ದೇಶದ ಜನರ ಹಿತ ಕಾಯಲು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿ ವಿಶ್ವಕ್ಕೆ ಮಾದರಿಯಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ತಾಲೂಕಿನ ಪೂನಾಡಹಳ್ಳಿ ಗ್ರಾಮದಲ್ಲಿ ಸ್ವಮಿತ್ವ  ಯೋಜನೆಯಡಿ ಡ್ರೋಣ್ ತಂತ್ರಜ್ಞಾನ ಬಳಸಿ ಗ್ರಾಮಠಾಣ ಆಸ್ತಿ ಅಳತೆ ಕಾರ್ಯದ ವಿಶೇಷ ಗ್ರಾಮ ಸಭೆ ಉದ್ಘಾಟಿಸಿ ಅವರು ಮಾತನಾಡಿದರು, ಸ್ವಮಿತ್ವ ಯೋಜನೆಯ ಪ್ರಾರಂಭಿಕ ಹಂತವಾಗಿ ದೇಶದ ಕೆಲ ಸ್ಥಳಗಳಲ್ಲಿ ಅನುಷ್ಠಾನಗೊಳಿಸಿದ್ದು ಅದರಲ್ಲಿ ಮೈಸೂರು ಜಿಲ್ಲೆ ಸೇರಿರುವುದು ಸಂತಸದ ವಿಷಯ, ಈ ಯೋಜನೆ ಗ್ರಾಮ ಠಾಣಾ ವ್ಯಾಪ್ತಿಯ ಆಸ್ತಿ ಗುರುತಿಸಲು ಸಹಕಾರಿಯಾಗಲಿದೆ, ಯಾವುದೇ ಯೋಜನೆ ಜಾರಿಗೊಳಿಸಿದಾಗ ಲೋಪ ದೋಷಗಳಿರುವುದು ಸಹಜ, ಸ್ವಮಿತ್ವ ಯೋಜನೆ  ಪ್ರಾರಂಭಿಕ ಹಂತದ ಜಾರಿಯಲ್ಲಿ ಯಾವುದೇ ಸಮಸ್ಯೆಯಾಗದೆ ಲೋಪದೋಷ ರಹಿತವಾದಾಗ ಮುಂದಿನ ದಿನಗಳಲ್ಲಿ ದೇಶಾದ್ಯಂತ ವಿಸ್ತರಣೆಯಾಗಿ ಗ್ರಾಮಾಂತರ ಪ್ರದೇಶದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.

    ಶಾಸಕ ಕೆ.ಮಹದೇವ್ ಮಾತನಾಡಿ ಗ್ರಾಮೀಣ ಪ್ರದೇಶದ ಜನರ ಸಮಸ್ಯೆಯಾದ ಈ ಸ್ವತ್ತು ಹಾಗೂ ಗ್ರಾಮಠಾಣ ಗುರುತಿಸಲು ಸುಲಭವಾಗಿ ಅನುಕೂಲವಾಗಲೆಂದು ಇತಿಹಾಸದಲ್ಲಿ ಯಾರಿಂದಲೂ ಸಾಧ್ಯವಿಲ್ಲದಂಥ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಯವರು ಸ್ವಮಿತ್ವ ಯೋಜನೆಯಡಿ ಜಾರಿಗೊಳಿಸಿದ್ದು ಶ್ಲಾಘನೀಯ, ಅಧಿಕಾರಿಗಳು ಜನಪರ ಕೆಲಸ ನಿರ್ವಹಿಸಿ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿದರು.

      ಡಿಡಿಎಲ್ಆರ್ ರಮ್ಯಾ ಅವರು ಸ್ವಮಿತ್ವ  ಯೋಜನೆಯ ಉಪಯೋಗಗಳ ಬಗ್ಗೆ ಮಾಹಿತಿ ನೀಡಿ ಯೋಜನೆ ಸಂಬಂಧ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.

   ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್.ಸಿ ಬಸವರಾಜು, ಕೆಡಬ್ಲ್ಯೂ ಎಸ್ಎಸ್ ಬಿ ನಿರ್ದೇಶಕ ಆರ್.ಟಿ ಸತೀಶ್, ತಾ.ಪಂ ಇಒ ಡಿ.ಸಿ ಶ್ರುತಿ, ಜಿ.ಪಂ ಎಇಇ ಪ್ರಭು, ಎಡಿಎಲ್ಆರ್ ಚಿಕ್ಕಣ್ಣ, ಭೂಮಾಪನ ಅಧಿಕಾರಿಗಳಾದ ಎಂ.ಕೆ ಪ್ರಕಾಶ್, ಮಹೇಶ್, ಪಿಡಬ್ಲ್ಯುಡಿ ಎಇಇ ನಾಗರಾಜ್, ಗ್ರಾಮೀಣಾಭಿವೃದ್ಧಿ ಮತ್ತು ಶುದ್ಧ ಕುಡಿಯುವ ನೀರು ಇಲಾಖೆ ಎಇಇ ಶಿವಕುಮಾರ್, ತಾ.ಪಂ ಮಾಜಿ ಉಪಾಧ್ಯಕ್ಷ ರಘುನಾಥ್, ಬಿಇಒ ತಿಮ್ಮೇಗೌಡ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಾಜರಿದ್ದರು. 

Leave a Comment

Your email address will not be published. Required fields are marked *

error: Content is protected !!
Scroll to Top