ಶೈಕ್ಷಣಿಕ ಪ್ರಗತಿಗಾಗಿ ಶೈಕ್ಷಣಿಕ ಅದಾಲತ್ ಕಾರ್ಯಕ್ರಮ ಅತ್ಯವಶ್ಯಕ ವಾದದ್ದು ಎಂದು ಶಾಸಕ ಕೆ. ಮಹದೇವ ತಿಳಿಸಿದರು. 20/03/2021

ಪಟ್ಟಣದ ಆದಿಚುಂಚನಗಿರಿ ಕಲ್ಯಾಣಮಂಟಪದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಶೈಕ್ಷಣಿಕ ಅದಾಲತ್  ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು.  ಶೈಕ್ಷಣಿಕ ಅದಾಲತಿನ ಮೂಲಕ   ಶೈಕ್ಷಣಿಕಾತ್ಮಕ ಅನೇಕ ವಿಷಯಗಳನ್ನು ಅಧ್ಯಯನ ಮಾಡಲು ಮತ್ತು ಗಳಿಸಲು ಸಾಧ್ಯವಾಗಿದ್ದು, ಪ್ರತಿ ಶಿಕ್ಷಕರು ಕೂಡ ಈ ಮೂಲಕ ವಿಷಯವಾರು ಹಾಗೂ ತರಗತಿವಾರು  ಸಂಪನ್ಮೂಲ ಕ್ರೂಢೀಕರಣ ಮಾಡಬಹುದು.ಈ ಮೂಲಕ  ಶೈಕ್ಷಣಿಕ ಪ್ರಗತಿಗೆ  ರೂಪುರೇಷೆ ಸಿದ್ಧಪಡಿಸಲು ಸಾಧ್ಯವಿದೆ. ಇದಲ್ಲದೆ ಪ್ರತಿ ಶಿಕ್ಷಕರಿಗೆ ಬೇಕಾಗುವ ಸೇವಾ ಅವಧಿ, ವೇತನ ಸೇರಿದಂತೆ ಇನ್ನಿತರ ವೈಯಕ್ತಿಕ ದಾಖಲೆಗಳ ಮಾಹಿತಿಗಳನ್ನು  ಶಿಕ್ಷಕರು ಪಡೆಯಬಹುದು. ಇದರಿಂದಾಗಿ ತಮ್ಮ ತಪ್ಪುಗಳನ್ನು ಕೂಡ  ಸರಿಪಡಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದರು.  ತಾಲೂಕಿನ ಅನೇಕ ಶಿಕ್ಷಕರು ನನ್ನ ಬಳಿ ಪ್ರತಿನಿತ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಮತ್ತು ಶಿಕ್ಷಣವನ್ನು ಉತ್ತಮ ಪಡಿಸುವ ಬಗ್ಗೆ ಚರ್ಚಿಸುತ್ತಾರೆ. ಆದ್ದರಿಂದ ಇಲಾಖೆಯ ಬಗ್ಗೆ ನನಗೆ ಸಂಪೂರ್ಣ ಅರಿವಿದ್ದು  ಶಿಕ್ಷಣಕ್ಕೆ ಯಾವುದೇ ಸಮಸ್ಯೆಗಳಿದ್ದರೂ ನಾನು ಪ್ರಾಮಾಣಿಕವಾಗಿ ಪರಿಹರಿಸುವ ಕಾರ್ಯ ಮಾಡುತ್ತೇನೆ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ನಿಮ್ಮೊಂದಿಗೆ ಸಹಕರಿಸುತ್ತೇನೆ ಎಂದು ತಿಳಿಸಿದರು.

  ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ. ತಿಮ್ಮೇಗೌಡ ಮಾತನಾಡಿ ಜಿಲ್ಲೆಯಲ್ಲಿಯೇ ಪ್ರಥಮವಾಗಿ ತಾಲೂಕಿನಲ್ಲಿ ಶೈಕ್ಷಣಿಕ ಅದಾಲತ್ ಕಾರ್ಯಕ್ರಮವನ್ನು  ಪ್ರಾರಂಭಿಸಿದ್ದೇವೆ. ಈ ಮೂಲಕ ಶಿಕ್ಷಕರು ತಮ್ಮ ವೃತ್ತಿಗೆ ಸಂಬಂಧಿಸಿದಂತೆ ಮೂಲ ದಾಖಲೆಗಳ ಮಾಹಿತಿಯನ್ನು ಪಡೆಯಲು ಮತ್ತು ತಪ್ಪುಗಳನ್ನು ಸರಿಪಡಿಸಿ ಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಏಕೆಂದರೆ ಅನೇಕ ನೌಕರರು ತಮ್ಮ ಪುಸ್ತಕದಲ್ಲಿ ತಮ್ಮ ಕುಟುಂಬದ ನಾಮನಿರ್ದೇಶನ ಸದಸ್ಯರನ್ನು ಕೂಡ ಗುರುತಿಸದೆ ಅಕಾಲಿಕ  ಮರಣಹೊಂದಿದರೆ ಅಂತಹ  ಕುಟುಂಬದವರು ವೃತ್ತಿಯಿಂದ ವಂಚಿತರಾಗುತ್ತಾರೆ. ಆದ್ದರಿಂದ ಶಿಕ್ಷಕರು ತಮ್ಮ ಎಲ್ಲಾ ಮೂಲ ದಾಖಲೆಗಳನ್ನು ಪರಿಶೀಲಿಸಿ ಕೊಳ್ಳಬೇಕು.  ತಮಗೆ ಬರಬೇಕಾದ ವೇತನ ಸೇರಿದಂತೆ ಇನ್ನಿತರ ಸವಲತ್ತುಗಳನ್ನು ಪಡೆಯಲು ಜಾಗೃತರಾಗಬೇಕು. ನಿಮ್ಮ ಸಮಸ್ಯೆಗಳನ್ನು ಬರವಣಿಗೆಯಲ್ಲಿ ನೀಡಿದರೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದರು. 

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಿರೂಪ, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಟಿ.ರಂಗಸ್ವಾಮಿ, ಪುರಸಭೆ ಅಧ್ಯಕ್ಷ ಮಂಜುನಾಥ್ ಸಿಂಗ್, ಶಿಕ್ಷಕರ ಸಂಘದ ಅಧ್ಯಕ್ಷರಾದ ರಾಮಚಂದ್ರ,ನಾಗಶೆಟ್ಟಿ, ಶಿವಮೂರ್ತಿ, ದೇವರಾಜು, ಭೂಮಾಪನ ಇಲಾಖೆಯ ಎಂ.ಕೆ.ಪ್ರಕಾಶ್, ಶಾಸಕರ ಆಪ್ತ ಕಾರ್ಯದರ್ಶಿ ಜಿ.ಸಿ. ಮಹದೇವ್ ಹಾಗೂ ತಾಲೂಕಿನ ಶಿಕ್ಷಕರು, ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top