ಕಳಪೆ ಗುಣಮಟ್ಟದ ಕಾಮಗಾರಿಗಳಿಗೆ ಆದ್ಯತೆ ನೀಡಿದರೆ ಶಿಸ್ತು ಕ್ರಮ ಜರುಗಿಸುವುದಾಗಿ ಶಾಸಕ ಕೆ.ಮಹದೇವ್ ಭೂಸೇನಾ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ತಾಲೂಕು ಆಡಳಿತ ಭವನದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ಭೂಸೇನಾ ಇಲಾಖೆ ವತಿಯಿಂದ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ರಸ್ತೆಗಳು ಕಳಪೆ ಗುಣಮಟ್ಟದಿಂದ ಕೂಡಿರುವ ಬಗ್ಗೆ ದೂರುಗಳ ಬಂದ ಹಿನ್ನೆಲೆ ಭೂಸೇನಾ ನಿಗಮದ ಅಧಿಕಾರಿ ರಮೇಶ್ ಅವರಿಗೆ ತರಾಟೆ ತೆಗೆದುಕೊಂಡು ಶಾಸಕರು ಮಾತನಾಡಿದರು, ಸರ್ಕಾರದಿಂದ ಸಾರ್ವಜನಿಕರ ಉಪಯೋಗಕ್ಕಾಗಿ ನಡೆಯುವ ಕೆಲಸಗಳು ದೀರ್ಘ ಕಾಲ ಬಾಳಿಕೆ ಬರುವಂತಾಗಿ ಸಾರ್ವಜನಿಕರಿಂದ ಮೆಚ್ಚುಗೆ ಪಡೆಯುವಂತಿರಬೇಕು, ಕೆಲಸಗಳ ಗುಣಮಟ್ಟ ಕಳಪೆಯಿಂದ ಕೂಡಿ ಸಾರ್ವಜನಿಕರಿಂದ ದೂರುಗಳು ಬಂದರೆ ನಾನು ಸಹಿಸುವುದಿಲ್ಲ, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ರಸ್ತೆಗಳ ನಿರ್ಮಾಣದ ಜೊತೆಗೆ ಅವುಗಳ ನಿರ್ವಹಣೆಯನ್ನು ತಮ್ಮ ಇಲಾಖೆಯವರೇ ನೋಡಿಕೊಳ್ಳಬೇಕು ಎಂದರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎನ್.ಪ್ರಭು ಮಾತನಾಡಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯ ಟೆಂಡರ್ ಕರೆದರೆ ಯಾವುದೇ ಗುತ್ತಿಗೆದಾರರು ಮುಂದೆ ಬರುತ್ತಿಲ್ಲ ಎಂದು ಅಸಹನೆ ವ್ಯಕ್ತಪಡಿಸಿ ಸ್ಥಳೀಯ ಗ್ರಾ.ಪಂ ಗಳಿಗೆ ನಿರ್ವಹಣೆ ವಹಿಸುವಂತೆ ಕೋರಿದರು.

    ಮುಂದಿನ ಕೆಡಿಪಿ ಸಭೆಯೊಳಗೆ ತಾಲೂಕಿನ 650 ಮನೆಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಸರಬರಾಜು ಹಾಗೂ ಹಾಡಿಗಳಿಗೆ ವಿದ್ಯುತ್ ಸೌಲಭ್ಯ ಒದಗಿಸಬೇಕು, ಪಂಚವಳ್ಳಿ ಉಪ ವಿಭಾಗ ತೆರೆಯಲು ಮತ್ತು ಮುತ್ತೂರು ಶಾಲೆಗೆ ನಿರಂತರ ಜ್ಯೋತಿ ಸಂಪರ್ಕಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು, ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಬಗ್ಗೆ ಸಾರ್ವಜನಿಕರು ದೂರಿದರೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಉಡಾಫೆ ಉತ್ತರಿಸುತ್ತಿರುವ ಬಗ್ಗೆ ದೂರುಗಳು ಬಂದಿದ್ದು ತಮ್ಮ ವರ್ತನೆ ಬದಲಿಸಿಕೊಳ್ಳಬೇಕು, ಅಂತ್ಯೋದಯ ಕಾರ್ಡ್  ದಾರರಿಗೆ ಸರ್ಕಾರ ಉಚಿತವಾಗಿ ವಿತರಿಸುವ ಸಿಎಫ್ಎಲ್ ಬಲ್ಬ್ ಗಳ ಮಾಹಿತಿ ನೀಡುವಂತೆ ಶಾಸಕರು ಚೆಸ್ಕಾಂ ಎಇಇ ಕಲೀಂ ಅವರಿಗೆ ಸೂಚಿಸಿದರು, ಇದೇ ವೇಳೆ ಜಿ.ಪಂ ಸದಸ್ಯೆ ಮಣಿ ಡಿ.ಟಿ ಸ್ವಾಮಿ ಮಾತನಾಡಿ ತಾಲೂಕಿನ ವಿವಿಧೆಡೆಯ ಆಯುರ್ವೇದಿಕ್ ಆಸ್ಪತ್ರೆಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದ್ದು ಕೂಡಲೇ ವಿದ್ಯುತ್ ಸಂಪರ್ಕಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

   ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ಕಾರ್ಡ್ ವಿತರಣೆಗೆ ಖಾಸಗಿಯವರು ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು ಅಂತಹವರ ಮಾಹಿತಿ ಪಡೆದು ಅವರ ಲೈಸೆನ್ಸ್ ರದ್ದು ಪಡಿಸಿ ಮತ್ತು ತಾಲೂಕಿನ ಎಲ್ಲ ಜನರಿಗೂ ಆಯುಷ್ಮಾನ್ ಕಾರ್ಡ್ ಮಾಹಿತಿ ನೀಡಿ ಕಾರ್ಡ್ ದೊರಕುವಂತೆ ಮಾಡಬೇಕು, ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ತಾಲೂಕಿನ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳು ನಿಗದಿತ ಸಮಯಕ್ಕೆ ಹಾಜರಿದ್ದು ಉತ್ತಮ ಸೇವೆ ನೀಡಬೇಕು  ಎಂದು ಶಾಸಕರು ತಾಲೂಕು ಆರೋಗ್ಯಾಧಿಕಾರಿ ನಾಗೇಶ್ ಹಾಗೂ ಪಟ್ಟಣದ ಆಸ್ಪತ್ರೆ ಆಡಳಿತಾಧಿಕಾರಿ ಶ್ರೀನಿವಾಸ್ ಅವರಿಗೆ ಸೂಚಿಸಿದರು, ಶೀಘ್ರದಲ್ಲೇ ಪಟ್ಟಣದ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳ ಕರ್ತವ್ಯದ ಹಾಜರಿಗೆ ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಲಾಗುವುದು ಎಂದು ಆಡಳಿತಾಧಿಕಾರಿ ಶ್ರೀನಿವಾಸ್ ತಿಳಿಸಿದರು.

    ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ್ ಮಾತನಾಡಿ ಕಳೆದ ಆಗಸ್ಟ್ ತಿಂಗಳಲ್ಲಿ 90 ಮಿಲಿ ಮೀಟರ್ ಮಳೆ ನಿಗದಿ ಇದ್ದು 235 ಮಿಲಿ ಮೀಟರ್ ಮಳೆ ಬಿದ್ದಿದ್ದರಿಂದ ಅತಿವೃಷ್ಟಿಯಾಗಿ ರೈತರ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ, ಅಂತಹ ರೈತರನ್ನು ಗುರುತಿಸಿ ಸರ್ಕಾರದ ಪರಿಹಾರ ಧನ ವಿತರಿಸುವ ಕಾರ್ಯ ಕೈಗೊಳ್ಳಲಾಗಿದೆ, ಇಲಾಖೆ ವತಿಯಿಂದ ರೈತರಿಗೆ ವಿತರಿಸುವ ಯಂತ್ರೋಪಕರಣಗಳು ಹಾಗೂ ಕೃಷಿ ಉತ್ಪನ್ನಗಳನ್ನು ನಿಗದಿತ ಸಮಯಕ್ಕೆ ತಲುಪಿಸಲಾಗುತ್ತಿದೆ, ಗೊಬ್ಬರ ಮಾರಾಟಗಾರರು ರೈತರಿಗೆ ಯೂರಿಯಾ ಗೊಬ್ಬರ ಮಾರಾಟ ಮಾಡಲು ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ದೂರು ಕೇಳಿಬಂದ ಹಿನ್ನೆಲೆ ತಾಲೂಕಿನ ತಾಲೂಕಿನ 120 ಅಂಗಡಿಗಳಲ್ಲಿ 60ರಿಂದ70 ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಿ ಕ್ರಮ ಕೈಗೊಳ್ಳಲಾಗಿದೆ ಎಂದರು, ರೈತರಿಗೆ ಕೃಷಿ ಇಲಾಖೆ ವತಿಯಿಂದ ಸಿಗುವ ಸವಲತ್ತುಗಳ ಮಾಹಿತಿಯನ್ನು ಸಕಾಲಕ್ಕೆ ತಲುಪಿಸುವಂತೆ ಶಾಸಕರು ಸೂಚಿಸಿದರು.

