1.47 ಕೋಟಿ ವೆಚ್ಚದ ವಿವಿಧ ಗ್ರಾಮಗಳಲ್ಲಿ ರಸ್ತೆ ಹಾಗು ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಶಾಸಕ ಕೆ.ಮಹದೇವ್ ಗುದ್ದಲಿ ಪೂಜೆ ನೆರವೇರಿಸಿದರು. 06/03/2021

ಕೋಗಿಲವಾಡಿ ಗ್ರಾಮದಲ್ಲಿ 18 ಲಕ್ಷ ರೂ ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿ, ಇಟ್ಟಗಳ್ಳಿ ಗ್ರಾಮದಲ್ಲಿ 40 ಲಕ್ಷ ರೂ ವೆಚ್ಚದ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿ, ನಂದಿಪುರ ಬೋರೆ ಗ್ರಾಮದಲ್ಲಿ 35 ಲಕ್ಷ ರೂ ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿ, ಕಿತ್ತೂರು ಡಿಜಿ ಕೊಪ್ಪಲು ಗ್ರಾಮದಲ್ಲಿ 14 ಲಕ್ಷ ರು ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿ ಹಾಗೂ ಕಿತ್ತೂರು ಗ್ರಾಮದಲ್ಲಿ 40 ಲಕ್ಷ ರು ವೆಚ್ಚದ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕರು ರಾಜಕಾರಣಿಗಳು ತಾಲ್ಲೂಕಿನ ಅಭಿವೃದ್ಧಿಗೆ ಸಹಕಾರ ನೀಡುವ ಪ್ರಬುದ್ಧತೆ ಬೆಳೆಸಿಕೊಳ್ಳಬೇಕೇ ಹೊರತು ಅಭಿವೃದ್ಧಿ ಕಾಮಗಾರಿಗಳು ನನ್ನದು ನನ್ನದು ಎನ್ನುವ ಅಹಂ ಭಾವನೆಯಿಂದ ವರ್ತಿಸಬಾರದು, ಹಾಗು ಕಾಂಗ್ರೆಸ್ ಕಾರ್ಯಕರ್ತರು ನನ್ನ ವಿರುದ್ಧ ಅಪಪ್ರಚಾರ ಮಾಡುವ ಮೂಲಕ ತಾಲ್ಲೂಕಿನ ಜನತೆಯನ್ನು ದಿಕ್ಕು ತಪ್ಪಿಸುತ್ತಿದ್ದು ಮತದಾರರು ಕಿವಿಕೊಡದಂತೆ ಜಾಗರೂಕರಗಿರಬೇಕೆಂದು ತಿಳಿಸಿದರು.

ಕುಮಾರಸ್ವಾಮಿಯವರು ಮೊದಲ ಬಾರಿಗೆ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾದಾಗ ನಾನು ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು ಸಹ ಮುಖ್ಯಮಂತ್ರಿಗಳು ಮತ್ತು ಅಂದಿನ ಸಾರಿಗೆ ಸಚಿವರಾಗಿದ್ದ ಚಲುವರಾಯಸ್ವಾಮಿಯವರ ಬಳಿ ತೆರಳಿ ಕಿತ್ತೂರು ಮತ್ತು ರಾವಂದೂರು ಗ್ರಾಮಗಳಲ್ಲಿ ಬಸ್ ನಿಲ್ದಾಣ ನಿರ್ಮಾಣ ಸೇರಿದಂತೆ ಪಟ್ಟಣದಲ್ಲಿ ಸಾರಿಗೆ ಘಟಕ ನಿರ್ಮಾಣಕ್ಕೆ ಸಹ ಮನವಿ ಸಲ್ಲಿಸಿದ್ದೆ ಮತ್ತು ತಾಲ್ಲೂಕಿನ ಅಭಿವೃದ್ಧಿ ವಿಷಯವಾಗಿ ಹಲವು ದೂರದೃಷ್ಟಿಯ ಶಾಶ್ವತ ಕಾಮಗಾರಿಗಳಿಗೂ ಸಹ ಸಂಬಂಧಿಸಿದ ಇಲಾಖಾ ಸಚಿವರ ಬಳಿ ಮನವಿ ಸಲ್ಲಿಸಿ ಅನುದಾನ ಮಂಜೂರು ಮಾಡಿಸಲಾಗಿತ್ತು ಇದರ ಸಂಬಂಧ ದಾಖಲಾತಿಗಳನ್ನು ಪರಿಶೀಲಿಸಿದರೆ ಸತ್ಯ ತಿಳಿಯಲಿದೆ ಆದರೆ ಅಂದು ಶಾಸಕರಾಗಿದ್ದವರು ಇಂದು ಮಾಜಿಯಾಗಿ ತಾಲ್ಲೂಕಿನ ಶಾಶ್ವತ ಕಾಮಗಾರಿಗಳೆಲ್ಲ ನನ್ನ ಕಾಲದಲ್ಲಿ ನಡೆದಿದ್ದು ಎಂದು ಹುಂಬುತನದ ಹೇಳಿಕೆ ನೀಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ, ಕಳೆದ 3ವರ್ಷಗಳಿಂದ ಸುಮ್ಮನಿದ್ದ ವಿರೋಧಿಗಳು ಚುನಾವಣೆ ಸಮೀಪಿಸುತ್ತಿರುವಂತೆ ಹುತ್ತದಿಂದ ಎದ್ದ ಹಾವಿನಂತೆ ಒಂದೇ ಬಾರಿಗೆ ಸುಳ್ಳು ಆರೋಪಗಳನ್ನು ಬುಸುಗುಡುತ್ತಿರುವುದು ಅವರ ಘನತೆಗೆ ತಕ್ಕದ್ದಲ್ಲ, ಅವರ ಕಾಲದಲ್ಲಿಯೂ ತಾಲ್ಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳಾಗಿವೆ ಅದಕ್ಕೆ ನನ್ನ ಆಕ್ಷೇಪಗಳಿಲ್ಲ ಆದರೆ ಮಾಜಿಯಾದ ಮೇಲೆಯೂ ನಾನು ಕಾಮಗಾರಿಗಳಿಗೆ ಚಾಲನೆ ನೀಡಿದ ಎಲ್ಲವನ್ನೂ ನನ್ನ ಅವಧಿಯಲ್ಲಿನ ಕಾಮಗಾರಿಗಳು ಎಂದು ಜನರನ್ನು ದಿಕ್ಕು ತಪ್ಪಿಸುವ ಕೆಲಸ ನಾಚಿಕೆಗೇಡಿನ ಸಂಗತಿ ಎಂದರು.

ಮಾಜಿ ಶಾಸಕರು ಮಂಜೂರು ಮಾಡಿಸಿ ತಂದಿದ್ದ ಅನುದಾನದಿಂದಲೇ ತಾಲ್ಲೂಕಿನಲ್ಲಿ ಇಂದಿಗೂ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿದೆಯೇ ಎಂದು ಸ್ವತಃ ಜೆಡಿಎಸ್ ಕಾರ್ಯಕರ್ತರೇ ಅಭಿವೃದ್ಧಿ ಕಾಮಗಾರಿಗಳಿಗಾಗಿ ಅವರ ಗ್ರಾಮಗಳಿಗೆ ತೆರಳಿದಾಗ ನನ್ನನ್ನು ಪ್ರಶ್ನಿಸುವ ಮಟ್ಟಿಗೆ ಕಾಂಗ್ರೆಸ್ ಕಾರ್ಯಕರ್ತರು ತಾಲ್ಲೂಕಿನ ಜನತೆಗೆ ಹೂ ಮುಡಿಸುವ ಕೆಲಸ ಮಾಡುತ್ತಿದ್ದಾರೆ ಇವರ ಮಾತಿಗೆ ಜೆಡಿಎಸ್ ಕಾರ್ಯಕರ್ತರು ಮರುಳಾಗಬಾರದು, ಶಾಸಕರಾಗಿದ್ದ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ನನ್ನ ತಕರಾರಿಲ್ಲ ಆದರೆ ಮಾಜಿ ಆದ ಮೇಲೆಯೂ ನಾನು ಚಾಲನೆ ನೀಡುವ ಕಾಮಗಾರಿಗಳನ್ನು ನನ್ನ ಅವಧಿಯದು ಎಂದು ಹೇಳಿಕೊಂಡು ಬೆಂಬಲಿಗರಿಂದ ಶಿಳ್ಳೆ ಗಿಟ್ಟಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ, ಅವರಿಗೆ ವಯಸ್ಸಾಗಿದ್ದು ಅರಳೋ ಮರುಳೋ ಎನ್ನುವಂತೆ ಬರೀ ಸುಳ್ಳು ಹೇಳಿಕೊಂಡು ನನ್ನ ವಿರುದ್ಧ ಆರೋಪ ಮಾಡುತ್ತಿರುವುದು ಅವರ ಘನತೆಗೆ ಸರಿಯಲ್ಲ ಎಂದರು.

