
PMGSY ಯೋಜನೆಯಲ್ಲಿ ಅಂದಾಜು ಮೊತ್ತ ರೂ 2 ಕೋಟಿ ಅನುದಾನದಲ್ಲಿ ಒಟ್ಟು 20 . 11 ಕಿ.ಮೀ ಉದ್ದದ ರಸ್ತೆಗಳ ಮರುಡಾಂಬರೀಕರಣ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ
ಗ್ರಾಮಾಂತರ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ಅತಿ ಹೆಚ್ಚು ಅನುದಾನ ನೀಡಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ, ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನ ಮಂತ್ರಿಯಾಗಿದ್ದ ಸಂದರ್ಭ ಗ್ರಾಮಾಂತರ ಪ್ರದೇಶಗಳ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಗ್ರಾಮ್ ಸಡಕ್ ಎಂಬ ಯೋಜನೆ ಮುಖಾಂತರ ಹಳ್ಳಿಗಳ ಅಭಿವೃದ್ಧಿಗೆ ಒತ್ತು ನೀಡಿದರು, ಪ್ರಧಾನಿ ನರೇಂದ್ರ ಮೋದಿಯವರು ಸಹ ವಾಜಪೇಯಿಯವರು ಕಂಡ ಕನಸಂತೆ ಹಳ್ಳಿಗಳ ಅಭಿವೃದ್ಧಿಗೆ ನೇರವಾಗಿ ಅನುದಾನ ನೀಡಿ ದೇಶ ಅಭಿವೃದ್ಧಿ ಪಥದಲ್ಲಿ ಸಾಗುವಂತೆ ಮಾಡಿದ್ದಾರೆ, ಅನುದಾನ ದುರುಪಯೋಗವಾಗದಂತೆ ಗುತ್ತಿಗೆದಾರರು ಗಮನ ಹರಿಸಿ ಹತ್ತಾರು ವರ್ಷಗಳ ಕಾಲ ರಸ್ತೆ ಬಾಳಿಕೆ ಬರುವಂತೆ ನಿರ್ಮಿಸಬೇಕು, ನಾನು ಗುತ್ತಿಗೆದಾರರಿಗೆ ಕರೆ ಮಾಡುವುದು ಕಮಿಷನ್ ಗಾಗಿ ಅಲ್ಲ, ಕಾಮಗಾರಿಗಳ ಗುಣಮಟ್ಟ ಕಾಪಾಡಿಕೊಳ್ಳಲು ಸೂಚಿಸಲು ಎಂದರು.
ಶಾಸಕ ಕೆ.ಮಹದೇವ್ ಮಾತನಾಡಿ ರಾಜ್ಯ ಸರ್ಕಾರದ ಅನುದಾನದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಬಗೆಹರಿಸುವುದು ತಡವಾಗುವುದರಿಂದ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗ್ರಾಮ್ ಸಡಕ್ ಮತ್ತು ನರೇಗಾ ಸೇರಿದಂತೆ ಇತರೆ ಅನುದಾನಗಳ ಮುಖಾಂತರ ಸಾರ್ವಜನಿಕರ ಸಮಸ್ಯೆಗಳು ಬಗೆಹರಿಯುತ್ತಿರುವುದು ಸಂತಸಕರ, ಹಳ್ಳಿಗಳ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿಯವರು ಹೆಚ್ಚು ಅನುದಾನ ನೀಡುತ್ತಿರುವುದು ಶ್ಲಾಘನೀಯ ಎಂದರು. ಸಾಲುಕೊಪ್ಪಲು ಗ್ರಾಮದ ಕಾರ್ಯಕ್ರಮಕ್ಕೆ ಸಂಸದರು ಆಗಮಿಸಿದಾಗ ರೈತರು ಕಡಿಮೆ ದರ್ಜೆಯ ತಂಬಾಕು ಬೆಳೆಗೆ ನಿಗದಿಪಡಿಸಿರುವ ದರದ ಸಮಸ್ಯೆ ಬಗ್ಗೆ ದೂರಿದರು ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು ಈ ಸಂಬಂಧ ಈಗಾಗಲೇ ಪ್ರಾದೇಶಿಕ ವ್ಯವಸ್ಥಾಪಕರೊಂದಿಗೆ ಮಾತನಾಡಿದ್ದು ಶೀಘ್ರದಲ್ಲೇ ತಂಬಾಕು ಮಂಡಳಿ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಈ ವೇಳೆ ಮುದ್ದನಹಳ್ಳಿ, ದೊರೆಕೆರೆ, ಬೋರೆ ಕೊಪ್ಪಲು, ಕಳ್ಳಿಕೊಪ್ಪಲು, ಬಾರಸೆ, ಸಾಲುಕೊಪ್ಪಲು, ಕಣಗಾಲು, ಲಕ್ಷ್ಮೀಪುರ ಗ್ರಾಮಗಳಲ್ಲಿ ಮರು ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭ ಮಾಜಿ ಶಾಸಕ ಎಚ್.ಸಿ ಬಸವರಾಜು, ಕೆಡಬ್ಲ್ಯುಎಸ್ಎಸ್ ಬಿ ನಿರ್ದೇಶಕ ಆರ್.ಟಿ ಸತೀಶ್, ಜಿ.ಪಂ ಸದಸ್ಯ ಕೆ.ಎಸ್ ಮಂಜುನಾಥ್, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ ರಂಗಸ್ವಾಮಿ, ಸದಸ್ಯ ಮಲ್ಲಿಕಾರ್ಜುನ, ಮುಖಂಡರುಗಳಾದ ವಸಂತ್ ಕುಮಾರ್, ಎಂ.ಎಂ ರಾಜೇಗೌಡ, ಕಿರಣ್ ಜಯರಾಮೇಗೌಡ, ಬೆಮ್ಮತ್ತಿ ಚಂದ್ರು, ಕಾಂತರಾಜು, ಲಕ್ಷ್ಮಿನಾರಾಯಣ್, ಗಿರೀಶ್, ನಾಗೇಂದ್ರ ಸೇರಿದಂತೆ ಹಲವರು ಹಾಜರಿದ್ದರು.
