾಜದ ಯುವಜನತೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಕಿವಿಮಾತು ಹೇಳಿದರು. ಜಯಂತಿ ಆಚರಣೆಗಳು ಕೇವಲ ಒಂದು ವರ್ಗದ ಜನಕ್ಕೆ ಮಾತ್ರ ಮೀಸಲಾಗದೆ ಎಲ್ಲಾ ವರ್ಗದ ಜನರನ್ನು ಈ ಆಚರಣೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕಿದೆ ಎಂದರು.
ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಎಪಿಎಂಸಿ ಪ್ರಾಂಗಣದ ಬಳಿಯಿಂದ ವಿಶ್ವಕರ್ಮ ಸಮಾಜದ ಮುಖಂಡರು ಬಿ.ಎಂ. ರಸ್ತೆಯ ಮೂಲಕ ಮೆರವಣಿಗೆ ನಡೆಸಿದರು.
ಸಮಾರಂಭದಲ್ಲಿ ತಾಪಂ ಅಧ್ಯಕ್ಷೆ ಕೆ.ಆರ್.ನಿರೂಪ, ಜಿ.ಪಂ. ಸದಸ್ಯರಾದ ಕೆ.ಸಿ. ಜಯಕುಮಾರ್, ಕೌಶಲ್ಯ ಲೋಕೇಶ್, ತಾ.ಪಂ. ಸದಸ್ಯರಾದ ಎ.ಟಿ. ರಂಗಸ್ವಾಮಿ, ಮೋಹನ್ ರಾಜ್, ಎಪಿಎಂಸಿ ಅಧ್ಯಕ್ಷ ರಾಜಯ್ಯ, ಉಪಾಧ್ಯಕ್ಷ ಮೋಹನ್ ಕುಮಾರ್, ತಹಶೀಲ್ದಾರ್ ಶ್ವೇತಾ. ಎನ್. ರವೀಂದ್ರ , ತಾಪಂ ಇಒ ಡಿ.ಸಿ. ಶ್ರುತಿ, ಜನಾಂಗದ ಮುಖಂಡರಾದ ಚಂದ್ರು, ನಾಗಯ್ಯ, ಲೋಕಪಾಲಯ್ಯ, ಸೇರಿದಂತೆ ಮತ್ತಿತರರು ಹಾಜರಿದ್ದರು.