ರಾಜ್ಯದಲ್ಲಿ ಯಾವುದೇ ಸರ್ಕಾರವಿದ್ದರೂ ತಾಲೂಕಿನ ಅಭಿವೃದ್ಧಿಗಾಗಿ ಹೆಚ್ಚು ಅನುದಾನ ದೊರಕಿಸುವ ನಿಟ್ಟಿನಲ್ಲಿ ಪ್ರಮಾಣಿಕವಾಗಿ ಯತ್ನಿಸುತ್ತೇನೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.
ರೂ.10.77 ಕೋಟಿ ವೆಚ್ಚದಲ್ಲಿ ತಾಲ್ಲೂಕಿನ ಮುತ್ತೂರು, ಆಯರ ಬೀಡು, ಅಕ್ಕೆಮಾಳ, ಹುಣಸವಾಡಿ ಗ್ರಾಮಗಳ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುರುವಾರ ಚಾಲನೆ ನೀಡಿ ಹುಣಸವಾಡಿ ಗ್ರಾಮದಲ್ಲಿ ಮಾತನಾಡಿದರು. ರಾಜ್ಯ ಸರ್ಕಾರ ಜಿಲ್ಲೆಗೆ ಹಿಂದೆ ನೀಡಿದ್ದ 50 ಕೋಟಿ ಅನುದಾನವನ್ನು ಈಗಿನ ಬಿಜೆಪಿ ಸರ್ಕಾರ ಹಿಂದೆ ಪಡೆದಿದೆ ಈ ಸನ್ನಿವೇಶದಲ್ಲಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾಗಲು ಸಹ ಯೋಚಿಸಲಾಗುತ್ತಿದೆ ಎಂದು ತಿಳಿಸಿದರು. ಈ ಹಿಂದೆ ಯಾವ ಸರ್ಕಾರ ಸಹ ಬಿಡುಗಡೆಗೊಳಿಸದ ಹಣವನ್ನು ವಾಪಸ್ ತೆಗೆದ ಕೊಂಡ ಉದಾಹರಣೆಗಳಿಲ್ಲ, ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದ್ದು ತಾಲ್ಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿ ಸಮಸ್ಯೆ ಉದ್ಬವಿಸಲಿದೆ ಎಂದು ಅಭಿಪ್ರಾಯಪಟ್ಟರು. ಮುಂದಿನ ದಿನಗಳಲ್ಲಿ ಸರ್ಕಾರದ ಮಟ್ಟದಿಂದ ಹಣ ತಂದು ಅಭಿವೃದ್ಧಿ ಪಡಿಸಲು ಪ್ರಾಮಾಣಿಕವಾಗಿ ಯತ್ನಿಸುವುದಾಗಿ ತಿಳಿಸಿದರು. ಗ್ರಾಮಸ್ಥರ ಎಲ್ಲಾ ಕೆಲಸಗಳನ್ನು ಒಮ್ಮೆಲೆ ಮಾಡಲು ಸಾಧ್ಯವಿಲ್ಲ ಹಂತಹಂತವಾಗಿ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಜಯಕುಮಾರ್, ತಾ.ಪಂ.ಅಧ್ಯಕ್ಷೆ ಕೆ.ಆರ್.ನಿರೂಪಾ, ಸದಸ್ಯರಾದ ಎಸ್.ರಾಮು, ರಂಗಸ್ವಾಮಿ, ಮುತ್ತೂರು ಗ್ರಾ.ಪಂ.ಸುನಂದಾ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್.ರವಿ, ಪಿಡಬ್ಲ್ಯೂಡಿ ಎಇಇ ನಾಗರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.