       ಕಂದಾಯ ಇಲಾಖೆ ವತಿಯಿಂದ ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ ಮಾತನಾಡಿ ತಾಲೂಕಿನ ವಿವಿಧೆಡೆ ಒತ್ತುವರಿಯಾಗಿರುವ ಸರ್ಕಾರಿ ಜಾಗ ಹಾಗೂ ಸ್ಮಶಾನ ಜಾಗಗಳನ್ನು ಭೂಮಾಪನ ಇಲಾಖೆ ವತಿಯಿಂದ ಸರ್ವೆ ನಡೆಸುವ ಕಾರ್ಯ ನಡೆಯುತ್ತಿದೆ ಶೀಘ್ರದಲ್ಲೇ ಒತ್ತುವರಿ ತೆರವುಗೊಳಿಸಲಾಗುವುದು ಎಂದರು.

     ಪಟ್ಟಣದ ಎಸ್ಐ ಗಣೇಶ್ ಮಾತನಾಡಿ ತಂಬಾಕು ಬೆಳೆಗಾರರ ಪ್ರತಿಭಟನೆ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಇದರಿಂದ ಕಾನೂನು ಸುವ್ಯವಸ್ಥೆಗೆ ಅಡ್ಡಿಯುಂಟಾಗುವ ಆತಂಕವಿದ್ದು ಅಗತ್ಯ ಕ್ರಮಕ್ಕಾಗಿ ಶಾಸಕರಿಗೆ ಮನವಿ ಮಾಡಿದರು, ಸಂಚಾರಿ ನಿಯಮಗಳ ಉಲ್ಲಂಘನೆಯಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಸೂಕ್ತ ಕ್ರಮ ಜರಗಿಸುವಂತೆ ಶಾಸಕರು ಆರಕ್ಷಕ ಇಲಾಖೆಗೆ ಸೂಚಿಸಿದರು, ಜಿ.ಪಂ ಸದಸ್ಯ ವಿ.ರಾಜೇಂದ್ರ ಮಾತನಾಡಿ ಕೊಪ್ಪ ವ್ಯಾಪ್ತಿಯಲ್ಲಿ ತಡರಾತ್ರಿಯಾದರೂ ಡಿಜೆ ಸೌಂಡ್ ಆರ್ಭಟ ಹೆಚ್ಚಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

    ಇದೇ ವೇಳೆ ಭೂಮಾಪನ ಇಲಾಖೆ ಅಧಿಕಾರಿ ಎಂ.ಕೆ ಪ್ರಕಾಶ್, ಲೋಕೋಪಯೋಗಿ ಎಇಇ ನಾಗರಾಜ್ ತಮ್ಮ ಇಲಾಖೆಗಳ ಕಾರ್ಯ ಚಟುವಟಿಕೆ ಮಾಹಿತಿ ನೀಡಿದರು. ಸಭೆಯಲ್ಲಿ ಶಿಕ್ಷಣ, ಸಣ್ಣ ನೀರಾವರಿ, ಹಿಂದುಳಿದ ವರ್ಗಗಳ ಇಲಾಖೆ, ಸಮಾಜ ಕಲ್ಯಾಣ, ತೋಟಗಾರಿಕೆ, ಮೀನುಗಾರಿಕೆ, ಪಶುಪಾಲನೆ, ಸಾರಿಗೆ, ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳ ಮಾಹಿತಿ ಪರಿಶೀಲನೆ ನಡೆಯಿತು.

      ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷೆ ಕೆ.ಆರ್ ನಿರೂಪ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಈರಯ್ಯ, ಇಒ ಡಿ ಸಿ ಶ್ರುತಿ, ಜಿ.ಪಂ ಸದಸ್ಯರಾದ ವಿ.ರಾಜೇಂದ್ರ, ಕೆ.ಸಿ ಜಯಕುಮಾರ್, ಮಣಿ ಡಿ.ಟಿ ಸ್ವಾಮಿ, ರುದ್ರಮ್ಮ ನಾಗಯ್ಯ, ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ ಹಾಗು ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.   

Leave a Comment

Your email address will not be published. Required fields are marked *

error: Content is protected !!
Scroll to Top