ಸರ್ಕಾರಗಳು ಗ್ರಾ.ಪಂ ಮುಖಾಂತರ ನೀಡುವ ಅನುದಾನದ ಹಣವನ್ನು ಸದ್ಬಳಕೆ ಮಾಡಿಕೊಂಡು ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವಂತೆ ಶಾಸಕ ಕೆ.ಮಹದೇವ್ ಹೇಳಿದರು.

ತಾಲೂಕಿನ ವಿವಿಧೆಡೆ 1.53ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು, ಈಚಿನ ದಿನಗಳಲ್ಲಿ ಗ್ರಾ.ಪಂ ಗಳಿಗೆ ಹೆಚ್ಚು ಅನುದಾನ ದೊರೆಯುತ್ತಿದ್ದರೂ ಅಧಿಕಾರಿಗಳು ಹಾಗೂ ಗ್ರಾ.ಪಂ ಆಡಳಿತ ವರ್ಗದವರ ನಿರ್ಲಕ್ಷ್ಯತನದಿಂದಾಗಿ ಅಭಿವೃದ್ಧಿ ಮರೀಚಿಕೆಯಾಗಿದೆ, ಪ್ರಸ್ತುತ ಗ್ರಾ.ಪಂ ಸದಸ್ಯರುಗಳ ಆಡಳಿತಾವಧಿ ಮುಗಿದಿದ್ದು ಸರ್ಕಾರ ವತಿಯಿಂದ ಆಡಳಿತಾಧಿಕಾರಿಗಳನ್ನು ನೇಮಿಸಿದ್ದು ಪಾರದರ್ಶಕ ಕೆಲಸದ ಮೂಲಕ ಹಳ್ಳಿಗಳ ಅಭಿವೃದ್ಧಿಗೆ ಯಾಗಲಿ, ನಾನು ಹಳ್ಳಿಗಳಿಗೆ ಭೇಟಿ ನೀಡಿದ ಸಂದರ್ಭ ಗ್ರಾಮಸ್ಥರು ತಮ್ಮ ಗ್ರಾಮಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ದೂರುತ್ತಾರೆ, ಶಾಸಕರ ನಿಧಿಯಿಂದ ತಾಲೂಕಿನ ಎಲ್ಲ ಹಳ್ಳಿಗಳ ಅಭಿವೃದ್ಧಿಗೆ ಹಣ ವಿನಿಯೋಗಿಸುವುದು ಸ್ವಲ್ಪ ಕಷ್ಟವಾದರೂ ಸಹ ವಿರೋಧ ಪಕ್ಷದ ಶಾಸಕನಾಗಿ ಸಂಬಂಧಿಸಿದ ಇಲಾಖೆ ಸಚಿವರು ಹಾಗೂ ಮುಖ್ಯಮಂತ್ರಿಗಳ ಮೇಲೆ ಅನುದಾನದ ವಿಚಾರವಾಗಿ ಒತ್ತಡ ತಂದು ತಾಲೂಕಿನಾದ್ಯಂತ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದರು.

      ಸರ್ಕಾರ ಯಾವುದೇ ಇರಲಿ ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡದೆ ಕೊರೊನಾ ಸಂಕಷ್ಟದ ಕಾಲದಲ್ಲಿಯೂ ಅನುದಾನ ಮಂಜೂರು ಮಾಡಿಸಿ ಟೀಕಾಕಾರರಿಗೆ ಅಭಿವೃದ್ಧಿ ಮೂಲಕ ಉತ್ತರ ನೀಡುತ್ತಿದ್ದೇನೆ ಎಂದರು. 

    ಈ ವೇಳೆ ತಾಲೂಕಿನ ಹಿಟ್ನೆಹೆಬ್ಬಾಗಿಲು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣಕ್ಕೆ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಪ್ರಸಕ್ತ ಶೈಕ್ಷಣಿಕ ವರ್ಷ ಸರ್ಕಾರದಿಂದ ಉಚಿತವಾಗಿ ನೀಡುವ  ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು. ಭುವನಹಳ್ಳಿ, ಕೂರಗಲ್ಲು ಮತ್ತು ಕಣಗಾಲು ಗ್ರಾಮಗಳಲ್ಲಿ ಗ್ರಾಮ ಪರಿಮಿತಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.     ಈ ಸಂದರ್ಭ ತಹಸಿಲ್ದಾರ್ ಶ್ವೇತಾ ಎನ್ ರವೀಂದ್ರ, ತಾ.ಪಂ ಇಒ ಡಿ.ಸಿ ಶ್ರುತಿ, ಪಿಡಬ್ಲ್ಯುಡಿ ಎಇಇ ನಾಗರಾಜ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಎಇಇ ಪ್ರಭು, ಬಿಇಒ ತಿಮ್ಮೇಗೌಡ, ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ಮೋಹನ್ ಕುಮಾರ್, ಚೆಸ್ಕಾಂ ಎಇಇ ಕುಮಾರ್, ಸಮಾಜ ಕಲ್ಯಾಣಾಧಿಕಾರಿ ಸಿದ್ದೇಗೌಡ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಜನಪ್ರತಿನಿಧಿಗಳು ಹಾಜರಿದ್ದರು.   

Leave a Comment

Your email address will not be published. Required fields are marked *

error: Content is protected !!
Scroll to Top