ಪಿರಿಯಾಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶಾಸಕ ಕೆ.ಮಹದೇವ್ ಲ್ಯಾಪ್‌ಟಾಪ್ ವಿತರಿಸಿದರು.

ಶಿಕ್ಷಣವನ್ನು ಪ್ರೋತ್ಸಾಹಿಸಲು ಸರ್ಕಾರವು ನೀಡುತ್ತಿರುವ ಉಚಿತ ಯೋಜನೆಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಕೆ.ಮಹದೇವ್ ಹೇಳಿದರು.
ಪಟ್ಟಣದ ಹರವೆಮಲ್ಲರಾಜಪಟ್ಟಣ ಬಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಅವರು ಮಾತನಾಡಿದರು. ಶಿಕ್ಷಣ ಮನುಷ್ಯನ ಜೀವನದ ದಿಕ್ಕು ಬದಲಿಸುವ ಶಕ್ತಿ ಹೊಂದಿದ್ದು, ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಕಲಿಕೆಯೊಂದಿಗೆ ಉನ್ನತ ಫಲಿತಾಂಶ ಪಡೆಯುವುದರ ಮೂಲಕ ಸಮಾಜದಲ್ಲಿ ಇತರರಿಗೆ ಮಾದರಿಯಾಗಬೇಕು ಎಂದರು.
ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸದ ಬಗ್ಗೆ ಕಾಲೇಜಿನ ವಿದ್ಯಾರ್ಥಿಗಳು ಇತ್ತೀಚೆಗೆ ಪ್ರತಿಭಟಿಸಿದ ವಿಷಯ ತಿಳಿದು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಮಾತನಾಡಿ, ಸಮಸ್ಯೆ ಬಗೆ ಹರಿಸುವಂತೆ ತಿಳಿಸಲಾಗಿದ್ದು, ಈ ಸಮಸ್ಯೆ ರಾಜ್ಯಾದ್ಯಂತ ಎಲ್ಲಾ ಕಾಲೇಜುಗಳಲ್ಲಿ ಇರುವುದರಿಂದ ಮುಂದಿನ ಬಜೆಟ್ ಅಧಿವೇಶನ ಸಮಯದಲ್ಲಿ ಉನ್ನತ ಶಿಕ್ಷಣ ಸಚಿವರೊಂದಿಗೆ ಮಾತನಾಡುವುದಾಗಿ ಹೇಳಿದರು.
ಸಿಡಿಸಿ ಸಭೆ: ಇದೇ ವೇಳೆ ಶಾಸಕ ಕೆ.ಮಹದೇವ್ ಕಾಲೇಜಿನಲ್ಲಿ ಸಿಡಿಸಿ ಸದಸ್ಯರ ಸಭೆ ನಡೆಸಿ ಕಾಲೇಜು ಅಭಿವೃದ್ಧಿ ವಿಷಯಗಳು ಹಾಗೂ ಕುಂದುಕೊರತೆ ಬಗ್ಗೆ ಚರ್ಚಿಸಿದರು. ಪ್ರಾಂಶುಪಾಲ ಡಾ.ಡಿ.ದೇವರಾಜ್ ಕಾಲೇಜಿಗೆ ತುರ್ತಾಗಿ ಅಗತ್ಯವಿರುವ ದೈಹಿಕ ಶಿಕ್ಷಕರು, ಭೂಗೋಳಶಾಸ್ತç ಅಧ್ಯಾಪಕರ ಖಾಯಂ ಹುದ್ದೆ ನೇಮಕಾತಿ, ಕಛೇರಿ ಸಿಬ್ಬಂದಿ ಕೊರತೆ, ಕುಡಿಯುವ ನೀರಿನ ವ್ಯವಸ್ಥೆ, ಮೈದಾನದಲ್ಲಿ ಗ್ಯಾಲರಿ ನಿರ್ಮಾಣ, ಸಿಮೆಂಟ್ ರಸ್ತೆ ಹಾಗೂ ಗಾರ್ಡನ್ ನಿರ್ಮಾಣ, ಸಿಮೆಂಟ್ ಬೆಂಚ್‌ಗಳ ಅಳವಡಿಕೆ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಿಡಿಸಿ ಸದಸ್ಯರಾದ ರಘುನಾಥ್, ಟಿ.ರಾಜು, ಗಿರೀಶ್, ಮೋಹನ್, ಗೋಪಾಲ್, ಸಹ ಪ್ರಾಧ್ಯಾಪಕರಾದ ವಿಶ್ವನಾಥ್, ವಿರೇಶ್, ಸಾಗರ್, ಮಂಜುನಾಥ್, ದೈಹಿಕ ಶಿಕ್ಷಣ ನಿರ್ದೇಶಕಿ ಜಯಂತಿ, ಗ್ರಂಥಪಾಲಕರಾದ ದೀಪಿಕ ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top