
ಸಾರ್ವಜನಿಕರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಉದ್ದೇಶದಿಂದ ಕೆಎಂಎಫ್ ಆಯುರ್ವೇದಿಕ್ ಅಂಶಗಳನ್ನೊಳಗೊಂಡ 6 ರೀತಿಯ ಹಾಲು ಹಾಗೂ 1 ಕಷಾಯದ ಉತ್ಪಾದನೆ ಆರಂಭಿಸಿದ್ದು ಮೈಮುಲ್ ವತಿಯಿಂದಲೂ ಇವುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ಮೈಮುಲ್ ಅಧ್ಯಕ್ಷ ಪಿಎಂ ಪ್ರಸನ್ನ ತಿಳಿಸಿದರು.
ನಗರದ ಆಲನಹಳ್ಳಿಯಲ್ಲಿರುವ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ರೋಗನಿರೋಧಕ ಶಕ್ತಿ ಹೆಚ್ಚಿಸುವ 6 ರೀತಿಯ ಹಾಲು ಹಾಗೂ 1 ಕಷಾಯವನ್ನು ಮಾರುಕಟ್ಟೆಗೆ ಪರಿಚಯಿಸಿದ್ದೇವೆ ತುಳಸಿ ಹಾಲು, ಅಶ್ವಗಂಧ ಹಾಲು, ಕಾಳುಮೆಣಸು ಹಾಲು, ಲವಂಗ ಹಾಲು, ಶುಂಠಿ ಹಾಲು ಹಾಗೂ ಅರಿಶಿನ ಹಾಲು (ಹಳದಿ ಹಾಲು) ಮಾರುಕಟ್ಟೆಯಲ್ಲಿ ಲಭ್ಯವಿದೆ 1 ಕಷಾಯವನ್ನು ಸಹ ಪರಿಚಯಿಸಲಾಗಿದೆ. ಈ ಉತ್ಪನ್ನಗಳನ್ನು 200 ಮಿಲಿ ಲೀಟರ್ ಬಾಟಲಿಗಳಲ್ಲಿ ಲಭ್ಯವಿದ್ದು 1 ಬಾಟಲಿಗೆ 20 ರೂ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.
ಆಯುರ್ವೇದಿಕ್ ಹಾಲು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ, ಮಧುಮೇಹ, ರಕ್ತದೊತ್ತಡ ಇರುವವರು ಇದನ್ನು ಬಳಸಿದರೆ ಬಹಳ ಒಳ್ಳೆಯದು ಇದರಲ್ಲಿ ಸಾರಭೂತ ತೈಲಗಳು ಇರುವುದರಿಂದ ಚರ್ಮದ ಕಾಯಿಲೆಗಳನ್ನು ನಿಯಂತ್ರಿಸಬಹುದು ಮನುಷ್ಯನ ಜೀರ್ಣಾಂಗ ಕಾರ್ಯವನ್ನು ಉತ್ತಮಗೊಳಿಸುತ್ತದೆ ಜೀವ ವಿರೋಧಿ ಶಕ್ತಿಗಳನ್ನು ತಡೆಗಟ್ಟುವ ಅಂಶಗಳನ್ನು ಹೊಂದಿರುವುದರಿಂದ ಅರ್ಬುದ ರೋಗ ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ, ಜ್ವರ, ನೆಗಡಿ ಮತ್ತು ಕೆಮ್ಮು ತಡೆಗಟ್ಟುತ್ತವೆ ಎಂದು ಮಾಹಿತಿ ನೀಡಿದರು.
ಕಾಳುಮೆಣಸಿನ ಹಾಲು ರೋಗನಿರೋಧಕ ಶಕ್ತಿ ನೀಡುತ್ತದೆ, ಶುಂಠಿ ಹಾಲು ಸಾಮಾನ್ಯ ರೋಗಗಳಾದ ನೆಗಡಿ ಕೆಮ್ಮನ್ನು ತಡೆಗಟ್ಟುತ್ತದೆ, ಪ್ರತಿಯೊಂದು ಆಯುರ್ವೇದಿಕ್ ಹಾಲು ಒಂದೊಂದು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ, ಪ್ರಸ್ತುತ ಮಾರುಕಟ್ಟೆಯಲ್ಲಿ 200 ಲೀಟರ್ ಲಭ್ಯವಿದ್ದು ಗ್ರಾಹಕರ ಪ್ರತಿಕ್ರಿಯೆಗೆ ಹಾಗೂ ಬೇಡಿಕೆಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ಹಾಲನ್ನು ಪೂರೈಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಡಿ ಅಶೋಕ್ ಮಾರ್ಕೆಟಿಂಗ್ ಮ್ಯಾನೇಜರ್ ಎಸ್ ಎಂ ಪ್ರದೀಪ್ ಕೆಎಸ್ ಜಗದೀಶ್ ಹಾಜರಿದ್ದರು.