
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸುವ ಸಂದರ್ಭ ರೈತರಿಗೆ ಅನಾನುಕೂಲವಾಗದಂತೆ ಅಧಿಕಾರಿಗಳು ಎಚ್ಚರ ವಹಿಸುವಂತೆ ಶಾಸಕ ಕೆ.ಮಹದೇವ್ ಹೇಳಿದರು. ಪಟ್ಟಣದ ಎಪಿಎಂಸಿ ಆವರಣದಲ್ಲಿ ರಾಗಿ ಖರೀದಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು, ರೈತರು ಬೆಳೆದ ರಾಗಿ ಬೆಳೆ ಕನಿಷ್ಠ ಬೆಂಬಲ ಬೆಲೆಯಡಿ ಮಾರಾಟ ಮಾಡುವ ಸಂದರ್ಭ ನೋಂದಣಿಗಾಗಿ ಪ್ರತಿನಿತ್ಯ ಸಂಬಂಧಿಸಿದ ಕಚೇರಿಗಳಿಗೆ ಧಾವಿಸಿದರು ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದ್ದು ರೈತರ ಕೆಲಸಗಳಿಗೆ ತೊಂದರೆಯಾಗದಂತೆ ಅಧಿಕಾರಿಗಳು ನಿಗಾವಹಿಸಬೇಕು, ಖರೀದಿ ಕೇಂದ್ರ ತೆರೆಯುವಂತೆ ರೈತರು ಮನವಿ ನೀಡುತ್ತಾರೆ ನಂತರ ಅಲ್ಲಿನ ಸಮಸ್ಯೆಯ ದೂರುಗಳ ಬಗ್ಗೆ ನನ್ನ ಗಮನಕ್ಕೆ ಬಾರದ ಕಾರಣ ಸಾರ್ವಜನಿಕ ವಲಯದಲ್ಲಿ ತಪ್ಪು ಸಂದೇಶ ರವಾನೆಯಾಗಿ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ, ಸಾರ್ವಜನಿಕ ಕೆಲಸಕ್ಕಾಗಿ ಲಂಚ ಕೇಳುವ ಅಧಿಕಾರಿಗಳ ಬಗ್ಗೆ ಮತ್ತು ವರ್ತಕರು ಹಾಗೂ ದಲ್ಲಾಳಿಗಳಿಂದ ಮಾರಾಟ ಕಂಡು ಬಂದರೆ ನನಗೆ ಮಾಹಿತಿ ನೀಡಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ರಾಗಿ ಕೇಂದ್ರವನ್ನು ಪ್ರಾರಂಭಿಸದ ಹಿನ್ನೆಲೆಯಲ್ಲಿ ತಾಲೂಕಿನ ಜನತೆ ನನ್ನ ಗಮನಕ್ಕೆ ತಂದಾಗ ನಾನು ಕಂದಾಯ ಇಲಾಖೆಯ ಸಚಿವರನ್ನು ಅಧಿವೇಶನದ ಸಂದರ್ಭದಲ್ಲಿ ಸಂಪರ್ಕಿಸಿ ಜಿಲ್ಲಾಧಿಕಾರಿಗಳು ತಾಲೂಕಿನಲ್ಲಿ ರಾಗಿ ಖರೀದಿ ಕೇಂದ್ರವನ್ನು ಅತಿಶೀಘ್ರದಲ್ಲೇ ಪ್ರಾರಂಭಿಸುವಂತೆ ಆದೇಶ ಮಾಡಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಇಂದು ರಾಗಿ ಖರೀದಿ ಕೇಂದ್ರವನ್ನು ತಾಲೂಕಿನ ಬೆಟ್ಟದಪುರ ಮತ್ತು ಪಿರಿಯಾಪಟ್ಟಣ,ಹಾರನಹಳ್ಳಿ ಭಾಗಗಳಲ್ಲಿ ಪ್ರಾರಂಭಿಸುತ್ತಿದ್ದೇವೆ. ಈಗಾಗಲೇ ಸರ್ಕಾರವು ಉತ್ತಮ ಗುಣಮಟ್ಟದ ರಾಗಿ ಬೆಳೆಗೆ 3,295 ರೂ ಗಳನ್ನು ಘೋಷಿಸಿದೆ ಇದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರಲ್ಲದೆ ರಾಗಿ ಬೆಳೆದ ರೈತರನ್ನು ಹೊರತುಪಡಿಸಿ ವರ್ತಕರು ಸೇರಿದಂತೆ ಇತರೆ ಯಾವುದೇ ಮಧ್ಯವರ್ತಿ ವ್ಯಕ್ತಿಗಳಿಂದ ರಾಗಿಯನ್ನು ಕೇಂದ್ರದ ಅಧಿಕಾರಿಗಳು ಖರೀದಿಸುವಂತಿಲ್ಲ ಇಂತಹ ಘಟನೆಗಳು ನನ್ನ ಗಮನಕ್ಕೆ ಬಂದಿದೆ ಆದರೆ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ನಾನು ಮುಂದಾಗುತ್ತೇನೆ ಎಂದು ಸೂಚಿಸಿದರು.ಆದ್ದರಿಂದ ರೈತರು ಈ ಬಗ್ಗೆ ಜಾಗೃತಿಯನ್ನು ಹೊಂದಿ ತಾವು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆಯನ್ನು ಪಡೆಯುವುದರ ಮೂಲಕ ಆರ್ಥಿಕ ಸದೃಢತೆಯನ್ನು ಹೊಂದಬೇಕು ಎಂದು ತಿಳಿಸಿದರು.

ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ ಮಾತನಾಡಿ ಪಹಣಿಯಲ್ಲಿ ಬೆಳೆ ನೋಂದಣಿ ಸಂಬಂಧ ವಿಳಂಬವಾಗುತ್ತಿರುವ ಬಗ್ಗೆ ರೈತರಿಂದ ದೂರುಗಳು ಕೇಳಿಬರುತ್ತಿದ್ದು ಸರ್ಕಾರಿ ಆದೇಶ ಅನ್ವಯ ಬೆಳೆ ಸರ್ವೇ ಸಂಪೂರ್ಣ ನಡೆದ ನಂತರ ಪಹಣಿ ನೀಡುವ ಕಾರಣ ತಡವಾಗುತ್ತಿದೆ ಹೊರತು ಅಧಿಕಾರಿಗಳ ನಿರ್ಲಕ್ಷ್ಯತನದಿಂದಲ್ಲ, ರೈತರಿಗೆ ಸರ್ಕಾರಿ ಸೌಲಭ್ಯಗಳ ಯಾವುದೇ ಗೊಂದಲ ಅಥವಾ ದೂರುಗಳಿದ್ದರೆ ನೇರ ನನಗೆ ಮಾಹಿತಿ ನೀಡಿ, ಗುಣಮಟ್ಟದ ರಾಗಿಯನ್ನು ಖರೀದಿ ಕೇಂದ್ರಕ್ಕೆ ತಂದು ಉತ್ತಮ ಬೆಲೆ ಪಡೆಯುವಂತೆ ತಿಳಿಸಿದರು.
ಈ ವೇಳೆ ರೈತರು ಮಧ್ಯವರ್ತಿಗಳ ಹಾವಳಿ, ನೋಂದಣಿ ವಿಳಂಬ ಹಾಗೂ ಸವಲತ್ತುಗಳು ಅರ್ಹರಿಗೆ ತಲುಪುತ್ತಿಲ್ಲ ಎಂದು ದೂರಿದರು, ಕಾರ್ಯಕ್ರಮದಲ್ಲಿ ಹಾಜರಿದ್ದ ರೈತರಿಗೆ ಸೂಕ್ತ ಆಸನ ವ್ಯವಸ್ಥೆ ಕಲ್ಪಿಸದ ಕಾರಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಆಸನ ವ್ಯವಸ್ಥೆ ಕಲ್ಪಿಸುವವರೆಗೂ ಉದ್ಘಾಟನೆ ಮಾಡದೆ ಸರ್ಕಾರಿ ಸೌಲಭ್ಯಗಳ ಮಾಹಿತಿ ರೈತರಿಗೆ ಸರಿಯಾಗಿ ದೊರೆಯಬೇಕು ಎಂದು ತಿಳಿಸಿ ಹಾಜರಿದ್ದ ಎಲ್ಲರಿಗೂ ಆಸನ ವ್ಯವಸ್ಥೆಯಾದ ನಂತರ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ಶಂಕರಪ್ಪ, ಮಾಜಿ ಅಧ್ಯಕ್ಷ ರಾಜಯ್ಯ, ಉಪಾಧ್ಯಕ್ಷ ಚಂದ್ರೇಗೌಡ, ಮಾಜಿ ಅಧ್ಯಕ್ಷ ಮೋಹನ್ ಕುಮಾರ್, ಪುರಸಭ ಅಧ್ಯಕ್ಷ ಮಂಜುನಾಥ್ ಸಿಂಗ್, ಸದಸ್ಯರಾದ ಭಾರತಿ, ಪುಷ್ಪಲತಾ, ಕೆಡಬ್ಲ್ಯುಎಸ್ಎಸ್ ಬಿ ನಿರ್ದೇಶಕ ಆರ್.ಟಿ ಸತೀಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್, ಆಹಾರ ಶಿರಸ್ತೇದಾರ್ ಸಣ್ಣಸ್ವಾಮಿ, ಕೃಷಿ ಅಧಿಕಾರಿ ಮಹೇಶ್, ಖರೀದಿ ಅಧಿಕಾರಿ ಹರೀಶ್, ಮುಖಂಡರಾದ ತಿಮ್ಮೇಗೌಡ, ರಘುನಾಥ್, ತಿಮ್ಮನಾಯಕ, ರಾಜು, ಮಹದೇವ್ ಮತ್ತು ರೈತರು ಹಾಜರಿದ್ದರು.