ಪಿರಿಯಾಪಟ್ಟಣ ತಾಲೂಕಿನ ಬೆಟ್ಟದತುಂಗ ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಿಸಿದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜೇ ಅರಸುರವರ ಪ್ರತಿಮೆಯನ್ನು ಸಹಕಾರ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಹಾಗು ಶಾಸಕ ಕೆ ಮಹದೇವ್ ಅನಾವರಣಗೊಳಿಸಿದರು 26/02/2021

ಸಾಮಾಜಿಕ ನ್ಯಾಯದ ಹರಿಕಾರ ಮಾಜಿ ಮುಖ್ಯಮಂತ್ರಿ  ಡಿ. ದೇವರಾಜ ಅರಸ್ ಅವರ ಸ್ಮರಣೆಗೆ ಅಭಿಮಾನದಿಂದ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದು ಸಹಕಾರ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ತಿಳಿಸಿದರು.

 ತಾಲೂಕಿನ ಬೆಟ್ಟದತುಂಗ ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಿಸಿದ    ಮಾಜಿ ಮುಖ್ಯಮಂತ್ರಿ ಡಿ. ದೇವರಾಜೇ  ಅರಸುರವರ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು ನಾಡಿನ ಅಭಿವೃದ್ಧಿಗೆ ಡಿ.ದೇವರಾಜ ಅರಸು ರವರ ಕೊಡುಗೆ ಅಪಾರವಾಗಿದ್ದು ಇವರ ನೆನಪಿನ ಕಾರ್ಯಕ್ರಮಕ್ಕೆ ಸಾರ್ವಜನಿಕರು ತುಂಬು ಹೃದಯದ ಅಭಿಮಾನದಿಂದ ಆಗಮಿಸಬೇಕು.  ಅರಸುರವರ ಜೀವಿತಾವಧಿಯ ಕಾಲದಲ್ಲಿ ನಾನು ಅವರನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ.ಅವರ ಆಡಳಿತದ ಸಮಯದಲ್ಲಿ ಮತ್ತು ಅವರು  ನೋವನ್ನು ಅನುಭವಿಸಿದ ಸಂದರ್ಭದಲ್ಲಿ  ಅವರ ಕೊನೆಯ ದಿನಗಳವರೆಗೂ ನಾನು ಅವರನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ.ಇವರ ಆಡಳಿತದ ಯೋಜನೆಗಳು ಜನಸಾಮಾನ್ಯರ ಮತ್ತು  ನೊಂದವರ ಪರವಾಗಿ ಇರುತ್ತಿತ್ತು. ಈ ಕಾರಣಕ್ಕಾಗಿ ಇಂದಿಗೂ ಕೂಡ ನಾಡಿನ ಜನತೆ ಇವರನ್ನು ಸ್ಮರಿಸುವಂತಹ ಕಾರ್ಯ ಮಾಡುತ್ತಿದ್ದಾರೆ.ಇವರ ಆಡಳಿತದ 8 ವರ್ಷದಲ್ಲಿನ ಆಡಳಿತದ ಅವಧಿಯಲ್ಲಿ ಅವರು ಜಾರಿಗೆ ತಂದ ಯೋಜನೆಗಳು ಇಂದಿಗೂ ಕೂಡ ಜಾರಿಯಲ್ಲಿದೆ ಅಲ್ಲದೆ ಇವರಿಂದ   ಅನೇಕ ರಾಜಕಾರಣಿಗಳು ಬೆಳಕಿಗೆ ಬಂದದ್ದನ್ನು ನಾವು ಕಾಣುತ್ತೇವೆ. ಇವರು ಅಧಿಕಾರ ಕಳೆದುಕೊಂಡಂತಹ ಸಂದರ್ಭದಲ್ಲಿಯೂ ಕೂಡ ಧೃತಿಗೆಡದೆ ಜನಸಾಮಾನ್ಯರ ನಡುವೆ ಇದ್ದು ತಮ್ಮ ಜೀವಿತಾವಧಿಯನ್ನು ಕೊನೆಗೊಳಿಸಿ ಇತರರಿಗೆ ಮಾದರಿಯಾಗಿದ್ದಾರೆ.   ಪ್ರಸ್ತುತ ದಿನಗಳಲ್ಲಿ ಮೀಸಲಾತಿಗಾಗಿ ಮತ್ತು ಅಧಿಕಾರಕ್ಕಾಗಿ ಅನೇಕ ಸಮುದಾಯಗಳು ಹೋರಾಟ ನಡೆಸುತ್ತಿದೆ. ಆದರೆ ಕಡಿಮೆ ಪ್ರಮಾಣ ಸಮುದಾಯದಲ್ಲಿನ ವ್ಯಕ್ತಿ ನಾಡಿನ ಮುಖ್ಯಮಂತ್ರಿಯಾಗುವುದು ಎಂದರೆ ಸುಲಭದ ಮಾತಲ್ಲ. ಇದು ಅರಸುರವರ  ಸಾಮರ್ಥ್ಯ ಮತ್ತು ಸಾಮಾಜಿಕ ಕಳಕಳಿಯನ್ನು ಎತ್ತಿತೋರಿಸುತ್ತದೆ. ಆದ್ದರಿಂದ ಇವರ  ಕಾರ್ಯಕ್ರಮಗಳನ್ನು  ಒಂದು ಜಾತಿಗೆ ಸೀಮಿತ ಮಾಡದೆ ಇಂತಹ ಮಹನೀಯರ ಸ್ಮರಣೆಯ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕಾಗಿದೆ. ಈ ಕಾರಣದಿಂದ ನಾನು ನನ್ನ ಕ್ಷೇತ್ರದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಇಲ್ಲಿಗೆ ಬಂದಿದ್ದೇನೆ. ಈ ಗ್ರಾಮದ ಅಭಿವೃದ್ಧಿಗೆ ಅವಶ್ಯಕವಾದ ಅನುದಾನಗಳನ್ನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮಂಜೂರು ಮಾಡಿಸಲು ಶ್ರಮಿಸುತ್ತೇನೆ  ಎಂದು ಭರವಸೆ ನೀಡಿದರು.

