ತಾಲೂಕಿನ ವಿವಿಧ ಹಾಡಿಗಳಲ್ಲಿನ ನಿವಾಸಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ನಿಗಾ ವಹಿಸಿ ಹಾಡಿ ಜನರ ಸಂಕಷ್ಟಗಳಿಗೆ ಸ್ಪಂದಿಸುವಂತೆ ಶಾಸಕ ಕೆ.ಮಹದೇವ್ ಹೇಳಿದರು.

ತಾಲೂಕಿನ ಲಿಂಗಾಪುರ ಹಾಡಿಯಲ್ಲಿ ರೂ.10.80 ಲಕ್ಷ ವೆಚ್ಚದ ಅಂಗನವಾಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು, ತಾಲೂಕಿನ ಹಾಡಿ ಜನರು ವಾಸಸ್ಥಳದ ವೈಯಕ್ತಿಕ ಹಕ್ಕುಪತ್ರ ವಿತರಣೆ ಹಾಗೂ ಮೂಲಸೌಕರ್ಯ ಕೊರತೆ ನೀಗಿಸುವಂತೆ ಹಿಂದಿನಿಂದಲೂ ಹೋರಾಟಗಳನ್ನು ಮಾಡಿಕೊಂಡು ಬಂದಿರುವ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದ್ದು ಮುಂಬರುವ ಅಧಿವೇಶನದಲ್ಲಿ ಸಂಬಂಧಿಸಿದ ಇಲಾಖೆಗಳ ಸಚಿವರೊಂದಿಗೆ ಚರ್ಚಿಸಿ ಹಾಡಿ ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು, ಶಾಸಕನಾಗಿ ಆಯ್ಕೆಯಾದ ನಂತರ ಹಾಡಿಗಳಿಗೆ ಪ್ರಥಮ ಬಾರಿ ಭೇಟಿ ನೀಡಿದ ಸಂದರ್ಭ ವಿದ್ಯುತ್, ಕುಡಿಯುವ ನೀರು, ಉತ್ತಮ ರಸ್ತೆ ಕಲ್ಪಿಸುವ ಸಂಬಂಧ ಅಧಿಕಾರಿಗಳಿಗೆ ಸೂಚಿಸಿದ್ದರೂ ಸಹ ಕೆಲ ಅಧಿಕಾರಿಗಳು ನಿರ್ಲಕ್ಷ್ಯತನ ತೋರಿರುವುದಕ್ಕೆ ಕ್ರಮ ಜರುಗಿಸುವ ಎಚ್ಚರಿಕೆ ನೀಡಿ ಶೀಘ್ರ ಸಮಸ್ಯೆ ಬಗೆಹರಿಸುವಂತೆ ಹೇಳಿದರು.

    ಇದೇ ವೇಳೆ ತಾತನಹಳ್ಳಿ ಗ್ರಾಮದಲ್ಲಿ 43.13 ಲಕ್ಷ ವೆಚ್ಚದ ಗ್ರಾಮ ಪರಿಮಿತಿ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದರು.

   ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯ ಕೆ.ಸಿ ಜಯಕುಮಾರ್, ತಾಪಂ ಅಧ್ಯಕ್ಷೆ ಕೆ.ಆರ್ ನಿರೂಪಾ ರಾಜೇಶ್, ಸದಸ್ಯರಾದ ಟಿ.ಈರಯ್ಯ, ಮಾಜಿ ಸದಸ್ಯ ರಘುನಾಥ್, ಮುತ್ತೂರು ಗ್ರಾ.ಪಂ ಅಧ್ಯಕ್ಷ ಸುನಂದಾ ಹಾಗೂ ಸದಸ್ಯರುಗಳು, ಕಿರನಲ್ಲಿ ಗ್ರಾ.ಪಂ ಸದಸ್ಯರುಗಳು, ಸಿಡಿಪಿಒ ನವೀನ್, ಪಿಡಬ್ಲ್ಯುಡಿ ಎಇಇ ನಾಗರಾಜ್, ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.

