ವೈಯಕ್ತಿಕ ಹಕ್ಕುಪತ್ರ ವಿತರಣೆಗಾಗಿ ಆಗ್ರಹಿಸಿ ಪಟ್ಟಣದ ತಾ.ಪಂ ಕಚೇರಿ ಮುಂಭಾಗ ಕಳೆದ ಐದು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದ ತಾಲೂಕಿನ ವಿವಿಧೆಡೆಯ ಹಾಡಿ ನಿವಾಸಿಗಳು ಶುಕ್ರವಾರ ಸಂಜೆ ಶಾಸಕ ಕೆ.ಮಹದೇವ್ ಅವರು ನೀಡಿದ ಆಶ್ವಾಸನೆ ಮೇರೆಗೆ ಧರಣಿ ಹಿಂಪಡೆದರು.

ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ನೇತೃತ್ವದಲ್ಲಿ ತಾಲೂಕಿನ ವಿವಿಧೆಡೆಯ ಹಾಡಿ ನಿವಾಸಿಗಳು ವೈಯಕ್ತಿಕ ಹಕ್ಕುಪತ್ರ ವಿತರಣೆಗೆಗಾಗಿ ಆಗ್ರಹಿಸಿ ಕಳೆದ ಸೋಮವಾರದಿಂದ ಧರಣಿ ಆರಂಭಿಸಿ ಸ್ಥಳದಲ್ಲೇ ಅಡುಗೆ ಮಾಡಿ ಪ್ರತಿಭಟಿಸಿ ರಾತ್ರಿ ಸಮಯ ಕೊರೆಯುವ ಚಳಿಯಲ್ಲೇ ವಾಸ್ತವ್ಯ ಹೂಡಿ ಧರಣಿ ನಡೆಸುತ್ತಿದ್ದು ತಹಸೀಲ್ದಾರ್, ಇಒ, ಸಮಾಜ ಕಲ್ಯಾಣಾಧಿಕಾರಿ ಸೇರಿದಂತೆ ಯಾವುದೇ ಅಧಿಕಾರಿಗಳ ಮನವಿಗೆ ಮಣಿದಿರಲಿಲ್ಲ, ಶುಕ್ರವಾರ ಸಂಜೆ ಶಾಸಕರು 

 ಧರಣಿ ನಿರತ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಹಾಡಿ ನಿವಾಸಿಗಳೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಿ ಅಹೋರಾತ್ರಿ ಧರಣಿ ಕೈಬಿಡಲಾಯಿತು.

   ಈ ವೇಳೆ ಅಬ್ಬಳತಿ ಹಾಡಿ ಗ್ರಾ.ಪಂ ಸದಸ್ಯೆ ಜಾನಕಮ್ಮ, ಬುಡಕಟ್ಟು ಸಮಾಜದ ರಾಜ್ಯ ಮುಖಂಡ ಶೈಲೇಂದ್ರ ಕುಮಾರ್ ಮಾತನಾಡಿ ವೈಯಕ್ತಿಕ ಹಕ್ಕುಪತ್ರ ವಿಚಾರಣೆಗಾಗಿ ಹಲವು ವರ್ಷಗಳಿಂದ ಹಾಡಿ ನಿವಾಸಿಗಳೊಂದಿಗೆ ಧರಣಿ ಕುಳಿತ ಸಂದರ್ಭ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಭರವಸೆಯ ಮಾತುಗಳಿಂದ ಧರಣಿ ಹಿಂಪಡೆದು ಹಕ್ಕುಪತ್ರ ವಿತರಣೆಯ ಆಶಾ ಭಾವನೆಯಲ್ಲಿ ಇದ್ದರೂ ಸಹ ಈವರೆಗೂ ವೈಯಕ್ತಿಕ ಹಕ್ಕುಪತ್ರ  ವಿತರಣೆಯಾಗಿಲ್ಲ, ಸಮಸ್ಯೆ ಸಂಬಂಧ ಶಾಸಕರು ಉಪವಿಭಾಗಾಧಿಕಾರಿ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಹಿನ್ನೆಲೆ ಧರಣಿ ಹಿಂಪಡೆಯುತ್ತಿದ್ದು ಈ ಬಾರಿಯಾದರೂ ಹಕ್ಕುಪತ್ರ ವಿತರಣೆಯಾಗಿ ಹಾಡಿ ನಿವಾಸಿಗಳ ಸಮಸ್ಯೆ ಶಾಶ್ವತ ಪರಿಹಾರವಾಗಲಿ ಎಂದರು.

   ಶಾಸಕ ಕೆ.ಮಹದೇವ್ ಮಾತನಾಡಿ ಹಕ್ಕುಪತ್ರ ವಿತರಣೆಗಾಗಿ ತಿರಸ್ಕರಿಸಿರುವ ಅರ್ಜಿಗಳ ಮರುಪರಿಶೀಲನೆಗೆ ಶೀಘ್ರ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಹಿನ್ನೆಲೆ ಉಪ ವಿಭಾಗಾಧಿಕಾರಿಯವರು ಡಿ.19 ರಂದು ದಿನಾಂಕ ನಿಗದಿ ಪಡಿಸಿರುವ ಹಿನ್ನೆಲೆ ಅದಕ್ಕೂ ಮುಂಚೆ ಡಿ.13 ರಂದು ಅಧಿಕಾರಿಗಳು ಹಾಗೂ ಹಾಡಿ ಮುಖಂಡರುಗಳ ಸಭೆ ನಡೆಸಿ ತಾಲೂಕಿನ ಹಾಡಿ ನಿವಾಸಿಗಳ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿ ಸ್ಥಳದಲ್ಲಿ ಹಾಜರಿದ್ದ ತಹಸೀಲ್ ಶ್ವೇತಾ ಎನ್ ರವೀಂದ್ರ, ತಾ.ಪಂ ಇಒ ಡಿ.ಸಿ ಶ್ರುತಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ ಅವರೊಂದಿಗೆ ಚರ್ಚಿಸಿ ಹಾಡಿ ನಿವಾಸಿಗಳ ಸಮಸ್ಯೆ ಸಂಬಂಧ ತಮಗೆ ಮತ್ತೊಮ್ಮೆ ಪದೇ ಪದೇ ವಿಷಯ ಜ್ಞಾಪಕ ಮಾಡುವೆ ಶೀಘ್ರ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

     ಧರಣಿ ಹಿಂಪಡೆದಿದ್ದು ರಾತ್ರಿ ಸಮಯವಾದ್ದರಿಂದ ಹಾಡಿ ನಿವಾಸಿಗಳು ತಮ್ಮ ಹಾಡಿಗಳಿಗೆ ತಲುಪಲು ಅನಾನುಕೂಲವಾಗುವ ಹಿನ್ನೆಲೆ ಎಲ್ಲರಿಗೂ ಊಟ ಹಾಗೂ ವಸತಿ ವ್ಯವಸ್ಥೆ ಮಾಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

     ಈ ವೇಳೆ ಶಾಸಕರ ಪುತ್ರ ಮೈಮುಲ್ ನಿರ್ದೇಶಕ ಪಿ.ಎಂ ಪ್ರಸನ್ನ, ತಾಲೂಕಿನ ವಿವಿಧ ಹಾಡಿಯ ನಿವಾಸಿಗಳು ಹಾಜರಿದ್ದರು. 

Leave a Comment

Your email address will not be published. Required fields are marked *

error: Content is protected !!
Scroll to Top