ಪಿರಿಯಾಪಟ್ಟಣ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಜ್ಞಾನ ವಿಷಯ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕ ಕೆ.ಮಹದೇವ್ ಭರವಸೆ ನೀಡಿದರು.
ಪಟ್ಟಣದ ಹರವೆ ಮಲ್ಲರಾಜಪಟ್ಟಣ ಬಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ 1.65 ಕೋಟಿ ವೆಚ್ಚದ ಹೆಚ್ಚುವರಿ ಕೊಠಡಿ ಮತ್ತು ಆಡಿಟೋರಿಯಂ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಶಾಸಕನಾಗಿ ಆಯ್ಕೆಯಾದಾಗಿನಿಂದ ಕಾಲೇಜು ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡಿ ಹಲವು ನೂತನ ಯೋಜನೆಗಳನ್ನು ಆರಂಭಿಸಲಾಗಿದೆ, ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ
ಜಿ.ಟಿ ದೇವೇಗೌಡರು ಅನುದಾನ ಮಂಜೂರು ಮಾಡಿದ್ದರು ಸರ್ಕಾರ ಬದಲಾದ್ದರಿಂದ ಅನುದಾನ ಹಿಂಪಡೆಯಲಾಗಿದ್ದರೂ ಉನ್ನತ ಶಿಕ್ಷಣ ಸಚಿವರಿಗೆ ಮನವಿ ನೀಡಿ ಮತ್ತೆ ಬೆಟ್ಟದಪುರ ಮತ್ತು ಪಿರಿಯಾಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅನುದಾನ ಮಂಜೂರು ಮಾಡಿಸಿದ್ದು ಶೀಘ್ರದಲ್ಲೇ ಬೆಟ್ಟದಪುರದಲ್ಲಿ ಕಾಮಗಾರಿಗೆ ಚಾಲನೆ ನೀಡುವುದಾಗಿ ತಿಳಿಸಿ ಅನುದಾನದ ಹಣ ಪೋಲಾಗದಂತೆ ಉತ್ತಮ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡುವಂತೆ ಗುತ್ತಿಗೆದಾರರಿಗೆ ತಿಳಿಸಿದರು.
ಸಿಡಿಸಿ ಸದಸ್ಯ ಟಿ.ರಾಜು ಮಾತನಾಡಿ ಕಾಲೇಜು ಪ್ರಾರಂಭವಾಗಿ ಇಲ್ಲಿಯವರೆಗೆ ಅಭಿವೃದ್ಧಿಗಾಗಿ ಅತಿ ಹೆಚ್ಚು ಅನುದಾನ ನೀಡಿದ ಕೀರ್ತಿ ಶಾಸಕರಿಗೆ ಸಲ್ಲುತ್ತದೆ, ಸರ್ಕಾರಿ ಐಟಿಐ ಕಾಲೇಜಿಗೆ ಹೋಗುವ ರಸ್ತೆ ಅಭಿವೃದ್ಧಿ, ಮಹಿಳೆಯರ ವಿಶ್ರಾಂತಿ ಕೊಠಡಿ ಮತ್ತು ವಸತಿ ನಿಲಯ ಕಟ್ಟಡಗಳು ನಿರ್ಮಾಣವಾಗಿ ವರ್ಷ ಕಳೆದರೂ ಉದ್ಘಾಟನೆಯಾಗದ ಬಗ್ಗೆ ಶಾಸಕರು ಕ್ರಮ ವಹಿಸುವಂತೆ ಕೋರಿದಾಗ ಶಾಸಕರು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಶೀಘ್ರದಲ್ಲಿ ಉದ್ಘಾಟನೆ ನೆರವೇರಿಸುವಂತೆ ತಾಕೀತು ಮಾಡಿ ಐಟಿಐ ಕಾಲೇಜು ರಸ್ತೆ ಅಭಿವೃದ್ಧಿಗೆ ಪುರಸಭೆ ಮೂಲಕ ಅನುದಾನ ನೀಡುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಡಿ ದೇವರಾಜ್, ಐಟಿಐ ಪ್ರಾಂಶುಪಾಲ ಶ್ರೀಧರ್, ಪುರಸಭೆ ಸದಸ್ಯರಾದ ಪ್ರಕಾಶ್ ಸಿಂಗ್, ಮಂಜುನಾಥ್ ಸಿಂಗ್, ವಿನೋದ್, ಪಿ.ಸಿ ಕೃಷ್ಣ, ನಿರಂಜನ್, ಸಿಡಿಸಿ ಸದಸ್ಯರಾದ ರಘುನಾಥ್, ಗೋಪಾಲ್, ಮುಖಂಡರಾದ ಕುಮಾರ್, ಸೈಯದ್ ಇಲಿಯಾಸ್, ಉಮೇಶ್, ಉಪನ್ಯಾಸಕರು, ತರಬೇತಿ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.