ಶಾಸಕ ಕೆ ಮಹದೇವ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪಿಂಚಣಿ ವೇತನ ಮಂಜೂರಾತಿ ಪತ್ರ ಮತ್ತು ಪೋಡಿ ಮುಕ್ತ ಅಭಿಯಾನ ದ ಜಮೀನಿನ ಪಹಣಿ ನಕ್ಷೆ ವಿತರಿಸಿ ಮಾತನಾಡಿ ಸರ್ಕಾರಿ ಸೌಲಭ್ಯಗಳನ್ನು ಸಾರ್ವಜನಿಕರಿಗೆ ನೀಡಲು ಅಧಿಕಾರಿಗಳು ವಿಳಂಬ ನೀತಿ ಅನುಸರಿಸದೆ ಶೀಘ್ರ ದೊರಕಿಸಿಕೊಡುವ ಮೂಲಕ ಅವರ ಸಂಕಷ್ಟಗಳಿಗೆ ಸ್ಪಂದಿಸಿ ಪಾರದರ್ಶಕ ಕರ್ತವ್ಯ ನಿರ್ವಹಿಸಬೇಕು. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಕೇವಲ ಕಾರ್ಯಕ್ರಮಕ್ಕೆ ಸೀಮಿತವಾಗದೆ ಉತ್ತಮ ಪ್ರಚಾರದ ಮೂಲಕ ಸಾರ್ವಜನಿಕರಿಗೆ ಸದುಪಯೋಗವಾಗುವ ನಿಟ್ಟಿನಲ್ಲಿ ಅಧಿಕಾರಿಗಳು ನಿಗಾ ವಹಿಸುವಂತೆ ಸೂಚಿಸಿ ಸಾರ್ವಜನಿಕರು ಕೊರೋನಾ ಸೋಂಕಿನ ಬಗ್ಗೆ ನಿರ್ಲಕ್ಷ್ಯ ತಾಳಿದೆ ಲಸಿಕೆ ಪಡೆಯುವಂತೆ ಕೋರಿದರು ಈ ವೇಳೆ ಗ್ರಾಮಸ್ಥರು ಗ್ರಾಮದ ಕೆರೆ ದುರಸ್ತಿ, ಆಟದ ಮೈದಾನಕ್ಕೆ ಸ್ಥಳ ನಿಗದಿ, ರಸ್ತೆ ಮತ್ತು ಚರಂಡಿ ನಿರ್ಮಾಣ, ಸರ್ಕಾರಿ ಜಾಗ ಒತ್ತುವರಿ ತೆರವು ಸೇರಿದಂತೆ ಸರಕಾರಿ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅಕ್ರಮಗಳ ತನಿಖೆ ನಡೆಸುವಂತೆ ಕೋರಿದರು. ಮನವಿಗೆ ಸ್ಪಂದಿಸಿದ ಶಾಸಕರು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.
ಗ್ರಾಮೀಣ ಪ್ರದೇಶದ ಸಾರ್ವಜನಿಕ ಸಮಸ್ಯೆಗಳ ಪರಿಹಾರ ಸಂಬಂಧ ತಾಲೂಕು ಆಡಳಿತ ವತಿಯಿಂದ ವಿವಿಧ ಇಲಾಖೆ ಸಹಯೋಗದಲ್ಲಿ ಹಳ್ಳಿಕಡೆ ಜಿಲ್ಲಾಧಿಕಾರಿಗಳ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ ತಿಳಿಸಿದರು.
ಗ್ರಾಮೀಣ ಭಾಗದ ಜನರ ಸಮಸ್ಯೆಗಳಾದ ಪಿಂಚಣಿ ವೇತನ, ಜಮೀನು ಸರ್ವೆ, ಪಹಣಿ ಮತ್ತು ನಕ್ಷೆ ಪಡೆಯುವುದು ಸೇರಿದಂತೆ ಇತರ ಸಮಸ್ಯೆಗಳ ಪರಿಹಾರಕ್ಕಾಗಿ ಸಾರ್ವಜನಿಕರು ಸಂಬಂಧಿಸಿದ ಇಲಾಖೆಗಳನ್ನು ಸಂಪರ್ಕಿಸಲು ಪಟ್ಟಣ ಪ್ರದೇಶಗಳಿಗೆ ಧಾವಿಸುವುದರಿಂದ ಸಮಯ ಹಣದ ವ್ಯರ್ಥ ತಪ್ಪಿಸುವ ಉದ್ದೇಶದಿಂದ ಅಧಿಕಾರಿಗಳು ಅವರ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಬಗೆಹರಿಸಲು ಸರ್ಕಾರದ ವಿನೂತನ ಕಾರ್ಯಕ್ರಮ ಹಳ್ಳಿಕಡೆ ಜಿಲ್ಲಾಧಿಕಾರಿಗಳ ನಡಿಗೆ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಟಿ ರಂಗಸ್ವಾಮಿ, ತಾಲೂಕು ಪಂಚಾಯಿತಿ ಇಒ ಡಿ.ಸಿ ಶೃತಿ, ಶಿರಸ್ತೇದಾರ್ ಟ್ರಿಜಾ, ಉಪತಹಸೀಲ್ದಾರ್ ಶಶಿಧರ್, ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕ ಚಿಕ್ಕಣ್ಣ, ಸರ್ವೆಯರ್ ಎಂಕೆ ಪ್ರಕಾಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್, ಸಿಡಿಪಿಓ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ, ಕಂದಾಯ ಅಧಿಕಾರಿ ಆನಂದ್, ಪಿಡಿಒ ಮನು, ಆಹಾರ ನಿರೀಕ್ಷಕ ಸಣ್ಣಸ್ವಾಮಿ, ಪಿಡಬ್ಲ್ಯೂಡಿ ಎಇಇ ಜಯಂತ್, ಜಿಲ್ಲಾ ಪಂಚಾಯಿತಿ ಎಇಇ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.