ಕೊರೊನಾ ಸಂಕಷ್ಟ ಕಾಲದಲ್ಲಿಯು ಹಿಂಜರಿಯದೆ ತಾಲೂಕಿನ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತಿದ್ದೇನೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.

ತಾಲೂಕಿನ ವಿವಿಧೆಡೆ 1.09 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು, ತಮ್ಮ ಹಳ್ಳಿಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ಸಮಸ್ಯೆ ಬಗೆಹರಿಸುವಂತೆ ಸಾರ್ವಜನಿಕರು ಮನವಿ ನೀಡುತ್ತಾರೆ ಆದರೆ ಒಂದೇ ಬಾರಿಗೆ ಎಲ್ಲ ಕಡೆಯ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಮಂಜೂರು ಮಾಡಿಸುವುದು ಕಷ್ಟದ ವಿಚಾರ, ತಾಲೂಕಿನ ಸರ್ವ ಜನಾಂಗದ ಹಿತ ಕಾಪಾಡುವುದು ನನ್ನ ಗುರಿಯಾಗಿದ್ದು ಹಂತ ಹಂತವಾಗಿ ಆದ್ಯತೆಗನುಗುಣವಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತೇನೆ ಎಂದರು.

    ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದು ಸರ್ಕಾರ ಬದಲಾದ ಕಾರಣ ಹಲವು ಕಾಮಗಾರಿಗಳ ಅನುದಾನಕ್ಕೆ ತಡೆ ನೀಡಿದ್ದಾರೆ ಹೊರತು ಹಿಂಪಡೆದಿಲ್ಲ ವಿರೋಧ ಪಕ್ಷದ ಶಾಸಕನಾದರೂ ಸಂಬಂಧಿಸಿದ ಇಲಾಖೆ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮಾತನಾಡಿ ಹಂತ ಹಂತವಾಗಿ ಅನುದಾನ ಮಂಜೂರು ಮಾಡಿಸಿ ಅಭಿವೃದ್ಧಿಗೆ ಗಮನ ಹರಿಸುವುದಾಗಿ ಭರವಸೆ ನೀಡಿದರು, ಕೊರೊನಾ ಸಮಸ್ಯೆಯಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದ ಬಳಿ ಹಣದ ಕೊರತೆ ಉಂಟಾಗಿದ್ದರೂ ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವುದಾಗಿ  ಹೇಳಿದರು.

   ಈ ವೇಳೆ ಹರಿಲಾಪುರ ಮತ್ತು ದೊಡ್ಡಹರವೆ ಗ್ರಾಮಗಳಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ, ಆವರ್ತಿಯಲ್ಲಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಕಟ್ಟಡದ ನಿರ್ಮಾಣ, ಆಲನಹಳ್ಳಿಯಲ್ಲಿ ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಕೊಠಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು.     ಈ ಸಂದರ್ಭ ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ ರಂಗಸ್ವಾಮಿ, ಸದಸ್ಯರಾದ ಎಸ್.ರಾಮು, ಈರಯ್ಯ, ಮಲ್ಲಿಕಾರ್ಜುನ್, ಜಯಂತಿ ಸೋಮಶೇಖರ್, ಮಾಜಿ ಅಧ್ಯಕ್ಷ ಜವರಪ್ಪ,  ಪಿಡಬ್ಲ್ಯುಡಿ ಎಇಇ ನಾಗರಾಜ್, ಜಿ.ಪಂ ಎಇಇ ಪ್ರಭು, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್, ತಾ.ಪಂ ಸಹಾಯಕ ನಿರ್ದೇಶಕ ರಘುನಾಥ್, ಗ್ರಾಮೀಣಾಭಿವೃದ್ಧಿ ಶುದ್ಧ ಕುಡಿಯುವ ನೀರು ಇಲಾಖೆ ಎಇಇ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಮುಖಂಡರಾದ ರಘುನಾಥ್, ಕೃಷ್ಣಯ್ಯ, ಪರಮೇಶ್, ರಾಮೇಗೌಡ, ಉಪನ್ಯಾಸಕ ಪುಟ್ಟಮಾದಯ್ಯ, ನವೀನ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಜನಪ್ರತಿನಿಧಿಗಳು ಹಾಜರಿದ್ದರು.   

Leave a Comment

Your email address will not be published. Required fields are marked *

error: Content is protected !!
Scroll to Top