ಶನಿವಾರ ಬೆಳಗ್ಗೆ ಸ್ಥಳೀಯ ಪುರಸಭಾ ಸದಸ್ಯ ಪಿ.ಸಿ ಕೃಷ್ಣ ಅವರೊಂದಿಗೆ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿದ ಶಾಸಕ ಕೆ.ಮಹದೇವ್ ಸಂಚಾರ ನಿಯಂತ್ರಕರು ಹಾಗೂ ಘಟಕ ವ್ಯವಸ್ಥಾಪಕರಿಂದ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು, ಸಂಚಾರ ನಿಯಂತ್ರಕರ ಕೊಠಡಿಗೆ ಭೇಟಿ ನೀಡಿದ ವೇಳೆ ಕಾಮಗಾರಿ ನವೀಕರಣ ವೇಳೆ ವಿದ್ಯುತ್ ಸಂಪರ್ಕದ ವೈರ್ ಗಳಿಗೆ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ಸಿಬ್ಬಂದಿಗಳು ಆ ಸ್ಥಳದಲ್ಲಿಯೇ ಕೆಲಸ ನಿರ್ವಹಿಸುತ್ತಿರುವುದನ್ನು ಕಂಡು ಗುತ್ತಿಗೆದಾರನ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಸ್ಥಳಕ್ಕೆ ಗುತ್ತಿಗೆದಾರರನ್ನು ಕರೆಯಿಸಿ ಆಕಸ್ಮಿಕವಾಗಿ ಏನಾದರೂ ಅನಾಹುತಗಳು ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನಿಸಿ ಶೀಘ್ರ ಅವ್ಯವಸ್ಥೆ ಸರಿಪಡಿಸುವಂತೆ ಸೂಚಿಸಿದರು, ನಿಲ್ದಾಣದಲ್ಲಿ ನವೀಕರಣಗೊಳ್ಳುತ್ತಿರುವ ಶೌಚಾಲಯ ಸ್ಥಳಗಳಿಗೆ ತೆರಳಿ ಸಮರ್ಪಕವಾದ ನೀರಿನ ವ್ಯವಸ್ಥೆ ಹಾಗೂ ಸೂಕ್ತ ಚರಂಡಿ ವ್ಯವಸ್ಥೆ ಕೈಗೊಳ್ಳುವಂತೆ ಸೂಚಿಸಿದರು, ನಿಲ್ದಾಣದಲ್ಲಿನ ಉಪಾಹಾರ ಗೃಹಕ್ಕೆ ಭೇಟಿ ನೀಡಿ ಉತ್ತಮ ಗುಣಮಟ್ಟದ ಆಹಾರ ಪೂರೈಕೆ ಹಾಗೂ ಶುಚಿತ್ವ ಕಾಪಾಡುವಂತೆ ಮಾಲೀಕರು ಹಾಗೂ ಸಿಬ್ಬಂದಿಗಳಿಗೆ ಸಲಹೆ ನೀಡಿದರು, ಈ ಸಂದರ್ಭ ತಮ್ಮ ಊರುಗಳಿಗೆ ತೆರಳಲು ಬಸ್ ಗಳಿಗಾಗಿ ಕಾಯುತ್ತಿದ್ದ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ತಮ್ಮ ಗ್ರಾಮಗಳಿಗೆ ಶಾಲಾ ಕಾಲೇಜು ಸಮಯದಲ್ಲಿ ಸರಿಯಾದ ಸಮಯಕ್ಕೆ ಬಸ್ ಸಂಚಾರ ವ್ಯವಸ್ಥೆ ಬಗ್ಗೆ ಕೋರಿದಾಗ ಸ್ಥಳದಲ್ಲಿದ್ದ ಘಟಕ ವ್ಯವಸ್ಥಾಪಕ ದರ್ಶನ್ ಅವರಿಗೆ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಿಗೆ ತೆರಳಲು ಸಾರಿಗೆ ವ್ಯವಸ್ಥೆಯಿಂದ ಅನಾನುಕೂಲವಾಗದಂತೆ ಎಚ್ಚರವಹಿಸುವಂತೆ ತಿಳಿಸಿದರು, ನಿಲ್ದಾಣದಲ್ಲಿನ ಪೌರಕಾರ್ಮಿಕರಿಗೆ ಹಾಗೂ ಸ್ವಚ್ಛತಾ ಸಿಬ್ಬಂದಿಗಳಿಗೆ ಗುತ್ತಿಗೆದಾರರು ಸರಿಯಾದ ಸಮಯಕ್ಕೆ ವೇತನ ಪಾವತಿ ಹಾಗೂ ಸ್ವಚ್ಛತಾ ಪರಿಕರಗಳನ್ನು ವಿತರಿಸಲು ಸೂಚಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಸುದ್ದಿಗಾರರೊಂದಿಗೆ ಶಾಸಕ ಕೆ.ಮಹದೇವ್ ಮಾತನಾಡಿ ಪಟ್ಟಣದಲ್ಲಿನ ಸಾರಿಗೆ ಬಸ್ ನಿಲ್ದಾಣದ ಕುಂದುಕೊರತೆಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆ ಸಮಸ್ಯೆಗಳ ವಿವರವನ್ನು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಅವರಿಗೆ ತಿಳಿಸಿ ಖುದ್ದು ಅವರನ್ನು ಪಟ್ಟಣದ ಬಸ್ ನಿಲ್ದಾಣಕ್ಕೆ ಭೇಟಿ ಮಾಡಿಸಿ ಸಮಸ್ಯೆಗಳ ಮನವರಿಕೆ ಮಾಡಿ ಅನುದಾನಕ್ಕಾಗಿ ಮನವಿ ಮಾಡಿದ್ದೆ, ಇದಕ್ಕೆ ಸ್ಪಂದಿಸಿದ ಸಾರಿಗೆ ಸಚಿವರು ಬಸ್ ನಿಲ್ದಾಣದ ನವೀಕರಣಕ್ಕಾಗಿ ರೂ.1 ಕೋಟಿ ಮಂಜೂರು ನೀಡಿದ್ದರೂ ಕಾಮಗಾರಿಗಳ ವಿಳಂಬದ ಬಗ್ಗೆ ದೂರುಗಳು ಬಂದ ಹಿನ್ನೆಲೆ ಬಸ್ ನಿಲ್ದಾಣಕ್ಕೆ ಇಂದು ಭೇಟಿ ನೀಡಿ ನಿಲ್ದಾಣದ ಮೇಲ್ಛಾವಣಿ, ನೆಲಹಾಸು, ಶೌಚಾಲಯ, ಉಪಾಹಾರ ಗೃಹ, ಸಂಚಾರ ನಿಯಂತ್ರಕರ ಗೃಹ, ಹಾಗೂ ಪ್ರಯಾಣಿಕರಿಗೆ ಕುಳಿತುಕೊಳ್ಳುವ ಆಸನಗಳ ವ್ಯವಸ್ಥೆಗಳ ಕಾಮಗಾರಿಗಳನ್ನು ವೀಕ್ಷಿಸಿ ಕಾಮಗಾರಿಯನ್ನು ಬೇಗ ಮುಗಿಸಿ ಸಾರ್ವಜನಿಕರಿಗೆ ಅನುವು ಮಾಡಿಕೊಡುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ ಎಂದರು, ಬಸ್ ನಿಲ್ದಾಣದ ಮುಂಭಾಗದ ಸ್ಥಳದ ಸಮಸ್ಯೆಯನ್ನು ಸಾರಿಗೆ ಅಧಿಕಾರಿಗಳು ಹಾಗೂ ಸಂಬಂಧಿಸಿದವರು ಮಾತುಕತೆ ನಡೆಸುವುದರ ಮುಖಾಂತರ ಶೀಘ್ರ ಬಗೆಹರಿಸಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭ ಪುರಸಭೆ ಸದಸ್ಯ ಪಿ.ಸಿ ಕೃಷ್ಣ, ಘಟಕ ವ್ಯವಸ್ಥಾಪಕ ದರ್ಶನ್, ಸಾರಿಗೆ ನಿಯಂತ್ರಕರಾದ ಚೆಲುವಯ್ಯ, ಲಕ್ಕಯ್ಯ, ಪ್ರಕಾಶ್, ಹಾಜರಿದ್ದರು.