ನೆರೆ ಹಾವಳಿ ಹಾಗೂ ಮಳೆಯಿಂದ ತಾಲೂಕಿನಲ್ಲಿ ಹಾನಿಗೊಳಗಾಗಿ ಸಂಕಷ್ಟಕ್ಕೀಡಾದವರಿಗೆ ಪರಿಹಾರ ಕಾರ್ಯ ಕೈಗೊಳ್ಳುವ ಸಂದರ್ಭ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಿ ಪರಿಹಾರ ಒದಗಿಸುವಂತೆ ಶಾಸಕ ಕೆ.ಮಹದೇವ್ ಸೂಚಿಸಿದರು.

ತಾಲೂಕಿನ ಗಡಿ ಭಾಗದಲ್ಲಿ ನೆರೆ ಹಾವಳಿಗೆ ತುತ್ತಾದ  ಕೊಪ್ಪ, ಆವರ್ತಿ, ಮುತ್ತಿನ ಮುಳಸೋಗೆ, ದಿಂಡಗಾಡು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು, ಕಳೆದ ಮೂರು ವರ್ಷಗಳಿಂದ ಮಳೆಗಾಲ ಸಂದರ್ಭ ಕಾವೇರಿ ನದಿ ಹರಿಯುವ ತಾಲೂಕಿನ ಗಡಿ ಭಾಗದ ಗ್ರಾಮಗಳು ನೆರೆ ಹಾವಳಿಗೆ ತುತ್ತಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿದೆ ಹಾಗೂ ರಸ್ತೆಗಳ ಮೇಲೆ ನೀರು ಹರಿಯುತ್ತಿರುವುದರಿಂದ ಸಂಪರ್ಕ ಕಡಿತಗೊಳ್ಳುತ್ತಿದೆ ವಿವಿಧೆಡೆ ಮಳೆ ಹಾನಿಯಿಂದ ವಾಸದ ಮನೆಗಳು ಕುಸಿದು ಅಪಾರ ನಷ್ಟ ಉಂಟಾಗುತ್ತಿದೆ, ಸಂತ್ರಸ್ತರಿಗೆ ಪರಿಹಾರ ಕಾರ್ಯ ಕೈಗೊಳ್ಳುವ ಸಂದರ್ಭ ಕಂದಾಯ, ಗ್ರಾಮೀಣಾಭಿವೃದ್ಧಿ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಒಟ್ಟಾಗಿ ಸಮೀಕ್ಷೆ ನಡೆಸಿ ಪಾರದರ್ಶಕವಾಗಿ ಪರಿಹಾರ ನೀಡಬೇಕು, ಪರಿಹಾರ ಮೊತ್ತದಲ್ಲಿ ತಕ್ಷಣ ಹತ್ತು ಸಾವಿರ ರೂ ಪರಿಹಾರ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ನೆರೆ ಹಾವಳಿಯಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದ ಕೊಪ್ಪ-ಗೋಲ್ಡನ್ ಟೆಂಪಲ್, ಕೊಪ್ಪ-ಆವರ್ತಿ, ಮುತ್ತಿನ ಮುಳಸೋಗೆ-ದಿಂಡಗಾಡು ರಸ್ತೆಗಳ ಸೇತುವೆಗಳನ್ನು ಮೇಲ್ಮಟ್ಟಕ್ಕೆ ಏರಿಸಲು ಈಗಾಗಲೇ ಜಲಸಂಪನ್ಮೂಲ ಇಲಾಖೆಯ ಹಾರಂಗಿ ವಿಭಾಗ ವತಿಯಿಂದ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುಮೋದನೆಗೆ ಕಳುಹಿಸಿದ್ದು ಶೀಘ್ರ ಅನುದಾನ ಮಂಜೂರಾಗುವ ಭರವಸೆ ನೀಡಿದರು.     ಈ ಸಂದರ್ಭ ತಹಸಿಲ್ದಾರ್ ಶ್ವೇತಾ ಎನ್ ರವೀಂದ್ರ, ಇಒ ಡಿ.ಸಿ ಶ್ರುತಿ, ಪಿಡಬ್ಲ್ಯುಡಿ ಎಇಇ ನಾಗರಾಜ್, ಎಇ ಬೋರೇಗೌಡ, ಪಂಚಾಯತ್ ಎಂಜಿನಿಯರಿಂಗ್ ಇಲಾಖೆ ಎಇಇ ಪ್ರಭು, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್, ಉಪತಹಸೀಲ್ದಾರ್ ನಿಜಾಮುದೀನ್, ಕಂದಾಯ ಅಧಿಕಾರಿ ಆನಂದ್, ಗ್ರಾಮ ಲೆಕ್ಕಾಧಿಕಾರಿಗಳಾದ ಅಶ್ವಿನಿ, ನವೀನ್ ಸೇರಿದಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಾಜರಿದ್ದರು. 

Leave a Comment

Your email address will not be published. Required fields are marked *

error: Content is protected !!
Scroll to Top