    ಸನ್ಮಾನ ಸ್ವೀಕಾರ: ಪಟ್ಟಣದ ಜಾಮಿಯಾ ಮಸೀದಿ ಆವರಣದಲ್ಲಿ ಪಟ್ಟಣದ 4 ಮಸೀದಿಗಳ ವತಿಯಿಂದ ಶಾಸಕ ಕೆ. ಮಹದೇವ್ ಅವರನ್ನು ಸನ್ಮಾನಿಸಿ ಶಾದಿ ಮಹಲ್ ನಿರ್ಮಾಣ, ಮಹಿಳಾ ಸ್ವಸಹಾಯ ಸಂಘ ಭವನ ನಿರ್ಮಾಣ, ಹಾಗೂ ಉರ್ದು ಶಾಲೆಗೆ ಶಿಕ್ಷಕರ ನಿಯೋಜನೆ ಸಂಬಂಧ ಮನವಿ ಸಲ್ಲಿಸಲಾಯಿತು, ಈ ಸಂದರ್ಭ ಶಾಸಕ ಕೆ.ಮಹದೇವ್ ಮಾತನಾಡಿ ಮುಸ್ಲಿಂ ಸಮುದಾಯದವರು ಪಟ್ಟಣದಲ್ಲಿ ಶಾದಿ ಮಹಲ್ ನಿರ್ಮಾಣಕ್ಕೆ ಸೂಕ್ತ ಜಾಗ ಗುರುತಿಸಿದರೆ ಸರ್ಕಾರದ ವತಿಯಿಂದ ಅನುದಾನ ದೊರಕಿಸಿಕೊಡುವ ಭರವಸೆ ನೀಡಿದರು, ಮಹಿಳಾ ಸ್ವಸಹಾಯ ಸಂಘ ಭವನಕ್ಕೆ ತಮ್ಮ ಶಾಸಕರ ಅನುದಾನದಿಂದ ಹಣ ಬಿಡುಗಡೆಗೊಳಿಸುವುದಾಗ ತಿಳಿಸಿ, ಬಿಇಒ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಉರ್ದು ಶಾಲೆಗೆ ಶಿಕ್ಷಕರನ್ನು ನಿಯೋಜಿಸುವಂತೆ ತಿಳಿಸಿದರು.     ಈ ಸಂದರ್ಭ ಜಾಮಿಯಾ ಮಸೀದಿ ಅಧ್ಯಕ್ಷ ಅಬ್ದುಲ್ ಅಜೀಜ್, ಫಿರ್ದೋಸ್ ಮಸೀದಿ ಅಧ್ಯಕ್ಷ ಗಫಾರ್ ಷರೀಫ್, ಮಲಬಾರ್ ಮಸೀದಿ ಅಧ್ಯಕ್ಷ ಹನೀಫ್, ಮಸ್ಜಿದ್ ಮಾಮೂರ್ ಮಸೀದಿ ಅಧ್ಯಕ್ಷ ಅಬ್ದುಲ್ ಅಜೀಜ್, ಮುಖಂಡರಾದ ಅಮ್ಜದ್ ಷರೀಫ್, ಅನ್ಸಾರ್, ಮಹಮ್ಮದ್ ಶಫಿ, ವಾಸಿಂ ಅಹಮದ್, ಅಬ್ದುಲ್ ಸತ್ತಾರ್, ಇರ್ಫಾನ್ ಅಹ್ಮದ್, ಮುಶೀರ್ ಖಾನ್, ಸಯ್ಯದ್ ಫಯಾಜ್, ಸಮಾಜದ ಮುಖಂಡರುಗಳು ಹಾಜರಿದ್ದರು.   

Leave a Comment

Your email address will not be published. Required fields are marked *

error: Content is protected !!
Scroll to Top