ತಾಲೂಕಿನ ಕೆಲ ಗ್ರಾ.ಪಂ ಗಳ ಪಿಡಿಒಗಳು ಸಾರ್ವಜನಿಕರ ಕೆಲಸಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿವೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಿ ಮತ್ತು ನರೇಗಾ ಯೋಜನೆಯಡಿ ಹಳ್ಳಿಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವಂತೆ ಶಾಸಕ ಕೆ.ಮಹದೇವ್ ಅವರು ತಾ.ಪಂ ಇಒ ಡಿ.ಸಿ ಶ್ರುತಿ ಅವರಿಗೆ ಸೂಚಿಸಿದರು.

    ಪಟ್ಟಣದ ತಾ.ಪಂ ಕಚೇರಿ ಸಭಾಂಗಣದಲ್ಲಿ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು, ತಾ.ಪಂ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಕುರಿತು ಮಾತಾನಾಡಿ ವಿವಿಧ ವಸತಿ ಯೋಜನೆಯಡಿ ಆಯ್ಕೆಯಾಗಿರುವ ವಿಧವೆಯರು, ಅಂಗವಿಕಲರು, ಸೇರಿದಂತೆ ಎಲ್ಲಾ ಫಲಾನುಭವಿಗಳಿಗೆ ಯಾವುದೇ ತೊಂದರೆಯಾಗದಂತೆ ಪಾರದರ್ಶಕವಾಗಿ ಮನೆಗಳನ್ನು ವಿತರಿಸಬೇಕು, ಯಾರದೋ ಒತ್ತಡಕ್ಕೆ ಮಣಿದು ಕೆಲಸ ನಿರ್ವಹಿಸುವುದು ಬೇಡ, ಕೆಲಸಕ್ಕಾಗಿ ಲಂಚ ಕೇಳುವ ಪಿಡಿಒಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು, ಸರ್ಕಾರದ ಅನುದಾನಗಳು ತಾಲೂಕಿನ 34 ಗ್ರಾ.ಪಂ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಬಳಕೆಯಾಗುತ್ತಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುವಂತೆ ಸೂಚಿಸಿದರು.
   ತಾಲೂಕಿನಲ್ಲಿ ಒತ್ತುವರಿಯಾಗಿರುವ ಕೆರೆ, ಸ್ಮಶಾನ, ಗ್ರಾಮಠಾಣ ಸ್ಥಳಗಳನ್ನು ಮುಂದಿನ ಸಭೆಯೊಳಗೆ  ತೆರವುಗೊಳಿಸಿ ನಿವೇಶನಗಳನ್ನು ಮಾಡಿ ಅರ್ಹ ಫಲಾನುಭವಿಗಳಿಗೆ ಹಂಚುವಂತೆ ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ ಅವರಿಗೆ ತಿಳಿಸಿ ಒತ್ತುವರಿ ಮಾಡಿರುವವರು ಯಾವುದೇ ಪಕ್ಷದ ಮುಖಂಡರಾಗಿದ್ದರೂ ಸಹ ಮುಲಾಜು ತೋರಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು. ಈ ವೇಳೆ ತಾ.ಪಂ ಸದಸ್ಯ ಎಸ್.ರಾಮು ಮಾತನಾಡಿ  ಗಿರಗೂರಿನ ಮಿಳಿಂದ ವಿದ್ಯಾ ಸಂಸ್ಥೆಯು ಸುಮಾರು 9 ಎಕರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದ್ದು ಈ ಒತ್ತುವರಿಯನ್ನು ತೆರವುಗೊಳಿಸುವಂತೆ ಹಲವು ಬಾರಿ ಅಧಿಕಾರಿಗಳಿಗೆ ಸೂಚಿಸಿದರೂ ಸಹ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು,ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕೆ.ಮಹದೇವ್ ಶಾಲೆಯ ಅಕ್ರಮ ಒತ್ತುವರಿಯನ್ನು ಕೂಡಲೇ ತೆರವುಗೊಳಿಸಿ ಅಲ್ಲಿ ಆಶ್ರಯ ನಿವೇಶನಗಳನ್ನು ರಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ವಿದ್ಯುತ್ ಸಮರ್ಪಕ ಪೂರೈಕೆ ಕುರಿತಂತೆ ಸಮಸ್ಯೆಗಳು ಸಾಕಷ್ಟಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಬೇಜವಾಬ್ದಾರಿ ವರ್ತನೆ ತೋರದೇ ಗ್ರಾಮೀಣ ಪ್ರದೇಶಗಳ ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚಿಸಿ ವಿದ್ಯುತ್ ಪರಿವರ್ತಕಗಳ ದುರಸ್ತಿ ಕೇಂದ್ರವನ್ನು ಪಟ್ಟಣದಲ್ಲಿ ತೆರೆಯಲಾಗಿದ್ದರೂ ಸಹ ಇಲಾಖೆಯ ಅಧಿಕಾರಿಗಳು ವಿದ್ಯುತ್ ಪರಿವರ್ತಕಗಳ ದುರಸ್ತಿಗಾಗಿ ರೈತರನ್ನು ಕೆ.ಆರ್ ನಗರಕ್ಕೆ ಕಳುಹಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ ಇನ್ನು ಮುಂದಿನ ದಿನಗಳಲ್ಲಿ ಅದು ಪುನರಾವರ್ತನೆ ಆಗಬಾರದು ಎಂದು ಎಚ್ಚರಿಸಿ ಗಿರಿಜನ ಹಾಡಿಗಳಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಮರ್ಪಕ ಸೌಲಭ್ಯ ನೀಡುವಂತೆ ಸೂಚಿಸಿದರು. 

   ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸಲು ವಿದ್ಯಾರ್ಥಿಗಳಿಗೆ ಯಾವುದೇ ಅನಾನುಕೂಲವಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ  ಬಿಇಒ ಚಿಕ್ಕಸ್ವಾಮಿ ಅವರಿಗೆ ಸೂಚಿಸಿ ತಾಲೂಕಿನಾದ್ಯಂತ ವಿವಿಧ ಶಾಲೆಗಳ ದುರಸ್ತಿಗೆ ಅನುದಾನ ಮಂಜೂರಾಗಿದ್ದು ಉತ್ತಮ ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತೆ ಗುತ್ತಿಗೆದಾರರಿಗೆ ನಿರ್ದೇಶಿಸುವಂತೆ ತಿಳಿಸಿದರು.

   ಗ್ರಾಮೀಣ ಪ್ರದೇಶಗಳಿಗೆ ತಾವು ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಸಾರ್ವಜನಿಕರಿಂದ ಎದುರಾಗುವ ಸಮಸ್ಯೆಗಳ ಕುರಿತಾದ ಪ್ರಶ್ನೆಗಳಿಗೆ ಉತ್ತರ ನೀಡಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೇ ಇರದಿದ್ದರೆ ಹೇಗೆ ಎಂದು ಗೈರಾಗುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

    ಸಭೆಯಲ್ಲಿ ಪಿಡಬ್ಲ್ಯುಡಿ, ಜಿ.ಪಂ, ಕಂದಾಯ , ಆಹಾರ , ಆರೋಗ್ಯ, ಪೊಲೀಸ್, ಕೃಷಿ, ತೋಟಗಾರಿಕೆ, ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಬಗ್ಗೆ ಶಾಸಕರು ಅಧಿಕಾರಿಗಳಿಂದ ಮಾಹಿತಿ ಪಡೆದರು.

   ಸಭೆಯಲ್ಲಿ ತಾ.ಪಂ ಅಧ್ಯಕ್ಷೆ ಕೆ.ಆರ್ ನಿರೂಪ, ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ ರಂಗಸ್ವಾಮಿ, ಜಿ.ಪಂ ಸದಸ್ಯರಾದ ಪಿ.ರಾಜೇಂದ್ರ, ಕೆ.ಸಿ ಜಯಕುಮಾರ್, ಕೆ.ಎಸ್ ಮಂಜುನಾಥ್, ಮಣಿ ಡಿ.ಟಿ ಸ್ವಾಮಿ, ಕೌಸಲ್ಯ ಲೋಕೇಶ್ , ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ, ತಾ.ಪಂ ಇಒ ಡಿ.ಸಿ ಶ್ರುತಿ ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top