 ಶಾಸಕ ಕೆ.ಮಹದೇವ್ ಮಾತನಾಡಿ ಕರ್ನಾಟಕದ ಆಡಳಿತದ ಅಭಿವೃದ್ಧಿಯಲ್ಲಿ ಅರಸುರವರನ್ನು  ಮರೆಯಲು  ಸಾಧ್ಯವಿಲ್ಲ. ರೈತರ, ಬಡವರ ಮತ್ತು  ದೀನ ದಲಿತರ ಏಳಿಗೆಗಾಗಿ ಸದಾ ಚಿಂತಿಸುವ ಸಾಮಾಜಿಕ ಚಿಂತನೆ ಅವರದಾಗಿತ್ತು. ಇವರು  ಇಪ್ಪತ್ತು ಅಂಶಗಳ ಕಾರ್ಯಕ್ರಮಗಳನ್ನು ಪರಿಪೂರ್ಣವಾಗಿ ಯಶಸ್ವಿಗೊಳಿಸಿದ ಯಶಸ್ವಿ ರಾಜಕಾರಣಿ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಕೂಡ ಡಿ.ದೇವರಾಜ ಅರಸು ರವರ ಹುಟ್ಟೂರು ತಾಲೂಕಿನ ಬೆಟ್ಟದತುಂಗ ಎಂದು ತಿಳಿದಿರಲಿಲ್ಲ. ಮಾಧ್ಯಮದವರು ಮಾಡಿದ ಸುದ್ದಿಯನ್ನು ನೋಡಿ ಅರಸು ರವರ ಜನ್ಮ ಸ್ಥಳ ಬೆಟ್ಟದತುಂಗ  ಎಂದು ತಿಳಿದು ಈ ಗ್ರಾಮದ ಅಭಿವೃದ್ಧಿಗೆ ಅನುದಾನವನ್ನು ಬಿಡುಗಡೆ ಮಾಡಲು ಮುಂದಾದರು ಇದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.  ಆದರೆ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯರವರು ಮಾಜಿ ಶಾಸಕ ಕೆ.ವೆಂಕಟೇಶ್ ಅವರು ನನ್ನ ರಾಜಕೀಯ ಗುರುಗಳು ಎಂದು ತಪ್ಪು ಸಂದೇಶವನ್ನು ತಾಲೂಕಿನ ಜನತೆಗೆ ನೀಡುವುದರ ಮೂಲಕ ನೀನು ಸಾಕಿದ ಗಿಣಿ  ಹದ್ದಾಗಿ ಕುಕ್ಕಿತಲ್ಲೋ ಎಂದು ಹೇಳಿದ್ದಾರೆ.  ತಾಲೂಕಿನ ಜನತೆ ಇದನ್ನು ನಂಬಬಾರದು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಕೂಡ ನನ್ನ ರಾಜಕೀಯದ ಬೆಳವಣಿಗೆ ಬಗ್ಗೆ ಅರಿವಿದೆ. ನನ್ನ ರಾಜಕಾರಣದ ಗುರು ರಾಮರಾಜೇ ಅರಸ್  ಎಂಬುವವರು. ಇವರು ನನಗೆ ರಾಜಕೀಯದ ಅವಕಾಶಗಳನ್ನು ಕಲ್ಪಿಸಿ ತಾಲೂಕಿನಲ್ಲಿ ರಾಜಕೀಯ ಪ್ರವೇಶವನ್ನು ಮಾಡಿಸಿದರು ಇವರೇ ನನಗೆ ನನ್ನ ರಾಜಕೀಯ ಗುರುಗಳು ಎಂದು ತಿರುಗೇಟು ನೀಡಿದರು.  ಯಾರಿಗೂ ಕೂಡ ಅಧಿಕಾರ ಶಾಶ್ವತವಲ್ಲ ಅಧಿಕಾರದಲ್ಲಿದ್ದಾಗ ಜನಸಾಮಾನ್ಯರ ಮತ್ತು   ತಾಲೂಕಿನ ಅಭಿವೃದ್ಧಿಯ ಪರವಾಗಿ ಕೆಲಸವನ್ನು ಮಾಡಬೇಕು.ಆದರೆ ಡಿ. ದೇವರಾಜ ಅರಸು ರವರ ಪ್ರತಿಮೆ ಅನಾವರಣದ ವಿಷಯದಲ್ಲಿ ಸಣ್ಣತನವನ್ನು ತೋರಿರುವ ವ್ಯಕ್ತಿಗಳು ಇಲ್ಲಸಲ್ಲದ ಗೊಂದಲಗಳನ್ನು ಎಬ್ಬಿಸಿ ನಾಗರಿಕರಲ್ಲಿ ವೈಮನಸ್ಸು  ಮೂಡುವಂತ್ತೆ ಮಾಡಿರುವುದು  ಶೋಭೆ ತರುವಂತ್ತಲ್ಲ  ಎಂದರು.

