
ಪಿರಿಯಾಪಟ್ಟಣ:ತಾಲ್ಲೂಕಿನಲ್ಲಿ ಈ ರಸ್ತೆಗಳ ದುಸ್ಥಿತಿಯನ್ನು ಗಮನಿಸಿದಾಗ ಈವರೆಗೂ ತಾಲ್ಲೂಕಿನಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಇದ್ದಾರೆಯೇ ಎಂಬ ಅನುಮಾನ ಮೂಡುತ್ತಿತ್ತು ಎಂದು ಶಾಸಕ ಕೆ.ಮಹದೇವ್ ಅಭಿಪ್ರಾಯಪಟ್ಟರು.

ತಾವು ಶಾಸಕರಾಗಿ ಆಯ್ಕೆಯಾದ ನಂತರ ಗ್ರಾಮೀಣ ಪ್ರದೇಶಗಳಲ್ಲಿನ ರಸ್ತೆ ಅಭಿವೃದ್ಧಿಗಾಗಿ ಸರ್ಕಾರದಿಂದ ಅನುದಾನ ತರುವ ಪ್ರಯತ್ನ ಮಾಡುತ್ತಿದ್ದು ನಮ್ಮದೇ ಪಕ್ಷದ ಸರಕಾರ ಅಧಿಕಾರದಲ್ಲಿ ಇಲ್ಲದಿದ್ದಾಗ ಸರ್ಕಾರದಿಂದ ಅನುದಾನ ತರುವುದು ಎಷ್ಟು ಕಷ್ಟ ಎಂಬುದು ಗೊತ್ತಾಗುತ್ತಿದೆ ಎಂದರು. ತಾಲ್ಲೂಕಿನ ಜವನಿಕುಪ್ಪೆ ಗ್ರಾಮದ ರಸ್ತೆಗಳ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದ್ದು ಬಹುತೇಕ ಜೆಡಿಎಸ್ ಮತದಾರರನ್ನು ಹೊಂದಿರುವ ಈ ಗ್ರಾಮಕ್ಕೆ ಅಭಿವೃದ್ಧಿ ಎಂಬುದು ಈವರೆಗೂ ಮರೀಚಿಕೆಯಾಗಿಯೇ ಉಳಿದಿತ್ತು ಎಂದು ಬೇಸರ ವ್ಯಕ್ತಪಡಿಸಿದರು. ಗ್ರಾಮ ಪರಿಮಿತಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವಾಗ ಸಾರ್ವಜನಿಕರೇ ಗುಣಮಟ್ಟ ಲೋಪವಾಗದಂತೆ ಗಮನಿಸುವಂತೆ ಸಲಹೆ ನೀಡಿದರು.

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಜೆ.ಎಸ್. ನಾಗರಾಜ್ ಮಾತನಾಡಿ ಗ್ರಾಮಕ್ಕೆ 5.25 ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿ ತಂದಿರುವುದು ಇತಿಹಾಸದಲ್ಲಿಯೇ ಮೊದಲ ಬಾರಿಯಾಗಿದೆ ಎಂದು ಶಾಸಕರನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ, ಹಿರಿಯ ವಕೀಲ ಗೋವಿಂದೇ ಗೌಡ, ಲೋಕೋಪಯೋಗಿ ಇಲಾಖೆಯ ಎಇಇ ನಾಗರಾಜು, ಶಿವಕುಮಾರ್, ಪಾಷಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ, ಉಪತಹಸೀಲ್ದಾರ್ ಕೆಂಚಪ್ಪ, ಬಿಸಿಎಂ ಅಧಿಕಾರಿ ಮೋಹನ್ ರಾಜ್, ಪಿಡಿಒ ರವಿಕುಮಾರ್, ಮುಖಂಡರಾದ ಶಿವಣ್ಣ, ರಾಜೇಶ್, ಕುಮಾರ್, ಶಿವನಂಜೇಗೌಡ, ಕೃಷ್ಣೇಗೌಡ, ತಿಮ್ಮೇಗೌಡ, ರಾಜೇಂದ್ರ, ಇಲಿಯಾಸ್ ಅಹ್ಮದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.