ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿ ಕೊರೊನಾ ಸೋಂಕು ನಿಯಂತ್ರಿಸಲು ತಾಲೂಕು ಆಡಳಿತದೊಂದಿಗೆ ಸಹಕರಿಸುವಂತೆ ಶಾಸಕ ಕೆ.ಮಹದೇವ್ ಹೇಳಿದರು.

ಪಟ್ಟಣದ ತಾ.ಪಂ ಸಭಾಂಗಣದಲ್ಲಿ ತಾಲೂಕಿನ ಎಲ್ಲ ಗ್ರಾ.ಪಂ ಗಳ ಪಿಡಿಒ ಮತ್ತು ಆಡಳಿತಾಧಿಕಾರಿಗ ಸಭೆ ನಡೆಸಿ ಅವರು ಮಾತನಾಡಿದರು, ದೊಡ್ಡ ಪಟ್ಟಣಗಳಲ್ಲಿ ಹೆಚ್ಚು ಪತ್ತೆಯಾಗುತ್ತಿದ್ದ ಕೊರೊನಾ ಪ್ರಕರಣಗಳು ಈಗ ಹಳ್ಳಿಹಳ್ಳಿಗಳಲ್ಲಿ ಹೆಚ್ಚುತ್ತಿದ್ದು ಈಚಿನ ದಿನಗಳಲ್ಲಿ ತಾಲೂಕಿನಲ್ಲಿಯೂ ಸಹ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ, ಇದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸಮನ್ವಯತೆಯ ಕೊರತೆ ಎದುರಾಗದಂತೆ ಪ್ರತಿದಿನ ಆರೋಗ್ಯ, ಕಂದಾಯ, ಪೊಲೀಸ್ ಇಲಾಖೆ ಅಧಿಕಾರಿಗಳು ಸಭೆ ನಡೆಸಿ ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ  ಸೂಚಿಸಿದರು. 

    ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ ಮಾತನಾಡಿ ತಾಲೂಕು ಆರೋಗ್ಯ ಇಲಾಖೆ ಸಿಬ್ಬಂದಿ ಕೊರೊನಾ ಸೋಂಕು ಪ್ರಕರಣದ ಬಗ್ಗೆ ತಾಲೂಕು ಆಡಳಿತ ಮತ್ತು ಮಾಧ್ಯಮಗಳಿಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ, ಮಾಧ್ಯಮದವರು ನನ್ನನ್ನು ಪ್ರಶ್ನಿಸುತ್ತಿದ್ದಾರೆ ಎಂದರು.

ಇದಕ್ಕೆ ಸ್ಪಂದಿಸಿದ ಶಾಸಕರು ತಕ್ಷಣ ಆರೋಗ್ಯ ಇಲಾಖೆಯವರನ್ನು ಸ್ಥಳಕ್ಕೆ ಕರೆಯಿಸಿ ಮುಂದಿನ ದಿನಗಳಲ್ಲಿ ಲೋಪವಾಗದಂತೆ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.

   ಸಭೆಯಲ್ಲಿ ಹಾಜರಿದ್ದ ತಾಲೂಕಿನ ವಿವಿಧೆಡೆಯ ಪಿಡಿಒಗಳು ಕಂದಾಯ ಇಲಾಖೆಯವರ ಮೇಲೆ ಆಕ್ಷೇಪ ವ್ಯಕ್ತಪಡಿಸಿ ಸೋಂಕು ಪತ್ತೆಯಾದ ಮನೆಯನ್ನು ಸೀಲ್ ಡೌನ್ ಮಾಡಲು ಅಥವಾ ಹೋಮ್ ಕ್ವಾರಂಟೈನ್ ಮಾಡಲು ಸಹಕರಿಸಲು  ಕೇಳಿದರೆ ಇಲ್ಲದ ಸಬೂಬು ಹೇಳುತ್ತಾರೆ ಎಂದರು.           ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಅಧಿಕಾರಿಗಳ ನಡುವಿನ ಸಮನ್ವಯ ಕೊರತೆಯಿಂದ ತಾಲೂಕಿನಲ್ಲಿ ಸೋಂಕು ಪ್ರಕರಣ ಹೆಚ್ಚಾದರೆ ನಿರ್ಲಕ್ಷ್ಯತನ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ  ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

   ಗ್ರಾ.ಪಂ ವ್ಯಾಪ್ತಿಯ ಹಳ್ಳಿಗಳ ಸಾರ್ವಜನಿಕರಿಗೆ ವಿತರಿಸಿದ ಮಾಸ್ಕ್ ಮತ್ತು ಸ್ಯಾನಿಟೇಷನ್ ಮಾಡಿದ್ದ ಹಣವನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ ನಾವುಗಳು ಹೇಗೆ ವೆಚ್ಚ ಭರಿಸುವುದು ಎಂದು ಪಿಡಿಒಗಳು ಶಾಸಕರ ಬಳಿ ಅಳಲು ತೋಡಿಕೊಂಡರು.

