ತಮ್ಮ ಗ್ರಾಮದಿಂದ ದೂರದ ಊರುಗಳಿಗೆ ಹೋಗಿ ಪಡಿತರ ಪಡೆಯುವ ಸಂಬಂಧ ಸಮಸ್ಯೆಗಳಿದ್ದರೆ ಗಮನಕ್ಕೆ ತನ್ನಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸುವುದಾಗಿ ಶಾಸಕ ಕೆ.ಮಹದೇವ್ ಹೇಳಿದರು.

ತಾಲೂಕಿನ ಎಂ.ಹೊಸಳ್ಳಿ ಗ್ರಾಮದ ನೂತನ ಪಡಿತರ ವಿತರಣಾ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು, ತಾಲೂಕಿನ ಜನತೆಗೆ ಗ್ರಾಮದ ಒಂದೆರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಪಡಿತರ ದೊರೆಯುವಂತಾಗಬೇಕು, ಸರ್ಕಾರದ ಆಶಯದಂತೆ ಮನೆ ಬಾಗಿಲಿಗೆ ಪಡಿತರ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಆಹಾರ ಇಲಾಖೆ ಅಧಿಕಾರಿಗಳು ಮುಂದಾಗಬೇಕು, ತಾಲೂಕಿನಾದ್ಯಂತ ಪಡಿತರ ಪಡೆಯಲು ದೂರದ ಊರುಗಳಿಗೆ ಹೋಗುವ ಹಳ್ಳಿಗಳ ಪಟ್ಟಿಯನ್ನು ನೀಡಿ ಸಮಸ್ಯೆ ಬಗೆಹರಿಸುವಂತೆ ಸ್ಥಳದಲ್ಲಿ ಹಾಜರಿದ್ದ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

     ಎಂ.ಹೊಸಳ್ಳಿ ಗ್ರಾಮದಲ್ಲಿ ನೂತನವಾಗಿ ಪಡಿತರ ವಿತರಣೆಗೆ ಚಾಲನೆ ನೀಡಿರುವುದರಿಂದ ಸುತ್ತಮುತ್ತಲ ಹಳ್ಳಿಗಳಾದ ಬಾಳೆಕಟ್ಟೆ, ಕೋಗಲೂರು, ಬೀಸನ ಕುಪ್ಪೆ ಗ್ರಾಮದ ಜನರು ಪಡಿತರ ಪಡೆಯಲು ಆರೇಳು ಕಿಲೋಮೀಟರ್ ದೂರ ಹೋಗುತ್ತಿದ್ದನ್ನು ತಪ್ಪಿಸಿದಂತಾಗಿದೆ, ಈ ಭಾಗದ ಮುಖಂಡರ ಹಲವು ದಿನಗಳ ಒತ್ತಾಯದ ಮೇರೆಗೆ ಇಂದು ಪಡಿತರ ವಿತರಣಾ ಕೇಂದ್ರಕ್ಕೆ ಸರ್ಕಾರದಿಂದ ಅನುಮೋದನೆ ಪಡೆದು ಚಾಲನೆ ನೀಡಿರುವುದು ಸಂತಸ ತಂದಿದೆ, ತಾಲೂಕಿನ ಹಲವೆಡೆ ಪಡಿತರ ಪಡೆಯುವ ಸಂಬಂಧ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದ್ದು ಸ್ಥಳೀಯರ ಮೂಲಕ ಸಮಸ್ಯೆ ಗಮನಕ್ಕೆ ತಂದರೆ ಪ್ರಾಮಾಣಿಕವಾಗಿ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

     ಗ್ರಾಮದ ಜನರ ಹಲವು ದಿನಗಳ ಬೇಡಿಕೆ ಈಡೇರಿದ್ದಕ್ಕೆ ಎಂ.ಹೊಸಳ್ಳಿ ಗ್ರಾಮಸ್ಥರು ಶಾಸಕರನ್ನು ಅಭಿನಂದಿಸಿದರು.

     ಈ ಸಂದರ್ಭ ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ತಾ.ಪಂ ಮಾಜಿ ಉಪಾಧ್ಯಕ್ಷ ರಘುನಾಥ್, ಪುಾನಾಡಹಳ್ಳಿ ಗ್ರಾ.ಪಂ ನಿಕಟಪೂರ್ವ ಅಧ್ಯಕ್ಷ ರವಿ, ಸದಸ್ಯ ಸಿದ್ದೇಗೌಡ, ಆಹಾರ ಇಲಾಖೆ ಶಿರಸ್ತೇದಾರ್ ಅನುಸೂಯ, ಆಹಾರ ನಿರೀಕ್ಷಕ ಮಹೇಶ್, ಟಿಎಪಿಸಿಎಂಎಸ್ ಕಾರ್ಯದರ್ಶಿ ಕಲಾವತಿ, ಗ್ರಾಮದ ಮುಖಂಡ ವೆಂಕಟನಾಯಕ್ ಮತ್ತು ಗ್ರಾಮಸ್ಥರು ಹಾಜರಿದ್ದರು. 

Leave a Comment

Your email address will not be published. Required fields are marked *

error: Content is protected !!
Scroll to Top