ಶಾಸಕ ಕೆ ಮಹದೇವ್ 5.90 ಕೋಟಿ ವೆಚ್ಚದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು 26/03/2021

ಮಾಲಂಗಿ ಇಂದ ಅಳಲೂರು ಸೇರುವ ರಸ್ತೆಯ 2  ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ, ಹುಣಸೂರು ತಲಕಾವೇರಿ ರಸ್ತೆಯಿಂದ ಉತ್ತೇನ ಹಳ್ಳಿ ಸೇರುವ ರಸ್ತೆಯ 1.40 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ, ಎಂ.ಶೆಟ್ಟಿ ಹಳ್ಳಿ ರಸ್ತೆಯಿಂದ ಗಂಗೂರು ಸೇರುವ ರಸ್ತೆಯ 1.80 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ, ಹಾಗು ಕೆಲ್ಲೂರು ಗ್ರಾಮದಲ್ಲಿ 70 ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ತಾಲೂಕಿನಲ್ಲಿ ಬಹಳಷ್ಟು ಮೂಲಭೂತ ಸಮಸ್ಯೆಗಳಿದ್ದು, ನನ್ನ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ ಆದರೆ ಸಂಪೂರ್ಣ ಅಭಿವೃದ್ಧಿಗೆ ಕೇವಲ ಐದು ವರ್ಷ ಸಾಕಾಗುವುದಿಲ್ಲ ಆದ್ದರಿಂದ ಮತ್ತೊಮ್ಮೆ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಲು ತಾಲೂಕಿನ ಜನತೆ ಸಹಕಾರ ನೀಡಿದರೆ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಮನವಿ ಮಾಡಿದರು.

 ತಾಲೂಕಿನಲ್ಲಿ ಕಾಡಂಚಿನ ಗ್ರಾಮಗಳು ಆನೆ ಹಾವಳಿ ಸೇರಿದಂತೆ ಇನ್ನಿತರೆ ಕಾಡು ಪ್ರಾಣಿಗಳಿಂದ ಸಂಕಷ್ಟಕ್ಕೆ ಒಳಗಾಗಿದ್ದು, ನಾವು ಬೆಳೆದ ಬೆಳೆಗಳನ್ನು ಕಾಡು ಪ್ರಾಣಿಗಳು  ನಾಶಪಡಿಸುತ್ತಿವೆ ಎಂದು ಸಾರ್ವಜನಿಕರು ನನಗೆ  ತಿಳಿಸಲಾಗಿ,ನಾನು ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಿ ಕಾಡಂಚಿನಲ್ಲಿ ಕಂದಕ  ಗಳ ಬದಲಾಗಿ   ರೈಲ್ವೆ ಕಂಬಿ  ಬ್ಯಾರಿಕೇಡ್ ಗಳನ್ನು ನಿರ್ಮಿಸಲು ಒತ್ತಾಯ ಮಾಡಿದ್ದೇನೆ ಅಲ್ಲದೆ ಬುಡಕಟ್ಟು ಸಮುದಾಯದವರಿಗೆ ಐಟಿಡಿಪಿ ವತಿಯಿಂದ ವಾಸಿಸಲು ನೂರು ಮನೆಗಳನ್ನು ನಿರ್ಮಿಸಲು ಅನುಮೋದನೆ ಪಡೆದಿದ್ದೇನೆ. ಇದರ ಜೊತೆಗೆ ಹೈನುಗಾರಿಕೆಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುವ ರೈತರಿಗೆ ಜಾನುವಾರುಗಳ ಚಿಕಿತ್ಸೆಗಾಗಿ ಪಶು ವೈದ್ಯ  ಆಸ್ಪತ್ರೆ ನಿರ್ಮಾಣ ಹಾಗೂ ಇದರ ನಿರ್ವಹಣೆಗೆ ಸಿಬ್ಬಂದಿಗಳ ನೇಮಕದ ಬಗ್ಗೆಯೂ ಸರ್ಕಾರದ ಗಮನ ಸೆಳೆದಿದ್ದು ಅತಿ ಶೀಘ್ರದಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಹಾಗೂ ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಬರುತ್ತಿದ್ದು  ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿ ಜಯಶಾಲಿಯಾಗಿ ಮಾಡಬೇಕು ಎಂದರು.

 ಕೊರೊನಾದ  ಎರಡನೇ ಅಲೆಯು ಪ್ರಾರಂಭವಾಗಿದ್ದು ಪ್ರತಿ ಪ್ರತಿಯೊಬ್ಬರು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಅಲ್ಲದೆ ಇದರ ನಿರ್ಮೂಲನೆಗಾಗಿ ಸರ್ಕಾರ ಉಚಿತ ವ್ಯಾಕ್ಸಿನ್ ನೀಡುತ್ತಿದ್ದು ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರಲ್ಲದೆ ನಾಡಿನ ಅಭಿವೃದ್ಧಿಯ ಜವಾಬ್ದಾರಿ ಒಂದು ಕಡೆಯಾದರೆ ಮತ್ತೊಂದು ಕಡೆ ನಾಡಿನ ಜನತೆಯ ಜೀವರಕ್ಷಣೆ ಕೂಡ ಸರ್ಕಾರದ ಮತ್ತು ಜನಪ್ರತಿನಿಧಿಗಳ ಗುರಿಯಾಗಿದೆ. ಆದ್ದರಿಂದ ಜನರ ಜೀವ ರಕ್ಷಣೆಯನ್ನು ಮೊದಲ ಆದ್ಯತೆಯನ್ನಾಗಿಸಿ  ಕಾರ್ಯನಿರ್ವಹಿಸುತ್ತಿದ್ದು ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

 ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ.ರಂಗಸ್ವಾಮಿ, ಸದಸ್ಯ ಟಿ. ಈರಯ್ಯ, ತಹಸೀಲ್ದಾರ್ ಶ್ವೇತ ಎನ್ ರವೀಂದ್ರ,  ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ದೇಗೌಡ, ಕ್ಷೇತ್ರ ಶಿಕ್ಷಣ ಅಧಿಕಾರಿ ವೈ.ಕೆ.ತಿಮ್ಮೇಗೌಡ, ಎಇಇ ದಿನೇಶ್, ಜಯಂತ್,  ಮಂಜುನಾಥ್, ಭೂಮಾಪನ ಇಲಾಖೆಯ ಎಂ.ಕೆ. ಪ್ರಕಾಶ್,  ತಾ ಪಂ ಸಹಾಯಕ ನಿರ್ದೇಶಕ ರಘುನಾಥ್,  ಕಂದಾಯ ಇಲಾಖೆಯ ರಾಜಸ್ವ  ನಿರೀಕ್ಷಕ ಪಾಂಡು, ಗ್ರಾಮ ಲೆಕ್ಕಾಧಿಕಾರಿ ಭವಾನಿ ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top