   ಹದಿನಾಲ್ಕನೇ ಹಣಕಾಸು ಯೋಜನೆಯಡಿಯಲ್ಲಿ ಬಂದಿದ್ದ ಅನುದಾನದ ಮೇಲಿನ ಬಡ್ಡಿಯಿಂದ ಈ ವೆಚ್ಚ ಭರಿಸುವಂತೆ ಈಗಾಗಲೇ ತೀರ್ಮಾನಿಸಲಾಗಿದೆ ಆದರೆ ಇದುವರೆಗೂ ಯಾಕೆ ವೆಚ್ಚ ಭರಿಸಿಲ್ಲ ಏಕೆ ಎಂದು ತಾ.ಪಂ ಇಓ ಡಿ.ಸಿ ಶ್ರುತಿ ಅವರನ್ನು ಶಾಸಕರು  ಪ್ರಶ್ನಿಸಿದಾಗ ಉತ್ತರಿಸಿದ ಇಒ ಅವರು ಈ ಬಗ್ಗೆ ಜಿ.ಪಂ ಸಿಇಒ ಬಳಿ ಮನವಿ ಸಲ್ಲಿಸಲಾಗಿದ್ದು ಶೀಘ್ರದಲ್ಲಿ ಹಣ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದರು.

  ಗ್ರಾ.ಪಂ ಗಳು ಎನ್ ಆರ್ ಇ ಜಿ  ಮತ್ತು ಇತರ ಯೋಜನೆಗಳಲ್ಲಿ ಹಾಗೂ ಹದಿನಾಲ್ಕನೇ ಹಣಕಾಸು ಮತ್ತು ಹದಿನೈದನೇ ಹಣಕಾಸು ಯೋಜನೆಯಲ್ಲಿ  ಸಾಧಿಸಿರುವ ಪ್ರಗತಿ ಕುರಿತು ಚರ್ಚಿಸುವ ಸಂದರ್ಭದಲ್ಲಿ ಕಳಪೆ ಸಾಧನೆ ಮಾಡಿರುವವರು ಜನರಿಗೆ ಏನೆಂದು ಉತ್ತರಿಸುತ್ತಾರೆ ನಿಮ್ಮ ಸ್ವಾರ್ಥದಿಂದಾಗಿ ತಾಲೂಕಿನ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ತಾಲೂಕಿನಿಂದ ಹೊರ ನಡೆಯಿರಿ ಎಂದು ಪಿಡಿಒಗಳಿಗೆ ಶಾಸಕರು ಎಚ್ಚರಿಕೆ ನೀಡಿ ಇಡೀ ತಾಲೂಕಿನ ಅಭಿವೃದ್ಧಿ ನನ್ನೊಬ್ಬನಿಂದ ಮಾತ್ರ ಸಾಧ್ಯವಿಲ್ಲ ಗ್ರಾ.ಪಂ, ಜಿ.ಪಂ, ತಾ.ಪಂ ಅನುದಾನವನ್ನು ಸರಿಯಾಗಿ ಬಳಸಿಕೊಂಡು ನನ್ನೊಂದಿಗೆ ಕೈಜೋಡಿಸಿ ಎಂದು ಸೂಚಿಸಿದರು. 

   ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ  

ಡಾ.ವಿ.ಆರ್ ನಾಗೇಶ್, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಶ್ರೀನಿವಾಸ್, ಎನ್ ಆರ್ ಇ ಜಿ  ಸಹಾಯಕ ನಿರ್ದೇಶಕ ರಘುನಾಥ್, ವಿವಿಧ ಗ್ರಾ.ಪಂ ಗಳ ಆಡಳಿತಾಧಿಕಾರಿಗಳಾದ ಪ್ರಭು, ಕುಮಾರ್, ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top