ಕಾಡಂಚಿನ ಗ್ರಾಮವಾದ ಕೋಗಿಲವಾಡಿಗೆ ಈಗಾಗಲೇ 66 ಲಕ್ಷ ಅನುದಾನ ನೀಡಿ ಶಾಲಾ ಕಟ್ಟಡ ಹಾಗೂ ರಸ್ತೆ ಅಭಿವೃದ್ದಿ ಪಡಿಸಲಾಗಿದೆ ಅಲ್ಲದೆ ಅಕ್ಕಪಕ್ಕದ ಹಬಟೂರು, ಲಕ್ಷ್ಮಿಪುರ, ಚೌತಿ, ಮುತ್ತೂರು ಸೇರಿದಂತೆ ಇತರೆ ಗ್ರಾಮಗಳ ಅಭಿವೃದ್ದಿಗೆ 30 ಕೋಟಿ ಹಣ ಮಂಜೂರು ಮಾಡಿಸಿ ಅಭಿವೃದ್ಧಿ ಕಾಮಗಾರಿ ಚಾಲನೆಯಲ್ಲಿದೆ, ಶಾಸಕನಾದಾಗಿನಿಂದ ಯಾವುದೇ ಗ್ರಾಮಕ್ಕೂ 25 ಲಕ್ಷ ಕಡಿಮೆ ಅನುದಾನ ನೀಡಿಲ್ಲ, ಮುಂದಿನ ದಿನಗಳಲ್ಲಿ ಎಲ್ಲಾ ಕಾಡಂಚಿನ ಗ್ರಾಮ ಸೇರಿ ತಾಲೂಕಿನ ವಿವಿಧೆಡೆ ಹಂತಹಂತವಾಗಿ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಪುಟ್ಟರಾಜು, ಗ್ರಾ.ಪಂ ಸದಸ್ಯರಾದ ದಿನೇಶ್, ಸಿದ್ದೇಗೌಡ, ವೆಂಕಟೇಶ, ಕಾಳೇಗೌಡ, ಜಯಶೀಲ, ರತ್ನಮ್ಮ, ವಸಂತ, ರಘುನಾಥ್, ಜಯಂತ್, ರವಿ, ರಘು, ಕುಮಾರ್, ಸತೀಶ್, ಜಗದೀಶ, ಜಿ.ಪಂ ಸದಸ್ಯ ಕೆ.ಎಸ್ ಮಂಜುನಾಥ್ ಪುತ್ರ ಯಶುಗೌಡ ಜಿ.ಪಂ ಸದಸ್ಯ ಜಯಕುಮಾರ್, ತಾ.ಪಂ ಸದಸ್ಯ ಈರಯ್ಯ, ಚೌತಿ ಗ್ರಾ.ಪಂ ಅಧ್ಯಕ್ಷೆ ಗೌರಿ, ಉಪಾಧ್ಯಕ್ಷ ಬೂದಿತಿಟ್ಟು ರವಿಚಂದ್ರ, ಸದಸ್ಯರಾದ ಗೌರಮ್ಮ, ರವಿ, ಲಕ್ಷ್ಮಣಪಟೇಲ್, ಶೇಖರ್, ಸ್ವಾಮಿ, ಮಾಜಿ ಸದಸ್ಯ ಗೋವಿಂದೇಗೌಡ, ರಾಮಚಂದ್ರು, ಮುಖಂಡರಾದ ಅಣ್ಣೇಗೌಡ, ಪಾಪೇಗೌಡ, ಎಸ್ಆರ್ ಎಸ್ ಗೌಡ, ಶಂಕರ್, ಕಾಂತರಾಜ್, ಮುತ್ತೇಗೌಡ, ಸಂತೋಷ್, ಪವನ್, ವೆಂಕಟೇಶ್, ತಾ.ಪಂ ಸಹಾಯಕ ನಿರ್ದೇಶಕ ರಘುನಾಥ್, ಆರ್ಡಬ್ಲ್ಯುಎಸ್ ಎಇಇ ಶಿವಕುಮಾರ್, ದೈಹಿಕ ಪರಿವೀಕ್ಷಕ ರಘುನಾಥ್, ಕಂದಾಯ ನಿರೀಕ್ಷಕ ಪಾಂಡುರಂಗ, ಪಿಡಿಒ ಮೋಹನ್, ಜಿ.ಪಂ ಎಇ ಸುಭಾಷ್, ಸಾರಿಗೆ ಘಟಕ ವ್ಯವಸ್ಥಾಪಕ ದರ್ಶನ್ ರಾಮಚಂದ್ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಮುಖಂಡರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top