 ಇದೇ ಸಂದರ್ಭದಲ್ಲಿ ಡಿ. ದೇವರಾಜ್ ಅರಸು ಅವರ ಮೊಮ್ಮಗ ಸೂರಜ್ ಅರಸು ಮತ್ತು ನೀರು ಸರಬರಾಜು ಮತ್ತು ಒಳಚರಂಡಿ ರಾಜ್ಯ ನಿರ್ದೇಶಕ ಆರ್. ಟಿ. ಸತೀಶ್ ಮಾತನಾಡಿದರು.

 ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಮಂಜುನಾಥ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಟಿ ರಂಗಸ್ವಾಮಿ.ಸದಸ್ಯ ಮಲ್ಲಿಕಾರ್ಜುನ್, ಗ್ರಾಪಂ ಸದಸ್ಯ ಪ್ರೀತಿ ರಾಜೇ ಅರಸ್,ಬಿಸಿಎಂ ಇಲಾಖೆಯ ಜಿಲ್ಲಾಧಿಕಾರಿ ಬಿಂದ್ಯಾ, ತಾಲೂಕು ದಂಡಾಧಿಕಾರಿ ಶ್ವೇತಾ ರವೀಂದ್ರ, ತಾಲೂಕು ಕಾರ್ಯನಿರ್ವಾಹಕಧಿಕಾರಿ ಡಿಸಿ ಶೃತಿ,ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ದೇಗೌಡ, ಶಿಕ್ಷಣಾಧಿಕಾರಿ ತಿಮ್ಮೇಗೌಡ,ಎಇ ಇ  ಪ್ರಭು,ಜಯರಾಮ್, ಜಯಂತ್, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮೋಹನ್ ರಾಜ್,ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೆ.ಎಸ್. ಮಹದೇವ್, ಸ್ಥಳೀಯ ಮುಖಂಡರಾದ ವಕೀಲ ದೇವರಾಜ್ ಅರಸ್, ಅಣ್ಣಯ್ಯ ಶೆಟ್ಟಿ,ಲೋಕೇಶ ರಾಜ್ ಅರಸ್,ಪ್ರಭುಗೌಡ.  ನಿವೃತ್ತ ಜಂಟಿ ನಿರ್ದೇಶಕ ಟಿ.ಸಿ. ವಸಂತ್ ರಾಜೇಶ್, ಶ್ರೀಕಂಠ ರಾಜೇ ಅರಸ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top