
ಪಿರಿಯಾಪಟ್ಟಣ ತಾಲೂಕಿನ ಗೊರಹಳ್ಳಿ ಗ್ರಾಮದಿಂದ ದೊಡ್ಡ ಕಮರಹಳ್ಳಿ ಗ್ರಾಮದವರೆಗೆ 16.53 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಮಹದೇವ್ ರವರು ಚಾಲನೆ ನೀಡಿದರು.
ಈ ವೇಳೆ ಶಾಸಕರು ಮಾತನಾಡಿ ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಸರಿಯುವ ಮಾತಿಲ್ಲ, ಎರಡು ಬಾರಿ ಸೋತು ಮೂರನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದೇನೆ, ಮತದಾರರ ಸಮಸ್ಯೆಗಳಿಗೆ ಗಮನ ಹರಿಸುವುದು ನನ್ನ ಮೊದಲ ಕರ್ತವ್ಯ ಎಂದು ಚಪ್ಪರದಹಳ್ಳಿ ಗ್ರಾಮದಲ್ಲಿ ಮಾತನಾಡಿದರು.
ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಹಲವು ಅನುದಾನಗಳನ್ನು ಮಂಜೂರು ಮಾಡಿಸಿ ಅಭಿವೃದ್ಧಿಗೆ ಚಾಲನೆ ನೀಡಲಾಗಿತ್ತು, ಸರ್ಕಾರ ಉಳಿಸಿಕೊಳ್ಳಲು ನಮ್ಮ ಮುಖಂಡರು ವಿಫಲವಾದ್ದರಿಂದ ವಿರೋಧ ಪಕ್ಷದಲ್ಲಿ ಕೂರಬೇಕಾಯಿತು, ಆಡಳಿತ ಪಕ್ಷದವರು ವಿರೋಧ ಪಕ್ಷ ಶಾಸಕರನ್ನು ಪರಕೀಯರ ಹಾಗೆ ಕಾಣುತ್ತಾರೆ ಆದರೂ ತಾಲೂಕಿನ ಅಭಿವೃದ್ಧಿ ಹಿತದೃಷ್ಟಿಯಿಂದ ಸಂಬಂಧಿಸಿದ ಸಚಿವರು ಹಾಗೂ ಅಧಿಕಾರಿಗಳಿಗೆ ಮನವಿ ನೀಡಿದ್ದೇನೆ, ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಸರಿಯುವ ಮಾತಿಲ್ಲ, ಗ್ರಾಮಾಂತರ ಪ್ರದೇಶಗಳ ಸಂಪರ್ಕ ರಸ್ತೆ ಉತ್ತಮವಾಗಿರಬೇಕು, ಗುಣಮಟ್ಟದ ಕಾಮಗಾರಿಗೆ ಗುತ್ತಿಗೆದಾರರು ಆದ್ಯತೆ ನೀಡಿ ಹತ್ತಾರು ವರ್ಷ ಬಾಳಿಕೆ ಬರುವ ಕಾಮಗಾರಿ ನಡೆಸಿ ಎಂದು ತಾಕೀತು ಮಾಡಿದರು.
ಈ ವೇಳೆ ಗೊರಹಳ್ಳಿ ಚಪ್ಪರದಹಳ್ಳಿ ಹಾರನಹಳ್ಳಿ ಅಂಬಲಾರೆ ಚನ್ನಕೇಶವಪುರ ದೊಡ್ಡಕಮರಹಳ್ಳಿ ಗ್ರಾಮಗಳಲ್ಲಿ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.
ಈ ಸಂದರ್ಭ ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ ರಂಗಸ್ವಾಮಿ, ಸದಸ್ಯೆ ಸುಮಿತ್ರ ನಾಗರಾಜ್, ಮಾಜಿ ಸದಸ್ಯ ಅತ್ತರ್ ಮತ್ತಿನ್, ಉಪತಹಸೀಲ್ದಾರ್ ನಿಜಾಮುದ್ದೀನ್, ಪಿಡಬ್ಲ್ಯುಡಿ ಎಇಇ ನಾಗರಾಜ್, ಜಿ.ಪಂ ಎಇಇ ಪ್ರಭು, ತಾ.ಪಂ ಎಡಿ ರಘುನಾಥ, ಬಿಇಓ ತಿಮ್ಮೇಗೌಡ, ಎಇಇ ಶಿವಕುಮಾರ್ ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಗ್ರಾಮದ ಮುಖಂಡರು ಹಾಜರಿದ್ದರು.
