
ಪಿರಿಯಾಪಟ್ಟಣ : ಜಲಶಕ್ತಿ ಅಭಿಯಾನವನ್ನು ಎಲ್ಲಾ ಪಂಚಾಯಿತಿಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಅಂತರ್ಜಲ ಅಭಿವೃದ್ದಿಗೆ ಒತ್ತು ನೀಡಬೇಕು ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಚೌತಿ ಗ್ರಾಮಪಂಚಾಯಿತಿಯಲ್ಲಿ ತಾಲೂಕಿನ 2021-22ನೇ ಸಾಲಿನ ತಾಲೂಕು ಪಂಚಾಯಿತಿ ಮನರೇಗಾ ಯೋಜನೆ ಕ್ರೀಯಾಯೋಜನೆಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಪ್ರಧಾನಿ ಮೋದಿಯವರು ಜಲಸಂಪತ್ತನ್ನು ಉಳಿಸುವ ಮೂಲಕ ದೇಶದಲ್ಲಿ ಜಲಕ್ಷಾಮವನ್ನು ದೂರಮಾಡಲು ಈ ಯೋಜನೆಯನ್ನು ಜಾರಿಗೊಳಿಸಿದ್ದು. ಮನರೇಗಾ ಯೋಜನೆಯಲ್ಲಿ ಇದಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಮೂಲಕ ತಾಲೂಕಿನ ಕೆರೆಕಟ್ಟೆಗಳ ಅಭಿವೃದ್ದಿ ಪಡಿಸುವುದಲ್ಲದೆ ಜಲಮೂಲಗಳನ್ನು ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಜಲದ ಕೊರತೆ ಉಂಟಾಗದ0ತೆ ಮಾಡಬೇಕಿದೆ. ಇವುಗಳಿಂದ ಅಂತರ್ಜಲ ಅಭಿವೃದ್ದಿಯಾಗಿ ವ್ಯವಸಾಯದ ರೈತರು ಮತ್ತು ಕುಡಿಯುವ ನೀರಿನ ನಿರ್ವಹಣೆಗೆ ಸಹಕಾರಿಯಾಗಲಿದೆ ಆದ್ದರಿಂದ ಪ್ರತಿಯೊಬ್ಬ ಗ್ರಾ.ಪಂ. ಪಿಡಿಒಗಳು ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಬೇಕು ಮತ್ತು ಜನರು ಇದರ ಸದುಪಯೋಗವನ್ನು ಪಡೆದುಕೊಂಡು ಯೋಜನೆಯ ಯಶಸ್ಸಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ತಾಲೂಕು ಪಂಚಾಯಿತಿ ಇಒ ಡಿಸಿ ಶೃತಿಮಾತನಾಡಿ ಈ ಬಾರಿ ತಾಲೂಕಿನಲ್ಲಿ ಮನರೇಗಾ ಯೋಜನೆಯಡಿ ಜಲಶಕ್ತಿ ಅಭಿಯಾನಕ್ಕೆ ಹೆಚ್ಚಿನ ಒತ್ತು ನೀಡಿದ್ದು ತಾಲೂಕಿನಲ್ಲಿ ಇರುವ ಕೆರೆಕಟ್ಟೆ, ಗೋಕಟ್ಟೆ, ಕಲ್ಯಾಣಿ ಮುಂತಾದವುಗಳನ್ನು ಅಭಿವೃದ್ದಿ ಪಡಿಸಲಾಗುವುದು. ಅಲ್ಲದೆ ಚೆಕ್ಡ್ಯಾಮ್ಗಳ ನಿರ್ಮಾಣ, ಮಳೆನೀರು ಕುಯ್ಲು ಮುಂತಾದವುಗಳಿಗೆ ಹೆಚ್ಚಿನ ಅದ್ಯತೆ ನೀಡಲಾಗಿದೆ. ಒಟ್ಟು 34 ಗ್ರಾಮಪಂಚಾಯಿತಿಗಳಲ್ಲಿ 37,79.477 ರೂಗಳ ಒಟ್ಟು 7,77,942 ಮಾನವದಿನಗಳು ಹಾಗು 3451 ಕಾಮಗಾರಿಗಳನ್ನು ಮಹಾತ್ಮಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಕ್ರಿಯಾಯೋಜನೆ ಅನುಮೋದನೆ ನೀಡಲಾಗಿದೆ. ಇವುಗಳ ಪೈಕಿ ಪ್ರತಿ ಪಂಚಾಯಿತಿಗೆ ಒಂದು ಚೆಕ್ಡ್ಯಾಂ ನಿರ್ಮಾಣ, 9 ಕಲ್ಯಾಣಿಗಳ ಅಭಿವೃದ್ದಿ 24 ಕೃಷಿ ಹೊಂಡ ನಿರ್ಮಾಣ ಹೀಗೆ ಜಲಶಕ್ತಿ ಅಭಿಯಾನದಡಿ ಮಳೆಗಾಲಕ್ಕು ಮುನ್ನ ಕಾಮಗಾರಿಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭಧಲ್ಲಿ ತಾ.ಪಂ.ಸ್ಥಾಯಿಸಮಿತಿ ಅಧ್ಯಕ್ಷ ಎ.ಟಿ.ರಂಗಸ್ವಾಮಿ, ಗ್ರಾಮಪಂಚಾಯಿತಿ ಅಧ್ಯಕ್ಷೆ ಗೌರಿ, ಉಪಾಧ್ಯಕ್ಷ ರವಿಚಂದ್ರ, ತಹಸೀಲ್ದಾರ್ ಕೆ.ಚಂದ್ರಮೌಳಿ, ತಾ.ಪಂ.ಎಡಿ ರಘುನಾಥ್, ಎಇಇ ಜಯಂತ್, ಮಂಜುನಾಥ್, ಬಿಇಒ ವೈ.ಕೆ.ತಿಮ್ಮೇಗೌಡ, ಚೆಸ್ಕಾಂ ಎಇಇ ಅನಿಲ್, ಪಿಡಿಒ ಪ್ರಶಾಂತ್, ಮುಖಂಡರಾದ ಗೋವಿಂದೇಗೌಡ, ರಾಮೇಗೌಡ ಸೇರಿದಂತೆ ಮತ್ತಿತರರು ಹಾಜರಿದ್ದರು.