ಸಾರ್ವಜನಿಕ ಕ್ಷೇತ್ರಕ್ಕೆ ವೈದ್ಯರ ಕೊಡುಗೆ ಅವಿಸ್ಮರಣೀಯ ಎಂದು ಶಾಸಕ ಕೆ. ಮಹದೇವ್ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಅಂತಾರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ಸೇವಾ ಮನೋಭಾವದಿಂದ ಯಾವುದೇ ಕಾಯಿಲೆಗಳನ್ನು ಉತ್ತಮ ಗುಣಮಟ್ಟದ ಚಿಕಿತ್ಸೆ ಮೂಲಕ ಹೋಗಲಾಡಿಸುವ ವೈದ್ಯರ ಕಾರ್ಯವನ್ನು ಮನಗಂಡು ಸಾವಿರಾರು ವರ್ಷಗಳ ಹಿಂದೆಯೇ ವೈದ್ಯರು ದೇವರ ಸಮಾನ ಎಂದು ಉಲ್ಲೇಖವಾಗಿದೆ. ಇತ್ತೀಚೆಗೆ ವಿಶ್ವವ್ಯಾಪಿ ಹರಡಿದ ಮಹಾಮಾರಿ ಕೊರೋನಾ ಸೋಂಕು ಸಂದರ್ಭ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಿ ಕುಟುಂಬದವರಿಂದ ದೂರವಿದ್ದು ಚಿಕಿತ್ಸೆ ನೀಡಿ ಗುಣಮುಖರಾಗುವಂತೆ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ಸೇವೆಯನ್ನು ನಾವೆಲ್ಲರೂ ಗೌರವಿಸಬೇಕು ಎಂದರು.

 ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮಾತನಾಡಿ ಕೊರೋನಾ ಸೋಂಕು ಜಿಲ್ಲೆಯಲ್ಲಿ ಹರಡಿದ ಸಂದರ್ಭ ರಜೆ ಪಡೆಯದೇ ನಿರಂತರ ಸೇವೆ ನೀಡಿದ ವೈದ್ಯರು ಮತ್ತು ಸಿಬ್ಬಂದಿ ಸೇವೆ ಶ್ಲಾಘನೀಯ, ಆಶಾ ಕಾರ್ಯಕರ್ತೆಯರು ಸಹ ಸ್ಥಳೀಯ ಮಾಹಿತಿಗಳನ್ನು ಆರೋಗ್ಯ ಇಲಾಖೆಗೆ ನೀಡುವ ಮೂಲಕ ಸಹಕರಿಸಿದ್ದಾರೆ, ಸಾರ್ವಜನಿಕರು ಕೊರೊನಾ ಸೋಂಕಿನ ಬಗ್ಗೆ ಭಯ ಪಡದೇ ಎಚ್ಚರಿಕೆ ವಹಿಸಿ ಸರ್ಕಾರ ಮತ್ತು ಆರೋಗ್ಯ ಇಲಾಖೆ ಸೂಚನೆಗಳನ್ನು ಕಡ್ಡಾಯ ಪಾಲಿಸುವಂತೆ ತಿಳಿಸಿದರು.

 ವೈದ್ಯ ದಿನಾಚರಣೆ ಮಾಹಿತಿ ಕುರಿತು ಡಾ.ಸದಾಶಿವ  ಪ್ರಾಸ್ತಾವಿಕ ಮಾತನಾಡಿದರು, ಆಸ್ಪತ್ರೆ ಮುಖ್ಯ ಆಡಳಿತಾಧಿಕಾರಿ ಡಾ.ಜೆ.ಶ್ರೀನಿವಾಸ್ ಅವರು ವೈದ್ಯ ದಿನಾಚರಣೆ ರೂವಾರಿ ಬಿ.ಸಿ ರಾಯ್ ಅವರ ಹೆಸರನ್ನು ತಾಲೂಕು ಆಸ್ಪತ್ರೆ ಸಭಾಂಗಣಕ್ಕೆ ಇಡುವಂತೆ ಶಾಸಕರನ್ನು ಕೋರಿದರು, ಕೊರೋನಾ ಸೋಂಕು ಸಂಬಂಧ ವಾರಿಯರ್ಸ್ ಗಳಾಗಿ ಕರ್ತವ್ಯ ನಿರ್ವಹಿಸಿದ ಆರೋಗ್ಯ ಇಲಾಖೆ ವೈದ್ಯರು ಮತ್ತು ಸಿಬ್ಬಂದಿಯನ್ನು ಶಾಸಕರು ಸನ್ಮಾನಿಸಿ ಪುಷ್ಪವೃಷ್ಟಿ ಮಾಡಿದರು. 

ಈ ಸಂದರ್ಭ ಜಿಲ್ಲಾ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ದೇವಿ ಆನಂದ್, ಕಾರ್ಯದರ್ಶಿ ಡಾ.ಜಗದೀಶ್, ಸದಸ್ಯ ಡಾ.ಮಹೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ನಾಗೇಶ್, ವೈದ್ಯರುಗಳಾದ ಡಾ.ಮಹದೇವಸ್ವಾಮಿ, ಡಾ.ಪ್ರಭು, ಡಾ.ಚಂದ್ರಾವತಿ, ಡಾ.ಪ್ರಮೋದ್, ಡಾ.ಶಿವಪ್ರಕಾಶ್, ಡಾ.ಉಷಾ ಮತ್ತು ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ವರ್ಗ ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top