ಕಾರ್ಮಿಕರು ಮಕ್ಕಳ ವಿದ್ಯಾಭ್ಯಾಸದ ಕಡೆ ಒತ್ತು ನೀಡಿ: ಶಾಸಕ ಕೆ.ಮಹದೇವ್. 23/01/2021

ಪಿರಿಯಾಪಟ್ಟಣ: ಕಟ್ಟಡ ಕಾರ್ಮಿಕರು ತಮ್ಮ ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಶ್ರಮ ಪಡಬೇಕಿದೆ ಎಂದು ಶಾಸಕ ಕೆ. ಮಹದೇವ್ ತಿಳಿಸಿದರು.   ಪಟ್ಟಣದ ಶ್ರೀ ಮಂಜುನಾಥ ಸಮುದಾಯ ಭವನದಲ್ಲಿ ಶ್ರೀ ಬಸವೇಶ್ವರ ಕಟ್ಟಡ ಕಾರ್ಮಿಕರ ಹಾಗೂ ಇತರೆ ನಿರ್ಮಾಣ ಒಕ್ಕೂಟದ ವತಿಯಿಂದ ಆಯೋಜಿಸಿದ್ದ  ಕಟ್ಟಡ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರ ಅಸಂಘಟಿತ ಕಾರ್ಮಿಕರು ಮತ್ತು ಕಟ್ಟಡ ಕಾರ್ಮಿಕರ ಏಳ್ಗೆಗಾಗಿ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಿದ್ದು, ಈ ಮಂಡಳಿ ಮೂಲಕ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಜನಪರ ಸೌಲಭ್ಯಗಳನ್ನು ಜಾರಿ ಮಾಡಿದೆ. ಸರ್ಕಾರ ಕಾರ್ಮಿಕರ ಕಲ್ಯಾಣಕ್ಕಾಗಿ ಇದುವರೆಗೂ 26 ಕಾರ್ಮಿಕ ಕಾಯ್ದೆಗಳನ್ನು ಜಾರಿ ಮಾಡಿ ವಿವಿಧ ಸೌಲಭ್ಯಗಳನ್ನು ಕಾರ್ಮಿಕರಿಗೆ ನೀಡುತ್ತಿದೆ. ಇದುವರೆಗೂ ಈ ಸೌಲಭ್ಯಗಳು ಕೇವಲ ಶೇ. 8 ರಷ್ಟು ಕಾರ್ಮಿಕರನ್ನು ಮಾತ್ರ ತಲುಪಲು ಸಾಧ್ಯವಾಗಿದ್ದು, ತಾಲ್ಲೂಕಿನಲ್ಲಿ ಸಾವಿರಾರು ಕಾರ್ಮಿಕರು ಬಡತನದ ಬೇನೆಯಲ್ಲಿ ಬದುಕು ಸಾಗಿಸುತ್ತಿದ್ದು, ಕಾರ್ಮಿಕರು ತಮ್ಮಂತೆ ತಮ್ಮ ಮಕ್ಕಳು ಕಷ್ಟಪಡಬಾರದು ಎಂದರೆ ಅವರಿಗೆ ಉತ್ತಮ ವಿದ್ಯಭ್ಯಾಸ ಕೊಡಿಸಿ ಆ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದರು.

 ಮೈಸೂರು ಜಿಲ್ಲಾ ಕಾಂಗ್ರೆಸ್ನ ಗ್ರಾಮಾಂತರ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ ಈವರೆಗೆ ತಾಲ್ಲೂಕಿನಲ್ಲಿ 1 ಲಕ್ಷಕ್ಕೂ ಹೆಚ್ಚು ಕಾರ್ಮಿಕರಿದ್ದು ಕೇವಲ 8 ಸಾವಿರ ಕಾರ್ಮಿಕರು ಮಾತ್ರ ನೊಂದಣಿ ಮಾಡಿಸಿದ್ದಾರೆ. ಇನ್ನು ಸರಿ ಸುಮಾರು 70 ರಿಂದ 80 ಸಾವಿರ ಕಾರ್ಮಿಕರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಇದಕ್ಕೆ ಅನೇಕ ಕಾರಣಗಳಿರಬಹುದು ಆದ್ದರಿಂದ ಕಾರ್ಮಿಕ ಇಲಾಖೆಯಲ್ಲಿ ನೊಂದಣಿ ಮಾಡಿಸಿಕೊಳ್ಳಲು ಸಾಧ್ಯವಾಗದೇ ಆರ್ಥಿಕ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಸರ್ಕಾರದೀಂದ ನೊಂದಣಿಗಾಗಿ ನಿಗಧಿ ಮಾಡಿರುವ ಶೂಲ್ಕವನ್ನು ಬರಿಸಲು ವೈಯಕ್ತಿಕವಾಗಿ ಬಸವೇಶ್ವರ ಕಟ್ಟಡ ಕಾರ್ಮಿಕರ ಸಂಘಕ್ಕೆ ರೂ 10 ಸಾವಿರ ಹಣವನ್ನು ನೀಡುವುದಾಗಿ ತಿಳಿಸಿದರು.

 ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಕೆ.ಎಸ್.ಕೃಷ್ಣೇಗೌಡ ಮಾತನಾಡಿ ಕಟ್ಟಡ ಕಾರ್ಮಿಕರು ದೇಶದ ಆಸ್ತಿಯಾಗಿದ್ದಾರೆ. ಆದರೆ, ಸರ್ಕಾರಗಳು ಅವರನ್ನು ನಿರ್ಲಕ್ಷಿಸುತ್ತ ಬಂದಿದ್ದು, ಯಾವುದೇ ಕಟ್ಟಡ ನಿರ್ಮಾಣವಾದರೂ ಶೇ. 1ನ್ನು ತೆರಿಗೆ ರೂಪದಲ್ಲಿ ಸರ್ಕಾರ ಕಟ್ಟಿಸಿಕೊಳ್ಳುತ್ತದೆ. ಆ ಹಣವನ್ನು ಕಾರ್ಮಿಕರಿಗೆ ವಿವಿಧ ರೀತಿಯ ಸವಲತ್ತುಗಳನ್ನು ಕೊಡಲು ಬಳಕೆ ಮಾಡಿಕೊಳ್ಳಬೇಕು. ಆದರೆ ಸರ್ಕಾರ ಈ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದಕ್ಕೆ ಕಾರಣ ಕಟ್ಟಡ ಕಾಮಿಕರು ಸಂಘಟಿತರಾಗದಿರುವುದು ಕಾರಣ. ಕಾರ್ಮಿಕರ ಹಣ ಕಾರ್ಮಿಕರಿಗೇ ಧಕ್ಕುವಂತಾಗಲು ಬಲಿಷ್ಠ ಸಂಘಟನೆ ಅತ್ಯಗತ್ಯ. ತಾಲ್ಲೂಕಿನಲ್ಲಿ ಅನೇಕ ಕಟ್ಟಡ ಕಾರ್ಮಿಕರು ನಿವೇಶನ ರಹಿತರಾಗಿದ್ದು, ಬಾಡಿಗೆ ಮನೆಗಳಲ್ಲಿ ವಾಸಿಸುವಂತಾಗಿದೆ. ಸರ್ಕಾರ ಇಂತಹ ಕಾರ್ಮಿಕರಿಗೆ ನಿವೇಶನಗಳೊಂದಿಗೆ ಸೌಕರ್ಯ ಒದಗಿಸಬೇಕೆಂದರು.

ಶ್ರೀ ಬಸವೇಶ್ವರ ಕಟ್ಟಡ ಕಾರ್ಮಿಕರ ಹಾಗೂ ಇತರೆ ನಿರ್ಮಾಣ ಒಕ್ಕೂಟದ ವತಿಯಿಂದ ನೊಂದಾಯಿತ ಫಲಾನುಭವಿಗಳಿಗೆ ಕಾರ್ಡ್ ವಿತರಣೆ ಹಾಗು ಕಟ್ಟಡ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಲಾಯಿತು

ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಮಾಕೋಡು ಗಣೇಶ್, ಮುಖಂಡರಾದ ಅಣ್ಣಯ್ಯ ಶೆಟ್ಟಿ, ವಿ.ಜಿ.ಅಪ್ಪಾಜಿಗೌಡ, ಆರ್.ಎಸ್.ದೊಡ್ಡಣ್ಣ, ಜಲೇಂದ್ರ, ಗೋವಿಂದರಾಜ್,  ಪುನಾಡಹಳ್ಳಿ ಅಶೋಕ್, ದಿನೇಶ್, ಎಲ್ಲೇಗೌಡ, ದೀಪು, ಶಿವರಾಜ್, ರವಿಕುಮಾರ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top