ತಾಲೂಕಿನ ವಿವಿಧೆಡೆ 99ಲಕ್ಷ ವೆಚ್ಚದ ನೂತನ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಮಹದೇವ್ ಚಾಲನೆ ನೀಡಿದರು.

ಈ ವೇಳೆ ಶಾಸಕರು ಮಾತನಾಡಿ ನೆರೆ ಸಂದರ್ಭ ಹಾಗೂ ಮಳೆಗಾಲದಲ್ಲಿ ತಾಲ್ಲೂಕಿನ ವಿವಿಧೆಡೆ ಸರ್ಕಾರಿ ಶಾಲಾ ಕಟ್ಟಡಗಳು ಶಿಥಿಲಗೊಂಡು ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಿತ್ತು, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ನೂತನ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡುವಂತೆ ಅಧಿವೇಶನ ಸಂದರ್ಭ ಶಿಕ್ಷಣ ಇಲಾಖೆ ಸಚಿವರು ಹಾಗೂ ಸರ್ಕಾರದ ಗಮನ ಸೆಳೆದು ಮನವಿ ಸಲ್ಲಿಸಲಾಗಿತ್ತು, ನಮ್ಮ ಕೋರಿಕೆಗೆ ಸ್ಪಂದಿಸಿದ ಸರ್ಕಾರ ತಾಲೂಕಿನ ವಿವಿಧೆಡೆಯ ಸರ್ಕಾರಿ ಶಾಲೆಗಳ ನೂತನ ಕೊಠಡಿಗೆ ಅನುದಾನ ಮಂಜೂರು ಮಾಡಿದ್ದು ಗುತ್ತಿಗೆ ಪಡೆದವರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ ಕಟ್ಟಡಗಳು ದೀರ್ಘಕಾಲ ಬಾಳಿಕೆ ಬರುವಂತೆ ಗಮನಹರಿಸಬೇಕು ಎಂದರು.

   ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ ರಂಗಸ್ವಾಮಿ ಮಾತನಾಡಿ ಕೊರೊನಾ ಸಂಕಷ್ಟ ಕಾಲದ ನಡುವೆಯೂ ಶಾಸಕರು ಹಿಂಜರಿಯದೆ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿ ತಾಲೂಕಿನ ವಿವಿಧೆಡೆ ನೂತನ ಕಾಮಗಾರಿಗಳಿಗೆ ಚಾಲನೆ ನೀಡುತ್ತಿರುವುದು ಶ್ಲಾಘನೀಯ ಎಂದರು.

    ಈ ವೇಳೆ ತಾಲೂಕಿನ ತಾತನಹಳ್ಳಿ, ಅಬ್ಬೂರು, ಪಾರೆ ಕೊಪ್ಪಲು, ಮಾಲಂಗಿ ಹಾಗೂ ಮಾಲಂಗಿ ಗೋಮಾಳದ ಸರ್ಕಾರಿ ಶಾಲೆಗಳ ನೂತನ ಕೊಠಡಿಗಳ ಕಾಮಗಾರಿಗೆ ಚಾಲನೆ ನೀಡಲಾಯಿತು.

    ಈ ಸಂದರ್ಭ ತಾ.ಪಂ ಸಹಾಯಕ ನಿರ್ದೇಶಕ ರಘುನಾಥ್, ಬಿಇಒ ಚಿಕ್ಕಸ್ವಾಮಿ, ಪಿಡಬ್ಲೂಡಿ ಎಇಇ ನಾಗರಾಜ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಎಇಇ ಪ್ರಭು, ಗ್ರಾಮೀಣಾಭಿವೃದ್ಧಿ ಮತ್ತು ಶುದ್ಧ ಕುಡಿಯುವ ನೀರು ಇಲಾಖೆ ಎಇಇ ಶಿವಕುಮಾರ್, ತೋಟಗಾರಿಕೆ ಇಲಾಖೆ ಅಧಿಕಾರಿ ಪ್ರಸಾದ್, ಪುರಸಭೆ ಸದಸ್ಯ ಶ್ಯಾಮ್, ಮುಖಂಡ ಕುಮಾರ್, ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಕರು ಜನಪ್ರತಿನಿಧಿಗಳು ಹಾಜರಿದ್ದರು  

Leave a Comment

Your email address will not be published. Required fields are marked *

error: Content is protected !!
Scroll to Top